ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಮಹಿಳೆಯ ಕೊಲೆಯತ್ನ: ಅಪರಾಧಿಗೆ ಐದು ವರ್ಷ ಜೈಲು

Last Updated 4 ಆಗಸ್ಟ್ 2020, 15:40 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಮಿಕ ಮಹಿಳೆಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿ, ಅವರನ್ನು ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಬಜ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ಪೆರ್ಮುದೆಯ ಕಿಟಕಿ ನಿವಾಸಿ ಸುನೀಲ್‌ ಕುಮಾರ್‌ (42) ಎಂಬಾತನಿಗೆ ನ್ಯಾಯಾಲಯ ಐದು ವರ್ಗಳ ಜೈಲು ಶಿಕ್ಷೆ ವಿಧಿಸಿದೆ.

2019ರ ಫೆಬ್ರುವರಿಯಲ್ಲಿ ನಡೆದಿದ್ದ ಎಕ್ಕಾರು ನಿವಾಸಿ ತನುಜಾ (45) ಎಂಬುವವರ ಕೊಲೆ ಯತ್ನ ಪ್ರಕರಣದಲ್ಲಿ ಸುನೀಲ್‌ ಕುಮಾರ್‌ ಅಪರಾಧಿ ಎಂದು ಸಾರಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಜೈಲು ಶಿಕ್ಷೆಯೊಂದಿಗೆ ₹ 11,000 ದಂಡವನ್ನೂ ವಿಧಿಸಿದೆ.

ಮದ್ಯ ವ್ಯಸನಿಯಾಗಿದ್ದ ಅಪರಾಧಿಯು, ನೆರೆಹೊರೆಯ ನಿವಾಸಿಗಳೊಂದಿಗೆ ಸದಾ ಜಗಳವಾಡುತ್ತಿದ್ದ. ತನುಜಾ ಅವರೊಂದಿಗೂ ಪದೇ ಪದೇ ಗಲಾಟೆ ಮಾಡುತ್ತಿದ್ದ. ಈ ಕುರಿತು ಮಹಿಳೆ ಮೂರು ಬಾರಿ ಬಜ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 2019ರ ಫೆ.28ರಂದು ಸಂಜೆ ಕೂಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ತನುಜಾ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ, ಮೊಬೈಲ್‌ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಜ್ಪೆ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಬಜ್ಪೆ ಠಾಣೆಯ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ, ಸುನೀಲ್‌ ಕುಮಾರ್‌ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಒಂಭತ್ತು ಸಾಕ್ಷಿಗಳ ವಿಚಾರಣೆ ನಡೆಸಿ, 19 ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು.

ಮಂಗಳವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು, ‘ಸುನೀಲ್‌ ಕುಮಾರ್‌ ಅಪರಾಧಿ’ ಎಂದು ಘೋಷಿಸಿದರು. ಆರೋಪಿಗೆ ಐದು ವರ್ಷ ಜೈಲು ಮತ್ತು ₹ 11,000 ದಂಡ ವಿಧಿಸಿ ಆದೇಶ ಹೊರಡಿಸಿದರು. ದಂಡದಲ್ಲಿ ₹ 5,000ವನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ಸೂಚಿಸಿದರು.

ಅಪರಾಧಿಯು ನ್ಯಾಯಾಂಗ ಬಂಧನದಲ್ಲೇ ಇದ್ದು, ಶಿಕ್ಷೆ ಮುಂದುವರಿಯಲಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹರೀಶ್ಚಂದ್ರ ಉದ್ಯಾವರ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT