ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು- ಗುಣಮಟ್ಟದ ಶಿಕ್ಷಣ ಸವಾಲು: ಮೀರಿ ನಿಲ್ಲಲು ಸಲಹೆ

ಕೂಳೂರಿನಲ್ಲಿ ಯೆನೆಪೋಯ ಕಲಾ, ವಿಜ್ಞಾನ, ವಾಣಿಜ್ಯ, ಮ್ಯಾನೇಜ್‌ಮೆಂಟ್ ಸಂಸ್ಥೆಗಳ ಕಟ್ಟಡ ಉದ್ಘಾಟನೆ
Last Updated 14 ನವೆಂಬರ್ 2022, 14:06 IST
ಅಕ್ಷರ ಗಾತ್ರ

ಮಂಗಳೂರು: ‘ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಎದುರು ಇರುವ ದೊಡ್ಡ ಸವಾಲಾಗಿದ್ದು ಅದನ್ನು ಮೀರಿ ನಿಲ್ಲಲು ಪ್ರಯತ್ನಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸಿ.ಎನ್‌ ಸಲಹೆ ನೀಡಿದರು.

ಯೆನೆಪೋಯ ಡೀಮ್ಡ್ ವಿಶ್ವವಿದ್ಯಾಲಯ ಕೂಳೂರಿನಲ್ಲಿ ನಿರ್ಮಿಸಿರುವ ಕಲಾ, ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಗಳ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ದೊಡ್ಡ ಸಾಧನೆಯಲ್ಲ. ಆದರೆ, ಒಳ್ಳೆಯ ಶಿಕ್ಷಣ ನೀಡಲು ಬೇಕಾದ ಕಾರ್ಯಯೋಜನೆಗಳನ್ನು ಹಾಕಿಕೊಳ್ಳುವುದು ಮುಖ್ಯ. ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವುದರಿಂದ ಹಿಡಿದು ಸೂಕ್ಷ್ಮ ಸಂಗತಿಗಳ ಕಡೆಗೂ ಗಮನ ನೀಡಬೇಕು. ಉತ್ತಮ ಶಿಕ್ಷಣ ನೀಡುವುದರಲ್ಲಿ ಯೆನೆಪೋಯ ಸಂಸ್ಥೆ ಮುಂಚೂಣಿಯಲ್ಲಿ ಇದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಸ್ವಾತಂತ್ರ್ಯೋತ್ತರ ಭಾರತದ ಕ್ರಾಂತಿಕಾರಿ ಬೆಳವಣಿಗೆಯಾಗಿದ್ದು ಸಮಾಜದ ಪರಿವರ್ತನೆಗೆ ಇದು ನೆರವಾಗಲಿದೆ. ಈ ನೀತಿ ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳುವ ಶಕ್ತಿ ಭಾರತಕ್ಕೆ ಸಿಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ‘ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ವಿದ್ಯಾರ್ಥಿಗಳು ಸಮಾಜ ಮತ್ತು ದೇಶವನ್ನು ಪ್ರೀತಿಸುವುದನ್ನು ಮರೆಯಬಾರದು’ ಎಂದರು.

ಐಕ್ಯೂ ಜೊತೆ ಇತರ ಕ್ಯೂ ಮರೆಯಬೇಡಿ: ಇದು ಬುದ್ಧಿಮತ್ತೆಯ ಕಾಲ. ಅಂಕ ಗಳಿಕೆಗೆ ಈಗ ಹೆಚ್ಚು ಮಾನ್ಯತೆ ಇಲ್ಲ. ಇಂಟೆಲಿಜೆನ್ಸ್ ಕೋಷ್ಯೆಂಟ್‌ (ಐಕ್ಯೂ) ಈಗಿನ ಯುವ ಪೀಳಿಗೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ ಐಕ್ಯೂ ಗಳಿಸುವ ಭರದಲ್ಲಿ ಇಕ್ಯೂ ಮತ್ತು ಎಸ್‌ಕ್ಯೂಗಳನ್ನು ಮರೆಯಬಾರದು ಎಂದು ಶಾಸಕ ಯು.ಟಿ. ಖಾದರ್ ಸಲಹೆ ನೀಡಿದರು.

ಇಕ್ಯು ಎಂದರೆ ಇಮೋಷನಲ್ ಕೋಷ್ಯೆಂಟ್‌ ಮತ್ತು ಎಸ್‌ಕ್ಯೂ ಎಂದರೆ ಸ್ಪಿರಿಚುವಲ್ ಕೋಷ್ಯೆಂಟ್‌ ಎಂದ ಅವರು, ಯುವಜನತೆ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ, ಸೆಲ್ಫಿ ತೆಗೆಯುತ್ತಾ ಅವರು ಸೆಲ್ಫಿಶ್ (ಸ್ವಾರ್ಥಿ) ಆಗುತ್ತಿದ್ದಾರೆ ಎಂದರು. ಅಧ್ಯಾತ್ಮದ ಬಗ್ಗೆಯೂ ಈಗಿನವರಿಗೆ ಆಸಕ್ತಿ ಇಲ್ಲ. ದೇವರ ಭಯ ಇಲ್ಲದಿದ್ದರೆ ಹಾದಿ ತಪ್ಪುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದರು. ಫಾಸ್ಟ್ ಫುಡ್ ತಿಂದು ಸಿಕ್ಕಾಪಟ್ಟೆ ವೇಗ ಪಡೆದುಕೊಂಡಿರುವ ಯುವಜನರಿಗೆ ಎತ್ತ ಓಡುತ್ತಿದ್ದಾರೆ ಎಂಬುದೇ ತಿಳಿದಿರುವುದಿಲ್ಲ ಎಂದು ಅವರು ನುಡಿದರು.

ಮೇಯರ್ ಜಯಾನಂದ ಅಂಚನ್, ಯೆನೆಪೋಯ ಸಂಸ್ಥೆಗಳ ಅಧ್ಯಕ್ಷ ಮೊಹಮ್ಮದ್ ಕುಞಿ, ಯೆನೆಪೋಯ ವಿವಿ ಕುಲಪತಿ ಅಬ್ದುಲ್ಲ ಕುಞಿ, ಉಪಕುಲಪತಿ ಬಿ.ಎಚ್‌. ಶ್ರೀಪತಿ ರಾವ್‌, ರಿಜಿಸ್ಟ್ರಾರ್‌ ಗಂಗಾಧರ ಸೋಮಯಾಜಿ, ಕಾಲೇಜಿನ ಪ್ರಾಂಶುಪಾಲ ಅರುಣ್ ಭಾಗವತ್‌, ನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್ ಇದ್ದರು.

ಕನ್ನಡ ಮರೆತ ಸಚಿವರು; ಎಚ್ಚರಿಸಿದ ಶಾಸಕ

ಕಾರ್ಯಕ್ರಮ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲೇ ನಡೆದಿತ್ತು. ಎರಡು ವಾರಗಳ ಹಿಂದಷ್ಟೇ ರಾಜ್ಯೋತ್ಸವ ಆಚರಿಸಿದ್ದರೂ ಸಚಿವ ಅಶ್ವತ್ಥ ನಾರಾಯಣ್, ಶಾಸಕ ಭರತ್ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್‌ ಮುಂತಾಗಿ ಎಲ್ಲರೂ ಇಂಗ್ಲಿಷ್‌ನಲ್ಲೇ ಭಾಷಣ ಮಾಡಿದರು. ಶಾಸಕ ಯು.ಟಿ. ಖಾದರ್ ಕನ್ನಡ ಮಿಶ್ರಿತ ಇಂಗ್ಲಿಷ್‌ ಮಾತನಾಡಿದರು. ಆದರೆ, ಸ್ಥಳೀಯ ಭಾಷೆ ಕಲಿಯುವಂತೆ ಹೊರನಾಡಿನವರಿಗೆ ಸಲಹೆ ನೀಡಿದರು.

ಭಾಷಣದ ಆರಂಭದಲ್ಲಿ, ಎಲ್ಲರಿಗೂ ಕನ್ನಡ ಗೊತ್ತಿದೆ ಅಲ್ವಾ ಎಂದು ಕೇಳಿದರು. ಆಗ ಸಭಾಂಗಣದಿಂದ ಇಲ್ಲ...ಇಲ್ಲ.. ಎಂಬ ಮಾತು ಕೇಳಿ ಬಂತು. ಕನ್ನಡ ಗೊತ್ತಿಲ್ಲದವರು ಕೈ ಎತ್ತಿ ಎಂದು ಹೇಳಿದಾಗ ಯಾರೂ ಪ್ರತಿಕ್ರಿಯಿಸಲಿಲ್ಲ. ಇಲ್ಲಿ ಕನ್ನಡ ಕಲಿಯಬೇಕು ಎಂದು ಹೇಳಿದ ಖಾದರ್ ‘ಹೆಚ್ಚು ಭಾಷೆಗಳನ್ನು ಕಲಿತರೆ ಅನುಕೂಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT