ಮಂಗಳೂರು: ಮಂದ ಬೆಳಕಿನ ಹಿನ್ನೆಲೆಯಲ್ಲಿ ಮಂದ್ರದನಿಯಲ್ಲಿ ಕೇಳಿಬಂದ ಉಜ್ವಾಡ (ಬೆಳಕು)...ಉಜ್ವಾಡ...ಹಾಡಿಗೆ ಏಕತಾರಿಯ ಮಧುರ ಧ್ವನಿ ಸೇರುತ್ತಿದ್ದಂತೆ ವೇದಿಕೆಯಲ್ಲಿ ಬೆಳಕು ವಿಸ್ತರಿಸಿತು. ನಂತರ ದೀಪ ಮತ್ತು ಬೆಳಕಿನದೇ ಮಾತು, ಕಥೆ.
ನಗರದ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮತ್ತು ಜೆಸಿಐ, ಸೇಂಟ್ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಿರುವ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವದ ಮೊದಲ ದಿನ ಪ್ರದರ್ಶನಗೊಂಡ ‘ದೀಪಧಾರಿಣಿ’ ಕೊಂಕಣಿ ಏಕವ್ಯಕ್ತಿ ನಾಟಕವು ವಸ್ತು, ಅಭಿನಯದ ಮೂಲಕ ಪ್ರೇಕ್ಷಕರಿಗೆ ಮುದ ನೀಡಿತು.
ಸುಧಾ ಆಡುಕಳ ಅವರ ಕನ್ನಡ ನಾಟಕವನ್ನು ಕೊಂಕಣಿಗೆ ಅನುವಾದ ಮಾಡಿರುವ ಶ್ರೀವಿದ್ಯಾ ಎಂ.ಆರ್ ತಮ್ಮದೇ ಸಂಸ್ಥೆಯಾದ ಮೈಸೂರಿನ ‘ಅನುಭೂತಿ’ ಮೂಲಕ ರಂಗಕ್ಕೆ ಅಳವಡಿಸಿದ್ದಾರೆ. ಶ್ರೀಪಾದ ಭಟ್ ಅವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದ ಪ್ರದರ್ಶನದಲ್ಲಿ ಶ್ರೀವಿದ್ಯಾ ಅವರೇ ಪಾತ್ರಧಾರಿ.
ದೀಪದ ಮಹತ್ವವನ್ನು ಸಾರುತ್ತ ಆರಂಭವಾಗುವ ಪ್ರದರ್ಶನದ ಮಾತುಗಾರಿಕೆ ಕ್ರಮೇಣ ಮೇಣದ ಬತ್ತಿಯತ್ತ ಹೊರಳುತ್ತದೆ. ಆಮೇಲೆ ಲಾಂಟೀನಿನ ಮಾಹಿತಿ ತೆರೆದುಕೊಳ್ಳುತ್ತದೆ. ಲಾಂಟೀನು ಕಂಡರೆ ಭೂತ ಪಿಶಾಚಿ ಓಡುತ್ತದೆ ಎಂದು ಅಮ್ಮ ಹೇಳಿದ್ದಳು ಎಂದು ಹೇಳುವ ನಾಟಕದ ಪಾತ್ರ, ಎಳೆಯ ಪ್ರಾಯದ ಆ ದಿನಗಳನ್ನು ನೆನೆದು ಬೆಚ್ಚಿಬೀಳುತ್ತದೆ.
ಇದಿಷ್ಟು ಪೂರ್ವರಂಗದಂತೆ ಪ್ರಸ್ತುತಗೊಳ್ಳುವ ಪ್ರದರ್ಶನದ ನೈಜ ತಿರುಳು, ‘ದೀಪಕಗಳ ಬಳಿ ಅನೇಕ ಕಥೆಗಳು ಹುಟ್ಟಿಕೊಳ್ಳುತ್ತವೆ’ ಎಂದು ಹೇಳುವ ಸಂಭಾಷಣೆಯ ಮೂಲಕ ತೆರೆದುಕೊಳ್ಳುತ್ತದೆ. ಮನಸ್ಸು ಹಗುರ ಮಾಡಲು ಕಥೆ ಹೇಳುವಂತೆ ಅಮ್ಮನ ಬಳಿ ಕೇಳಿದಾಗ ಆಕೆ ಹೇಳಿದ ಕಥೆಯನ್ನು ನಾಟಕ ಪ್ರಿಯರ ಮುಂದಿಡುವ ಪಾತ್ರಧಾರಿ ‘ಒಂದೂರಲ್ಲಿ ಒಬ್ಬಳು ದಢೂತಿ ಹೆಂಗಸಿದ್ದಳು, ಸಂಕಟಟಗಳು ತುಂಬಿ ಅವಳು ದಪ್ಪ ಆಗಿದ್ದಳು...’ ಎಂದು ಕಥೆ ಹೇಳಲು ಆರಂಭ ಮಾಡುತ್ತಾರೆ.
ಕಥೆಯು ಮುಂದೆ ಕಥನವಾಗಿ ಮಾರ್ಪಟ್ಟು ಶುಶ್ರೂಷೆಯ ಮಹತ್ವವನ್ನು ಸಾರುತ್ತದೆ. ದೀಪಗಳು ಅವುಗಳ ಕೆಲಸ ಮಾಡುತ್ತವೆ, ಅದರ ಬೆಳನಡಿಯಲ್ಲಿ ನಾವು ಸಾಧನೆ ಮಾಡಬೇಕು. ದೀಪಗಳನ್ನು ಅಡಿಯಾಳಾಗಿ ಮಾಡಿಕೊಳ್ಳಬಾರದು ಎಂಬ ಸಂದೇಶದೊಂದಿಗೆ ಪ್ರದರ್ಶನ ಮುಕ್ತಾಯಗೊಳ್ಳುತ್ತದೆ. ಅತಿ ಸರಳ ರಂಗಸಜ್ಜಿಕೆ, ಕಡಿಮೆ ಪರಿಕರ, ಸುಮಧುರ ಸಂಗೀತ ಮತ್ತು ಹೃದ್ಯ ಬೆಳಕಿನ ವಿನ್ಯಾಸದಿಂದ ಪ್ರದರ್ಶನ ಹೆಚ್ಚು ಆಸ್ವಾದನೀಯವಾಗಿತ್ತು.
ನಾಟಕೋತ್ಸವಕ್ಕೆ ಚಾಲನೆ ನೀಡಿದ ಕೊಂಕಣಿ ನಾಟಕ ಅಕಾಡೆಮಿ ಸಂಚಾಲಕ ಮೆಲ್ವಿನ್ ರಾಡ್ರಿಗಸ್ ಮಾತನಾಡಿ ಕೊಂಕಣಿ ನಾಟಕ ರಂಗದಲ್ಲಿ ಏಕವ್ಯಕ್ತಿ ಪ್ರದರ್ಶನ ಅಪರೂಪ. ಕಲೆಯಲ್ಲಿ ಜೀವಂತಿಕೆ ಇರಬೇಕಾದರೆ ಹೊಸ ಪ್ರಯೋಗಗಳು ಅಗತ್ಯ ಎಂದರು.
ಅರೆಭಾಷೆ ತಜ್ಞ ವಿಶ್ವನಾಥ ಬದಿಕಾನ, ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್, ಉದ್ಯಮಿ ಗುರುದತ್ ಬಂಟ್ವಾಳಕರ್, ಜೀನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.