ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಎನ್‌ಆರ್‌ಐ ಮಕ್ಕಳ ದಾಖಲಾತಿ ಹೆಚ್ಚಳ

ಕೊಲ್ಲಿ ರಾಷ್ಟ್ರಗಳಲ್ಲಿನ ಬಿಕ್ಕಟ್ಟಿನಿಂದ ತವರಿಗೆ ಮರಳಿದ ಪಾಲಕರು
Last Updated 5 ಸೆಪ್ಟೆಂಬರ್ 2021, 6:20 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ಈ ಬಾರಿ ಅನಿವಾಸಿ ಭಾರತೀಯ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚಿದೆ. ಈ ಮೊದಲು ಗಲ್ಫ್‌ ರಾಷ್ಟ್ರಗಳಲ್ಲಿ ಓದುತ್ತಿದ್ದ ಮಕ್ಕಳು, ಇದೀಗ ತವರು ನೆಲದಲ್ಲಿ ಶಿಕ್ಷಣ ಪಡೆಯಲು ಮುಂದಾಗಿದ್ದಾರೆ.

ಕೋವಿಡ್–19ನಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡಿ ರುವವರು ಕುಟುಂಬ ಸಹಿತ ತವರಿಗೆ ಮರಳಿದ್ದು, ತಮ್ಮ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 200ಕ್ಕೂ ಅಧಿಕ ಎನ್‌ಆರ್‌ಐ ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ.

‘ನಮ್ಮ ಶಾಲೆಯೂ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಗಳಲ್ಲಿ ಎನ್‌ಆರ್‌ಐ ಮಕ್ಕಳ ದಾಖಲಾತಿ ಈ ಬಾರಿ ಹೆಚ್ಚಳವಾಗಿದೆ. ಬಹಳಷ್ಟು ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಯೇ ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ’ ಎಂದು ಲೂರ್ಡ್ಸ್‌ ಸೆಂಟ್ರಲ್‌ ಸ್ಕೂಲ್‌ ಪ್ರಾಂಶುಪಾಲ ಫಾ. ರಾಬರ್ಟ್ ಡಿಸೋಜ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಡಿತ ಆಗುತ್ತಿದ್ದು, ಹಲವರು ಉದ್ಯೋಗ ಕಳೆದುಕೊಂಡು ತವರಿಗೆ ಮರಳುತ್ತಿ ದ್ದಾರೆ. ಜೊತೆಗೆ ಗಲ್ಫ್‌ ರಾಷ್ಟ್ರಗಳಿಗಿಂತ ಭಾರತದಲ್ಲಿ ಶೈಕ್ಷಣಿಕ ವೆಚ್ಚ ಕಡಿಮೆಯಾಗಿದ್ದು, ಬಹುತೇಕ ಜನರು ತಮ್ಮ ತವರು ಜಿಲ್ಲೆಗಳಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಲು ನಿರ್ಧರಿಸಿದ್ದಾರೆ.

ಈ ಮೊದಲು 10ನೇ ತರಗತಿ ಉತ್ತೀರ್ಣರಾದ ನಂತರವೇ ಎನ್‌ಆರ್‌ಐ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿಗೆ ಬರುತ್ತಿದ್ದರು. ಇದೀಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಿರುವುದು ವಿಶೇಷವಾಗಿದೆ.

ನಗರದ ಮೌಂಟ್‌ ಕಾರ್ಮೆಲ್‌ ಶಾಲೆಯಲ್ಲಿ ಐದನೇ ತರಗತಿಯಿಂದ ವಿದ್ಯಾಭ್ಯಾಸ ಆರಂಭವಾಗುತ್ತಿದ್ದು, ಈ ವರ್ಷವೇ ಸುಮಾರು 40ಕ್ಕೂ ಅಧಿಕ ಎನ್‌ಆರ್‌ಐ ಮಕ್ಕಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಇನ್ನೂ ಕೆಲ ಮಕ್ಕಳು ಅರ್ಜಿ ಸಲ್ಲಿಸಿದ್ದರೂ, ಸೀಟುಗಳಿಲ್ಲದೇ ಆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಲ್ಲದೆ ಸಿಬಿಎಸ್‌ಇ ನಿಯಮಾವಳಿ ಪ್ರಕಾರ ಒಂದು ತರಗತಿಗೆ ಕೇವಲ 40 ಮಕ್ಕಳಿಗೆ ಮಾತ್ರ ಪ್ರವೇಶ ನೀಡಬಹುದಾಗಿದೆ. ಇದೇ ರೀತಿ ಪ್ರೆಸಿಡೆನ್ಸಿ ಶಾಲೆಯಲ್ಲೂ ಈ ಬಾರಿ 10 ಎನ್‌ಆರ್‌ಐ ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಎನ್‌ಆರ್‌ಐಗಳು ಶಿಕ್ಷಣಕ್ಕಾಗಿ ಕರ್ನಾಟಕವನ್ನೇ ಆಯ್ಕೆ ಮಾಡುತ್ತಿದ್ದು, 2018–19ರಲ್ಲಿ 10,023 ಎನ್‌ಆರ್‌ಐ ಮಕ್ಕಳು ದಾಖಲಾತಿ ಪಡೆದಿದ್ದರು. ಇದು ಇಡೀ ದೇಶದಲ್ಲಿಯೇ ಗರಿಷ್ಠ ಸಂಖ್ಯೆಯ ಎನ್‌ಆರ್‌ಐ ಮಕ್ಕಳು ದಾಖಲೆ ಹೊಂದಿರುವ ರಾಜ್ಯವಾಗಿತ್ತು. ಅದರಲ್ಲಿ ಮಂಗಳೂರಿನಲ್ಲಿಯೇ 100ಕ್ಕೂ ಅಧಿಕ ಮಕ್ಕಳು ವಿವಿಧ ತರಗತಿಗಳಿಗೆ ಪ್ರವೇಶ ಪಡೆದಿದ್ದರು.

ಕೇರಳ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ
ಪದವಿ ಹಾಗೂ ಪದವಿಪೂರ್ವ ಶಿಕ್ಷಣಕ್ಕಾಗಿ ಕಾಸರಗೋಡು ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಮಂಗಳೂರನ್ನೇ ಅವಲಂಬಿಸಿದ್ದಾರೆ. ಇದೀಗ ಕೋವಿಡ್–19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳು, ಅಲ್ಲಿನ ವಿದ್ಯಾರ್ಥಿಗಳು ಮಂಗಳೂರಿಗೆ ಬರಲು ಅಡ್ಡಿಯಾಗಿವೆ. ಇದರ ಪರಿಣಾಮ ಪದವಿ ಪ್ರವೇಶದಲ್ಲಿ ಕೇರಳದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

ನಗರದ ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿ ವರ್ಷ ಕಾಸರಗೋಡು ಜಿಲ್ಲೆಯ 400ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈ ಬಾರಿ ಇದುವರೆಗೆ ಕೇವಲ 50 ಮಂದಿ ಪ್ರವೇಶ ಪಡೆದಿದ್ದಾರೆ. ಇನ್ನು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು, ಮಿಲಾಗ್ರಿಸ್‌ ಸೇರಿದಂತೆ ಇತರ ಕಾಲೇಜುಗಳಲ್ಲೂ ಕಾಸರಗೋಡು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

‘ರಾಜ್ಯ ಸರ್ಕಾರದ ನಿಯಮಗಳು ವಿದ್ಯಾರ್ಥಿಗಳಿಗೆ ತೊಡಕಾಗಿರಬಹುದು. ವಾರಕ್ಕೊಮ್ಮೆ ಆರ್‌ಟಿಪಿಸಿಆರ್ ವರದಿ ಮಾಡಿಸುವುದು, ನಿತ್ಯ ಭಯದಲ್ಲಿಯೇ ಮಂಗಳೂರಿಗೆ ಬಂದು ಹೋಗುವುದು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿರಬಹುದು’ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT