ಶಬರಿಮಲೆ ವಿಚಾರ: ಕೇಂದ್ರ ಸರ್ಕಾರದಿಂದ ದ್ವಂದ್ವ ನಿಲುವು -ಯು.ಟಿ. ಖಾದರ್ ಆರೋಪ

7

ಶಬರಿಮಲೆ ವಿಚಾರ: ಕೇಂದ್ರ ಸರ್ಕಾರದಿಂದ ದ್ವಂದ್ವ ನಿಲುವು -ಯು.ಟಿ. ಖಾದರ್ ಆರೋಪ

Published:
Updated:

ಮಂಗಳೂರು: ಶಬರಿಮಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಅದನ್ನು ಪಾಲನೆ ಮಾಡಬೇಕಾಗಿರುವ ಕೇರಳ ಸರ್ಕಾರದ ಕರ್ತವ್ಯ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ತಡೆ ನೀಡಬಹುದು. ಆದರೆ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಚಿವರು, ಈ ವಿಷಯದಲ್ಲಿ ಮೌನವಾಗಿದ್ದು, ತಮ್ಮ ಸಂಸದರನ್ನು ಕೇರಳಕ್ಕೆ ಕಳುಹಿಸಿ, ಅಲ್ಲಿನ ಶಾಂತಿ–ಸುವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ನೆರವು ಒದಗಿಸಬೇಕು. ಅದನ್ನು ಬಿಟ್ಟು, ಅಲ್ಲಿನ ಶಾಂತಿ–ಸುವ್ಯವಸ್ಥೆ ಹಾಳು ಮಾಡುವುದು ಸರಿಯಲ್ಲ ಎಂದರು.

ರಾಜಕೀಯ ಮಾಡುವುದಿಲ್ಲ: ಶಬರಿಮಲೆ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಷಯವನ್ನು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಶಬರಿಮಲೆ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಅಲ್ಲಿನ ವಿದ್ಯಮಾನಗಳ ಸಾಧಕ–ಬಾಧಕಗಳ ಕುರಿತು ನಾನು ಮಾತನಾಡುವುದಿಲ್ಲ. ಯುವಕನಾಗಿದ್ದಾಗ 18 ಬಾರಿ ಮಾಲೆ ಧರಿಸಿ ಶಬರಿಮಲೆಗೆ ಭೇಟಿ ನೀಡಿದ್ದೇನೆ. ಸೌಹಾರ್ದ, ಸಾಮರಸ್ಯ, ಭಕ್ತಿ, ವಿಶ್ವಾಸ, ನಂಬಿಕೆಯ ಮೇಲೆ ಅಲ್ಲಿಗೆ ಭೇಟಿ ನೀಡಿದ್ದೇನೆ. ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಷ್ಟೇ ಹೇಳಿದರು.

ಜಿಲ್ಲೆಯ 67 ರೈತರ ಸಾಲಮನ್ನಾ: ರಾಜ್ಯ ಸರ್ಕಾರ ರೈತರ ಸಾಲಮನ್ನಾ ಪ್ರಕ್ರಿಯೆಯನ್ನು ಆರಂಭಿಸಿದ್ದು, ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ನಂತರ ಅಧಿಕಾರಿಗಳು ಸಾಲಮನ್ನಾ ಮಾಡಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 67,627 ರೈತರಿಗೆ ಸಾಲಮನ್ನಾ ಪ್ರಯೋಜನ ದೊರೆಯಲಿದ್ದು, ಒಟ್ಟು ₹562.13 ಕೋಟಿ ಸಾಲ ಮನ್ನಾ ಆಗಲಿದೆ. ಈಗಾಗಲೇ ₹96.68 ಕೋಟಿಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ ಎಂದರು.

ಅದಾಗ್ಯೂ ಬಿಜೆಪಿ ರಾಜಕೀಯ ಕಾರಣಕ್ಕಾಗಿ ಸಾಲ ಮನ್ನಾ ವಿರೋಧಿಸುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಮುಖಂಡರು, ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ರೈತರ ಸಾಲಮನ್ನಾ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !