ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್ ಹಗರಣ ವಿದ್ಯಾರ್ಥಿಗಳ ಪಾಲಿಗೆ ಬಹು ದೊಡ್ಡ ದುರಂತ: ಶಾಸಕ ಅಶೋಕ್‌ಕುಮಾರ್ ರೈ

Published 17 ಜೂನ್ 2024, 13:48 IST
Last Updated 17 ಜೂನ್ 2024, 13:48 IST
ಅಕ್ಷರ ಗಾತ್ರ

ಪುತ್ತೂರು: ‘ನೀಟ್ ಪರೀಕ್ಷೆಯಲ್ಲೇ ಹಗರಣ ನಡೆದಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ನಮ್ಮ ದೇಶದ ಭ್ರಷ್ಟತೆಗೆ ಸಾಕ್ಷಿಯಾಗಿದೆ. ಕಷ್ಟಪಟ್ಟು ಓದಿದ ಸಾವಿರಾರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದಾಗಿ ಅನ್ಯಾಯವಾಗಿದ್ದು, ಇದು ವಿದ್ಯಾರ್ಥಿ ಹಾಗೂ ಪೋಷಕರ ಪಾಲಿಗೆ ಬಹು ದೊಡ್ಡ ದುರಂತ’ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ನೀಟ್, ಕೆಸಿಇಟಿ ಮತ್ತು ಜೆಇಇಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುತ್ತೂರಿನ ಶಾಸಕರ ಕಚೇರಿಯಲ್ಲಿ ರೈ ಎಸ್ಟೇಟ್ಸ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ಸನ್ಮಾನಿಸಿ ಅವರು ಮಾತನಾಡಿದರು.

‘ನಮ್ಮ ಕ್ಷೇತ್ರದಲ್ಲಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ, ನಮ್ಮಲ್ಲಿನ ಅನೇಕ ವಿದ್ಯಾರ್ಥಿಗಳು ನೀಟ್‌ನಲ್ಲೂ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ನಮ್ಮ ಕ್ಷೇತ್ರದ ಪ್ರತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ನನ್ನ ಬೆಂಬಲವಿದೆ. ಯಾವುದೇ ಸಹಾಯ ಬೇಕಾದರೂ ಸಂಪರ್ಕಿಸಬಹುದು’ ಎಂದರು.

ಟ್ರಸ್ಟ್‌ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಬಡವರ ಕಣ್ಣೀರು ಒರೆಸುವುದು ಕೂಡಾ ಅಭಿವೃದ್ಧಿಯ ಒಂದು ಭಾಗವಾಗಿದೆ. ಈ ಕೆಲಸ ಪುತ್ತೂರಿನ ಶಾಸಕರಿಂದ ನಡೆಯುತ್ತಿದೆ ಎಂದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಬೇಕು, ಅವರು ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಉದ್ದೇಶದಿಂದ ಶಾಸಕರು ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದಾರೆ. ಹಲವು ಉದ್ಯಮವನ್ನು ಪುತ್ತೂರಿಗೆ ತರುತ್ತಿದ್ದಾರೆ ಎಂದು ನಿಹಾಲ್ ಪಿ.ಶೆಟ್ಟಿ ಹೇಳಿದರು.

ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಪಂಜಿಗುಡ್ಡೆ ಈಶ್ವರಭಟ್ ಭಾಗವಹಿಸಿದ್ದರು.

ಟ್ರಸ್ಟ್‌ನ ಪ್ರಮುಖ ನಿಹಾಲ್ ಪಿ.ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಪ್ರಮುಖ ಯೋಗಿಶ್ ಸಾಮಾನಿ ವಂದಿಸಿದರು. ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ, ರಚನಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT