ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಂಬೂರಿ ಅರಣ್ಯ’ದಲ್ಲಿ ಹಲವು ಅಚ್ಚರಿ

ಅರಣ್ಯದೊಳಗಿನ ಜಲಪಾತ, ವನಸಂಪತ್ತು ವೀಕ್ಷಿಸಲು ಸಿದ್ಧವಾಗಿದೆ ತೂಗುಸೇತುವೆ
Last Updated 19 ಡಿಸೆಂಬರ್ 2022, 5:38 IST
ಅಕ್ಷರ ಗಾತ್ರ

ಮೂಡುಬಿದಿರೆ: ಅರಣ್ಯ ಸಂರಕ್ಷಣೆ, ಪ್ರಾಣಿ ಸಂಕುಲ, ಸಸ್ಯಸಂಪತ್ತು, ಜಲಸಂಪತ್ತು ಹೀಗೆ ವಿವಿಧ ಆಯಾಮಗಳಲ್ಲಿ ಪರಿಸರದ ಸೊಬಗನ್ನು ಮಕ್ಕಳಿಗೆ ಪರಿಚಯಿಸುವ ವಿಶಿಷ್ಟ ಪ್ರಯತ್ನ ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ಮೂಡುಬಿದಿರೆಯಲ್ಲಿ ವೇದಿಕೆ ಸಿದ್ಧಗೊಂಡಿದೆ.

ಆಳ್ವಾಸ್ ಕ್ಯಾಂಪಸ್‌ಗೆ ತಾಗಿಕೊಂಡಿರುವ ಪರಿಸರ ಪ್ರೇಮಿ ಡಾ.ಎಲ್.ಸಿ ಸೋನ್ಸ್ ಅವರ ಏಳು ಎಕರೆ ಜಾಗದಲ್ಲಿ ಕಾಡಿನ ಪರಿಕಲ್ಪನೆ ಯೊಂದು ಮೂಡಿಬಂದಿದೆ. ಕಾಡನ್ನು ಪ್ರವೇಶಿಸುವ ಮೊದಲು ಅರಣ್ಯ ಇಲಾಖೆಯ ಮಾಹಿತಿ ಕೇಂದ್ರ ವಿದ್ದು, ಇಲಾಖೆಯ ಮಾಹಿತಿಯಿರುವ ಕರಪತ್ರಗಳನ್ನು ಇಲ್ಲಿ ಮಕ್ಕಳಿಗೆ ನೀಡಲಾಗುತ್ತದೆ. ಜತೆಗೆ ಕಾಡು ಪ್ರವೇಶಿಸುವ ಮಾರ್ಗಸೂಚಿಗಳನ್ನು ತಿಳಿಸಲಾಗುತ್ತದೆ.

ಮುಂದಕ್ಕೆ ಹೋದಾಗ ಹುಲಿಯೊಂದು ಬಾಯ್ತೆರದು ನಿಂತಿರುವ ಆಕೃತಿಯಿದ್ದು, ಅದರ ಬಾಯಿಯೊಳಗಿಂದ ಪ್ರವೇಶಿಸ ಬೇಕಾಗುತ್ತದೆ. ಮುಂದಕ್ಕೆ ಸಾಗಿದಾಗ ಸುಮಾರು 40 ಅಡಿ ಉದ್ದದ ಮೊಸಳೆ ಯೊಂದು ಬಾಯ್ತೆರೆದು ಕೊಂಡಿರುವ ದೃಶ್ಯ ನೋಡುವಾಗ ಒಮ್ಮೆ ಭಯ ಹುಟ್ಟಿಸುತ್ತದೆ. ಇದರ ಬಾಯಿಂದ ಒಳಪ್ರವೇಶಿಸಿ ಇನ್ನೊಂದು ಬದಿಯಲ್ಲಿ ಹೊರ ಬರುವಾಗ ಭಯದ ಜತೆಗೆ ಕುತೂಹಲವನ್ನುಂಟು ಮಾಡಲಿದೆ.

ಮುಂದೆ ಕಣ್ಣುಹಾಯಿಸಿದಾಗ ರೈತ ಮತ್ತು ಕಾಡಿಗಿರುವ ಸಂಬಂಧಗಳ ಪರಿಚಯವನ್ನು ಸುಂದರವಾಗಿ ಚಿತ್ರಿಸಲಾಗಿದೆ. ಕಮ್ಮಾರನ ಕಸುಬು, ಆತ ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ, ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ತನ್ನ ನಕ್ಷತ್ರ ಮತ್ತು ರಾಶಿಗೆ ಹೋಲಿಕೆಯಾಗುವ ಅರಣ್ಯ ಸಸಿಗಳ ಮಾಹಿತಿ ಇದನ್ನು ನೋಡುತ್ತಾ ಮುಂದೆ ಹೋದಾಗ ಕಾಡಾಣೆಯ ದರ್ಶನ, ಮತ್ತೊಂದೆಡೆ ವಿಶ್ರಾಂತಿ ಪಡೆಯುತ್ತಿರುವ ಹುಲಿ ಹೀಗೆ ಕಾಡಿನೊಳಗಿನ ನೈಜ ಪ್ರಾಣಿಗಳನ್ನು ನೋಡಿದಷ್ಟೆ ಅನುಭವ ಮತ್ತು ಆನಂದವು ಜಾಂಬೂರಿಯ ಅರಣ್ಯದಲ್ಲಿ ಸಿಗಲಿದೆ.

ನಾಗಬನ ಇದ್ದಲ್ಲಿ ಮರಗಿಡಗಳು ಬೆಳೆಯುತ್ತವೆ, ಹಸಿರು ಉಳಿಯುತ್ತವೆ ಎಂಬುದು ಹಿರಿಯರ ನಂಬಿಕೆ. ಅದರಂತೆ ಇಲ್ಲೊಂದು ನಾಗಬನ, ಪಕ್ಕದಲ್ಲಿ ಜಲಪಾತ, ಅದರಿಂದ ಝಳಝಳ ಎಂದು ಹರಿದು ಬಂದ ನೀರು ಹತ್ತಿರದ ಕೆರೆಯನ್ನು ಸೇರುವ ದೃಶ್ಯ ಒಂದೆಡೆಯಾದರೆ ಕುದುರೆಮುಖದ ಶೋಲ ಅರಣ್ಯವನ್ನು ನೆನಪಿಸುವ ರೀತಿಯಲ್ಲಿ ಸಿದ್ಧಗೊಂಡ ಹಸಿರ ವನ ಈ ಸೌಂದರ್ಯವನ್ನು ತೂಗುಸೇತುವೆ ಮೇಲೆ ನಿಂತು ಕಣ್ತುಂಬಿ ಸಂಭ್ರಮಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ.

ಕಾಡನ್ನು ಇನ್ನೂ ಸುತ್ತಾಡಬೇಕೆಂಬ ಅಪೇಕ್ಷೆ ಇರುವವರಿಗೆ ಕೊನೆಯಲ್ಲಿ ಟ್ರಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗೆ ಆಳ್ವಾಸ್ ಜಾಂಬೂರಿಯ ಅರಣ್ಯ ಪ್ರವೇಶಿಸಿದವರಿಗೆ ಅರಣ್ಯದ ಅನುಭವ ಮತ್ತು ಅನೇಕ ಕುತೂಹಲ, ಅಚ್ಚರಿಗಳನ್ನು ಕಾಣುವ ಅವಕಾಶ ಸಿಗಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಅಳ್ವ ಅವರ ಪರಿಕಲ್ಪನೆಯ ಅರಣ್ಯ ದರ್ಶನಕ್ಕೆ ಪೂರಕವಾಗಿ ಈ ಪ್ರದೇಶವನ್ನು ಸಿದ್ಧಗೊಳಿಸಲು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ. ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ನೇತೃತ್ವದಲ್ಲಿ ಎರಡು ವಾರಗಳಿಂದ 50 ಕಾರ್ಮಿಕರು ದುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT