ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತಡಿಯಲ್ಲಿ ಉತ್ಸಾಹದ ಅಲೆ ಎಬ್ಬಿಸಿದ ಮೋದಿ

ಮಂಗಳೂರು: ‘ರೋಡ್ ಶೋ’ ಮೂಲಕ ಬಿಜೆಪಿ ಮತ ಬುಟ್ಟಿ ಗಟ್ಟಿಗೊಳಿಸಲೆತ್ನಿಸಿದ ಪ್ರಧಾನಿ
Published 15 ಏಪ್ರಿಲ್ 2024, 4:28 IST
Last Updated 15 ಏಪ್ರಿಲ್ 2024, 4:28 IST
ಅಕ್ಷರ ಗಾತ್ರ

ಮಂಗಳೂರು: ಹೂವುಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ಕಮಲದ ಚಿಹ್ನೆಯನ್ನು ಹಿಡಿದು ಅಭಿಮಾನಿಗಳತ್ತ ಕೈ ಬೀಸುತ್ತಾ,  ನಗೆ ಬೀರುತ್ತಾ, ಸಾಗಿದ ಪ್ರಧಾನಿ ನರೇಂದ್ರ ಮೋದಿ ಕಡಲ ತಡಿಯ ನಗರದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹಾಗೂ ಉಡುಪಿ –ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಕ್ಕ ಪಕ್ಕ ನಿಲ್ಲಿಸಿಕೊಂಡ ಮೋದಿ ಮುಂಬರುವ, ‘ಲೋಕಸಭೆ ಚುನಾವಣೆಯಲ್ಲಿ 400ರ ಗಡಿ ದಾಟಲು’ ತಮಗೆ ಆಶೀರ್ವಾದ ಮಾಡುವಂತೆ ಕೋರಿದರು.

ನೆಚ್ಚಿನ ನಾಯಕನ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ತಾಸುಗಟ್ಟಲೆ ನಿಂತುಕೊಂಡು ರಾತ್ರಿವರೆಗೂ ಕಾದಿದ್ದ ಅಭಿಮಾನಿಗಳು ಮೋದಿಯವರ ಆಗಮನವಾಗುತ್ತಿದ್ದಂತೆಯೇ ಖುಷಿಯಿಂದ ಕೇಕೆ ಹಾಕಿದರು. ಪ್ರಧಾನಿಯವರು ನಾರಾಯಣಗುರು ವೃತ್ತದತ್ತ ಆಗಮಿಸುತ್ತಿದ್ದಂತೆಯೇ 'ಮೋದಿ...  ಮೋದಿ... ಘೋಷಣೆ ಮುಗಿಲು ಮುಟ್ಟಿತ್ತು. ಕೆಲವರು ಜೈ ಶ್ರೀರಾಂ, ‘ಆಬ್ ಕೀ ಬಾರ್ ಚಾರ್ ಸೌ ಪಾರ್...’ ಘೋಷಣೆಗಳನ್ನೂ ಕೂಗಿದರು. ‘ಅಲೆ ಬತ್ತೆರ್‌ ಮೋದಿ... (ನೋಡಿ ಮೋದಿ ಬಂದರು)’  ಎಂದು ತುಳುವಿನಲ್ಲೂ ಸಾರಿ ಹೇಳಿದರು. ಕೇಸರಿ ಬಣ್ಣದ ಪೇಟ,  ಶಾಲು, ಟೋಪಿ ಧರಿಸಿದ್ದ ಅಭಿಮಾನಿಗಳಿಗೆ ನೆಚ್ಚಿನ‌ ನಾಯಕನಿಗೆ ಜೈಕಾರ ಹಾಕಿದಷ್ಟೂ ಮನ ತಣಿಯಲಿಲ್ಲ. ಮತ್ತೆ ಮತ್ತೆ ಜೈಕಾರ ಕೂಗಿದರು. ದೂರದಿಂದ ಮೋದಿಯವರ ಮುಖ ಸರಿಯಾಗಿ ಕಾಣಿಸದಿದ್ದಾಗ ತಮ್ಮ ಮೊಬೈಲ್‌ಗಳ ಮೂಲಕ ವಿಡಿಯೊ ಸೆರೆ ಹಿಡಿದು ಅದರ ಮೂಲಕ ಮೋದಿ ದರ್ಶನ ಪಡೆದರು.

ನೂಕುನುಗ್ಗಲು: ಸಂಜೆ 6ರ ವರೆಗೆ ಮೋದಿ ರೋಡ್‌ ಶೋ ಸಾಗುವ ಮಾರ್ಗದಲ್ಲಿ ಅಷ್ಟೇನೂ ಜನ ಸೇರಿರಲಿಲ್ಲ. ಬಿಜೆಪಿ ನಾಯಕರ ಮೊಗದಲ್ಲೂ ‘ಜನ ಸೇರುತ್ತಾರೋ ಇಲ್ಲವೋ ಎಂಬ ದುಗುಡ ಕಾಣಿಸಿತ್ತು. ಆದರೆ ಸಂಜೆ 7 ಗಂಟೆಯಾಗವಷ್ಟರಲ್ಲಿ ಮಾರ್ಗದ ಇಕ್ಕೆಲಗಳಲ್ಲೂ ಜನ ಕಿಕ್ಕಿರಿದು ಸೇರಿದರು. ಮಹಿಳೆಯರು ಮಕ್ಕಳನ್ನೂ ಜೊತೆಯಲ್ಲಿ ಕರೆ ತಂದಿದ್ದರು. ವಯೋವೃದ್ಧರು ಜನಜಂಗುಳಿಯನ್ನು ಸೀಳಿಕೊಂಡು ಬಂದು ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ಉಕ್ಕಿನ ತಡೆಬೇಲಿಗಳ ಬಳಿ ನಿಂತಿದ್ದರು. ಕೆಲವು ಪುಟಾಣಿಗಳು ಹಿರಿಯರ ಹೆಗಲೇರಿ ಮೋದಿ ದರ್ಶನ ಪಡೆದರು. ಮೋದಿ ತೆರೆದ ವಾಹನದಲ್ಲಿ ಸಾಗಿ ಬರುತ್ತಿದ್ದಂತೆಯೇ ಅವರನ್ನು ಹತ್ತಿರದಿಂದ ನೋಡಲು ಪೈಪೋಟಿ ಶುರುವಾಗಿತ್ತು. ಈ ವೇಳೆ ನೂಕುನುಗ್ಗಲೂ ಉಂಟಾಯಿತು.

ಕಾಣದವರಿಗೆ ನಿರಾಸೆ:

ರೋಡ್‌ ಶೋ ಆರಂಭವಾಗುವಾಗಲೇ ಕತ್ತಲಾವರಿಸಿತ್ತು. ಹಾಗಾಗಿ ದೂರದಲ್ಲಿದ್ದ ಕೆಲವರಿಗೆ ಮೋದಿಯವರ ಮುಖ ದರ್ಶನ ಭಾಗ್ಯ ಸಾಧ್ಯವಾಗಲಿಲ್ಲ. ನೆಚ್ಚಿನ ನೇತಾರನ ನೋಡಲು ಸಾಧ್ಯವಾಗದ ಕೆಲವರು ‘ಈ ನೂಕು ನುಗ್ಗಲಿನಲ್ಲಿ ಒದ್ದಾಡುವುದಕ್ಕಿಂತ ಮನೆಯಲ್ಲಿ ಟಿ.ವಿಯಲ್ಲೇ ಕಾರ್ಯಕ್ರಮದ ಲೈವ್‌ ನೋಡ ಬಹುದಿತ್ತು’ ಎಂದು ಗೊಣಗಿದರು.

ಮೋದಿಯವರನ್ನು ಕಾಣಲು ತಾಯಿಯ ಜೊತೆಗೆ ಬಂದಿದ್ದ ಬಾಲಕನೊಬ್ಬ ತಾಯಿಯನ್ನು ಕಾಣದೇ ಕಂಗಾಲಾಗಿದ್ದ. ಪಕ್ಷದ ಕಾರ್ಯಕರ್ತರು ಆತನ ವಿಳಾಸವನ್ನು ಕೇಳಿ, ಸಂತೈಸಿದರು. ಕೆಲವೇ ನಿಮಿಷದಲ್ಲಿ ಮಗನನ್ನು ಹುಡುಕಿಕೊಂಡು ತಾಯಿ ಸ್ಥಳಕ್ಕೆ ಬಂದರು. 

ರೋಡ್ ಶೋ ನೋಡಲು ಕೆಲವರಂತೂ ರಸ್ತೆ ಪಕ್ಕದ ಕಟ್ಟಡಗಳ ಮೆಟ್ಟಿಲುಗಳಲ್ಲಿ ಮೊದಲೇ ಜಾಗ ಹಿಡಿದು ಕಾದಿದ್ದರು. ಇನ್ನು ಕೆಲವರು ರಸ್ತೆ ಪಕ್ಕದ ಆವರಣಗೋಡೆಗಳನ್ನು ಹಾಗೂ ಮರಗಳನ್ನು ಏರಿ ಕಾದು ಕುಳಿತಿದ್ದರು.

ಪೋಟೊ ಕ್ಲಿಕ್ಕಿಸಲು ಹರಸಾಹಸ: ನೆಚ್ಚಿನ ನೇತಾರನ ಫೋಟೊ ಕ್ಲಿಕ್ಕಿಸಲು ಕೆಲವರು ಹರಸಾಹಸ ಪಟ್ಟರು. ಇನ್ನು ಕೆಲವರು ಕಿರು ವಿಡಿಯೊ ರೂಪಿಸಿ ಅದರ ರೀಲ್ಸ್ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಮೋದಿ ಆಗಮನಕ್ಕೆ ಮುನ್ನ ಮಂತ್ರ ಘೋಷ ಮೊಳಗಿತು. ರೋಡ್‌ ಶೋ ಮಾರ್ಗದ ಪಕ್ಕ ಶ್ರೀರಾಮ ಭಜನೆಯನ್ನೂ ಏರ್ಪಡಿಸಲಾಗಿತ್ತು. ಕೊಡಿಯಾಲ್‌ಬೈಲ್‌ ನಲ್ಲಿ ಸನಾತನ ನೃತ್ಯಾಲಯದವರು ಸಮೂಹ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿದರು.

ಲಾಲ್‌ಬಾಗ್‌ನಲ್ಲಿ ಪಾಲಿಕೆ ಕಚೇರಿ ಬಳಿ ಹುಲಿವೇಷ ಕುಣಿತ ಏರ್ಪಡಿಸಲಾಗಿತ್ತು. ಹುಲಿವೇಷಧಾರಿಗಳ ಹೊಟ್ಟೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಭಾವಚಿತ್ರಗಳನ್ನು ಬಿಡಿಸಲಾಗಿತ್ತು. ಮೋದಿ ಬರುವವರೆಗೂ ಹುಲಿವೇಷ ಕುಣಿತ ಪಕ್ಷದ ಬೆಂಬಲಿಗರಿಗೆ ಮನರಂಜನೆ ಒದಗಿಸಿತು.

ಪಿವಿಎಸ್‌ ವೃತ್ತದ ಬಳಿ ಪುಟಾಣಿಗಳು ಶ್ರೀರಾಮ, ಶ್ರೀಕೃಷ್ಣ, ರಾಧೆ, ನಾರದ ಮೊದಲಾದ ಪೌರಾಣಿಕ ಪಾತ್ರಗಳ ವೇಷಧರಿಸಿ ಪ್ರಧಾನಿ ಮೋದಿ ಅವರತ್ತ ಕೈಬೀಡಿದರು. ಪ್ರತಿಯಾಗಿ ಮೋದಿ ಅವರೂ ಪುಟಾಣಿಗಳತ್ತ ಕೈ ಬೀಸಿ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT