ಭಾನುವಾರ, ಜುಲೈ 3, 2022
25 °C
ಉಡುಪಿ–ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರ

ವಿಧಾನ ಪರಿಷತ್‌ ಚುನಾವಣೆ: ಬಿಜೆಪಿಗೆ ಶಕ್ತಿ ಹೆಚ್ಚಿಸಿಕೊಳ್ಳುವ ಗುರಿ

ಉದಯ ಯು. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಧಾನ ಪರಿಷತ್ತಿಗೆ ದ್ವಿಸದಸ್ಯತ್ವ ಕ್ಷೇತ್ರವಾಗಿರುವ ದಕ್ಷಿಣ ಕನ್ನಡದಲ್ಲಿ, ಕಾಂಗ್ರೆಸ್‌ (ಮಂಜುನಾಥ ಭಂಡಾರಿ) ಹಾಗೂ ಬಿಜೆಪಿಯಿಂದ (ಕೋಟ ಶ್ರೀನಿವಾಸ ಪೂಜಾರಿ) ತಲಾ ಒಬ್ಬ ಅಭ್ಯರ್ಥಿ ಕಣದಲ್ಲಿರುವುದರಿಂದ ಆಯ್ಕೆಯ ವಿಚಾರದಲ್ಲಿ ಬಹು ದೊಡ್ಡ ಕುತೂಹಲವೇನೂ ಉಳಿದುಕೊಂಡಿಲ್ಲ.

‘ಆಯ್ಕೆಯು ಅವಿರೋಧ ಆಗಿರಬಾರದು’ ಎಂಬ ಕಾರಣಕ್ಕೆ, ಎಸ್‌ಡಿಪಿಐನ ಶಾಫಿ ಕೆ. ಬೆಳ್ಳಾರೆ ಅವರೂ ಕಣಕ್ಕೆ ಇಳಿದಿದ್ದಾರೆ. ಇವರು ಎಷ್ಟು ಮತಗಳನ್ನು ಸೆಳೆಯುತ್ತಾರೆ ಎಂಬುದರ ಮೇಲೆ, ಕಾಂಗ್ರೆಸ್‌ನ ‘ಶಕ್ತಿ ಎಷ್ಟು’ ಎಂಬುದು ತೀರ್ಮಾನವಾಗುತ್ತದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸೇರಿದಂತೆ ಕ್ಷೇತ್ರದಲ್ಲಿ ಒಟ್ಟಾರೆ 6,040 ಮತದಾರರಿದ್ದಾರೆ. ಅಭ್ಯರ್ಥಿಯ ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ 2,200 ಮತಗಳು ಸಾಕು. ಆಯಾ ಪಕ್ಷದವರೇ ಹೇಳಿಕೊಳ್ಳುವಂತೆ, ಬಿಜೆಪಿಗೆ 3,200 ಹಾಗೂ ಕಾಂಗ್ರೆಸ್‌ಗೆ 2,100 ಮತಗಳಿವೆ. ಕಾಂಗ್ರೆಸ್‌ಗೆ ನೂರು ಮತಗಳ ಕೊರತೆ ಇದ್ದು, ಬಿಜೆಪಿಯಿಂದ ಮತಗಳನ್ನು ಸೆಳೆದುಕೊಳ್ಳಬಹುದೇ ಅಥವಾ ಬಿಜೆಪಿಯೇ ಇತರ ಪಕ್ಷಗಳಿಂದ ಮತಗಳನ್ನು ಸೆಳೆದುಕೊಂಡು ಬೀಗುವುದೇ ಎಂಬ ಕುತೂಹಲ ಮಾತ್ರ ಈಗ ಉಳಿದುಕೊಂಡಿದೆ.

ಹಾಗೆ ನೋಡಿದರೆ, ಜಿಲ್ಲೆಯಲ್ಲಿ ಚುನಾವಣಾ ಪೂರ್ವದಲ್ಲಿ ನಡೆದ ಬೆಳವಣಿಗೆಗಳೇ ಹೆಚ್ಚು ಕುತೂಹಲ ಮೂಡಿಸಿದ್ದವು. ಚುನಾವಣಾ ದಿನಾಂಕ ಘೋಷಣೆಯಾಗಿ ಕೆಲವೇ ದಿನಗಳಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಎಸ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌ ಘೋಷಿಸಿದ್ದರು. ಮಂಗಳೂರಿನಲ್ಲಿ ಚುನಾವಣಾ ಕಚೇರಿಯನ್ನೂ ತೆರೆದರು. ಎರಡೂ ಪಕ್ಷಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ರಾಜೇಂದ್ರ ಕುಮಾರ್‌ ಅವರ ಸ್ಪರ್ಧೆಯಿಂದಾಗಿ, ಇರುವ ಒಂದು ಸ್ಥಾನವನ್ನೂ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್‌ಗೆ ಎದುರಾದದ್ದು ನಿಜ.

ಈ ಮಧ್ಯೆ, ಉಡುಪಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ರಾಜೇಂದ್ರ ಕುಮಾರ್‌ ಅವರನ್ನು ಬೆಂಗಳೂರಿಗೆ ಕರೆದೊಯ್ದು, ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿಸಿದರು. ಆನಂತರ ‘ರಾಜೇಂದ್ರ ಕುಮಾರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಾರೆ’ ಎಂಬ ಗುಸುಗುಸು ಕೇಳಿಬಂತು. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಇದು ಒಪ್ಪಿಗೆಯಾಗಲಿಲ್ಲ, ಬಿಜೆಪಿಗೂ ಅದು ಬೇಕಿರಲಿಲ್ಲ.

ಈ ಬೆಳವಣಿಗೆಯ ಬಳಿಕ ಹೊಸ ಲೆಕ್ಕಾಚಾರ ಹಾಕಿದ ಬಿಜೆಪಿಯು ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ ಅವರನ್ನೂ ಕಣಕ್ಕಿಳಿಸಿತು. ‘ಬಿಜೆಪಿಯ ಹೆಚ್ಚುವರಿ ಮತಗಳು ಯಾರಿಗೂ ಹೋಗುವುದಿಲ್ಲ’ ಎಂಬ ಪರಿಸ್ಥಿತಿ
ಸೃಷ್ಟಿಯಾಯಿತು.

ಈ ನಡುವೆ, ಜನಸ್ವರಾಜ್‌ ಸಮಾವೇಶಕ್ಕಾಗಿ ಉಡುಪಿಗೆ ಬಂದಿದ್ದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು, ‘ಎಸ್‌ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತೇವೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್‌ಗಳನ್ನು ರಚಿಸಲು ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಘೋಷಿಸಿದರು. ಇದಾಗಿ ಕೆಲವೇ ದಿನಗಳಲ್ಲಿ ರಾಜೇಂದ್ರ ಕುಮಾರ್‌ ತಮ್ಮ ನಾಮಪತ್ರ ಹಿಂತೆಗೆದುಕೊಂಡರು.

ಶಕ್ತಿ ವೃದ್ಧಿಯೇ ಗುರಿ: ಈಗ ಬಿಜೆಪಿ ಮುಂದಿರುವ ಗುರಿ ‘ಕಾಂಗ್ರೆಸ್‌ನ ಶಕ್ತಿ ಇನ್ನಷ್ಟು ಕುಂದಿದೆ’ ಎಂಬ ಸಂದೇಶವನ್ನು ನೀಡುವುದಾಗಿದೆ. ಅದಕ್ಕಾಗಿಯೇ ಕೋಟ ಶ್ರೀನಿವಾಸ ಪೂಜಾರಿ ಪರವಾಗಿ 3,700 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಗುರಿ ಹಾಕಿಕೊಂಡಿದೆ.

‘ಗೊಂದಲ ಸೃಷ್ಟಿಯಾಗಬಾರದೆಂಬ ಕಾರಣಕ್ಕೆ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. 3,700 ಮತಗಳನ್ನು ಪಡೆದು ನಮ್ಮ ಶಕ್ತಿಯನ್ನು ಸಾಬೀತುಪಡಿಸುತ್ತೇವೆ’ ಎಂದು ಬಿಜೆಪಿ ನಾಯಕರು
ಹೇಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು