ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಪತ್ತು: ವಿಕೇಂದ್ರೀಕೃತ ನಿರ್ವಹಣೆ

ಜಿಲ್ಲೆಗೆ ಎರಡು ಎನ್‌ಡಿಆರ್‌ಎಫ್ ತಂಡ: ಜಿಲ್ಲಾಧಿಕಾರಿ
Published 1 ಜೂನ್ 2024, 4:30 IST
Last Updated 1 ಜೂನ್ 2024, 4:30 IST
ಅಕ್ಷರ ಗಾತ್ರ

ಮಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಈ ಬಾರಿ ನಿಗದಿತ ಸಮಯದಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ತಡೆಗೆ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ವಿಪತ್ತು ನಿರ್ವಹಣಾ ಯೋಜನೆ ರೂಪಿಸಿ, ತಂಡವನ್ನು ಸನ್ನದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ 86 ಗ್ರಾಮಗಳನ್ನು ಸಂಭವನೀಯ ಪ್ರವಾಹ ಪೀಡಿತ, ಭೂಕುಸಿತ ಪ್ರದೇಶಗಳಾಗಿ ಗುರುತಿಸಲಾಗಿದೆ. ಒಟ್ಟು 90 ಸಂಭವನೀಯ ಪ್ರವಾಹ ಹಾಗೂ 73 ಸಂಭವನೀಯ ಭೂಕುಸಿತ ಪ್ರದೇಶಗಳ ಬಗ್ಗೆ ನಿಗಾವಹಿಸಲಾಗಿದೆ. ಕಾಳಜಿ ಕೇಂದ್ರಗಳಿಗೆ ಒಟ್ಟು 97 ಸ್ಥಳ ಗುರುತಿಸಲಾಗಿದೆ ಎಂದರು.

ತುರ್ತು ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಫ್) ಜೂನ್ 1ರಂದು ಜಿಲ್ಲೆಗೆ ಬರಲಿದ್ದು, ಒಂದು ತಂಡ ಮಂಗಳೂರು ಮತ್ತು ಇನ್ನೊಂದು ಪುತ್ತೂರಿನಲ್ಲಿ ಇರಲಿದೆ. ಪ್ರಾಕೃತಿಕ ವಿಕೋಪ ಎದುರಾದಲ್ಲಿ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ವಿಪತ್ತು ನಿರ್ವಹಣಾ ಯೋಜನೆ ರೂಪಿಸಲಾಗಿದೆ. ಮಂಗಳೂರು ನಗರದಲ್ಲಿ ಪ್ರತಿ ವಾರ್ಡ್‌ಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಒಟ್ಟು 291 ಇನ್ಸಿಡೆಂಟ್ ಕಮಾಂಡರ್‌ಗಳನ್ನು ನಿಯೋಜಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ಧಾವಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ತಡೆಗೋಡೆ ಇಲ್ಲದ ತೋಡು ಇರುವ ಪ್ರದೇಶಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು, ಸ್ಥಳೀಯರ ಜೊತೆ ತಂಡ ರಚಿಸಿಕೊಂಡು ಇದನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಇಲಾಖೆಗೆ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ವಿದ್ಯುತ್ ಸಂಬಂಧಿತ ಯಾವುದೇ ದೂರು ಇದ್ದಲ್ಲಿ ಆರು ತಾಸಿನ ಒಳಗೆ ಸ್ಪಂದಿಸಿ, ಶೀಘ್ರ ದುರಸ್ತಿಗೊಳಿಸುವಂತೆ ಮೆಸ್ಕಾಂಗೆ ತಿಳಿಸಲಾಗಿದೆ. ಕಡಲ ತೀರದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ತಟ ರಕ್ಷಕರ ಜೊತೆ ಕೆಲಸ ಮಾಡಲು 70 ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮುಲ್ಲೈ ಮುಗಿಲನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT