ಮಂಗಳವಾರ, ಮೇ 11, 2021
27 °C
ಎಂಆರ್‌ಪಿಎಲ್‌ ಘಟಕ ಸಿದ್ಧ ಆಗುವವರೆಗೆ ನಾಜೂಕಿನ ನಿರ್ವಹಣೆ ಅಗತ್ಯ

ಆಮ್ಲಜನಕ: ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್–19 2ನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸೋಂಕಿತರ ಸಂಖ್ಯೆಯ ಹೆಚ್ಚಳ ಆಗುತ್ತಿರುವುದರಿಂದ ಜಿಲ್ಲೆಯಲ್ಲಿ ಆಮ್ಲಜನಕದ ನಿರ್ವಹಣೆಯೂ ತುರ್ತಾಗಿ ಆಗಬೇಕಿದೆ.

ಜಿಲ್ಲೆಗೆ ಸದ್ಯದ ಪರಿಸ್ಥಿತಿಯಲ್ಲಿ 8–9 ಟನ್‌ನಷ್ಟು ಆಮ್ಲಜನಕದ ಅಗತ್ಯ ವಿದೆ. ಪ್ರಸ್ತುತ 6.5 ಟನ್‌ ಮಾತ್ರ ಪೂರೈಕೆಯಾಗುತ್ತಿದೆ. ಜಿಂದಾಲ್ ಕಂಪನಿಯಿಂದ ಶೇ 80ರಷ್ಟು ಹಾಗೂ ಪಾಲಕ್ಕಾಡ್‌ನಿಂದ ಶೇ 20ರಷ್ಟು ದ್ರವೀ ಕೃತ ಆಮ್ಲಜನಕ ಪೂರೈಕೆಯಾಗುತ್ತಿದೆ. ಕೇರಳದಲ್ಲಿ ಕೋವಿಡ್‌ ಪರಿಸ್ಥಿತಿ ಬಿಗಡಾಯಿಸಿದರೆ, ಅಲ್ಲಿನ ಆಮ್ಲಜನಕ ಕೇಂದ್ರಗಳನ್ನು ಕೇರಳ ಸರ್ಕಾರ ಸ್ವಾಧೀನ ಪಡಿಸಿಕೊಂಡಲ್ಲಿ, ದಕ್ಷಿಣ ಕನ್ನಡ ಜಿಲ್ಲೆಗೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಂಭವ ಇದೆ.

ಈವರೆಗೆ ನಿತ್ಯ ಪಾಲಕ್ಕಾಡ್‌ನಿಂದ ಆಮ್ಲಜನಕ ಪೂರೈಕೆಯಾಗುತ್ತಿತ್ತು. ಹೀಗಾಗಿ ಯಾವುದೇ ಆತಂಕ ಇರಲಿಲ್ಲ. ಇದೀಗ ಪಾಲಕ್ಕಾಡ್ ಮತ್ತು ಕಾರ್ನಾಡಿ ನಿಂದ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಲಾಗಿದೆ. ಇದರಿಂದ ಸಿಲಿಂಡರ್‌ ರೀಫಿಲ್ಲಿಂಗ್‌ ಘಟಕಗಳಿಂದ ನಿಗದಿತ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿ.

‘ಸದ್ಯ ಬಳ್ಳಾರಿಯಿಂದ ಆಮ್ಲಜನಕ ಬರುತ್ತಿದೆ. ಈವರೆಗೆ ಖಾಸಗಿ ಆಸ್ಪತ್ರೆಗಳಿಗೂ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಕೆಪಿಎಂಇ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ನೇರವಾಗಿ ಸರ್ಕಾರದಿಂದ ಆಮ್ಲಜನಕ ಪಡೆದುಕೊಳ್ಳಬೇಕು. ಜೊತೆಗೆ ಹೊಸ ಪ್ರಕರಣಗಳ ಸಂಖ್ಯೆಯೂ ನಿತ್ಯ ಸಾವಿರದ ಆಸುಪಾಸಿನಲ್ಲಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಮಧ್ಯೆ ಜಿಲ್ಲಾಡಳಿತ ಮತ್ತು ಇಲ್ಲಿನ ಜನಪ್ರತಿನಿಧಿಗಳು ಕೇರಳದಿಂದ ಆಮ್ಲಜನಕ ಪೂರೈಕೆ ಸ್ಥಗಿತವಾಗಿರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಹೆಚ್ಚುವರಿ ಆಮ್ಲಜನಕದ ಬೇಡಿಕೆ ಇಟ್ಟಿದ್ದಾರೆ. ಸದ್ಯ ಕರಾವಳಿ ಭಾಗಕ್ಕೆ ಇತರ ಜಿಲ್ಲೆಗಳಿಂದ ಕೂಡ ರೋಗಿಗಳು ಬರುತ್ತಾರೆ. ಹೀಗಾಗಿ ಆಮ್ಲಜನಕದ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

ತಿಂಗಳಲ್ಲಿ ಎಂಆರ್‌ಪಿಎಲ್‌ ಘಟಕ: ವೆನ್ಲಾಕ್ ಆಸ್ಪತ್ರೆಯಲ್ಲಿ 930 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಎಂಆರ್‌ಪಿಎಲ್‌ ವತಿಯಿಂದ ನಿರ್ಮಿಸಲಾಗುತ್ತಿದೆ. ಈಗಾಗಲೇ ₹1.12 ಕೋಟಿ ಮೊತ್ತದ ಕಾಮಗಾರಿಯನ್ನು ಕಂಪನಿಯೊಂದಕ್ಕೆ ವಹಿಸಲಾಗಿದೆ. ತಿಂಗಳಲ್ಲಿ ಘಟಕ ಕಾರ್ಯಾರಂಭ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟಕದ ಜೊತೆಗೆ ತಾಲ್ಲೂಕು ಆಸ್ಪತ್ರೆಗಳಲ್ಲೂ ಘಟಕಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲ ಘಟಕಗಳು ಕಾರ್ಯಾರಂಭ ಮಾಡಿದರೆ, ಆಮ್ಲಜನಕದ ಕೊರತೆ ಉಂಟಾಗದು ಎನ್ನುವುದು ಅವರ ವಿವರಣೆ.

ಪರ್ಯಾಯ ವ್ಯವಸ್ಥೆ ಏನು?

ಕೇರಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ, ಅಲ್ಲಿನ ಆಕ್ಸಿಜನ್ ಕೇಂದ್ರಗಳನ್ನು ಕೇರಳ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಹುದು. ಆಗ ನಮಗೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪರ್ಯಾಯ ವ್ಯವಸ್ಥೆ ಏನು ಎಂಬ ಬಗ್ಗೆ ಸರ್ಕಾರ ತಿಳಿಸಬೇಕು ಎನ್ನುತ್ತಾರೆ ಶಾಸಕ ಯು.ಟಿ. ಖಾದರ್‌.

ಜಿಂದಾಲ್‌ನಿಂದ ಹೆಚ್ಚುವರಿ ಪೂರೈಕೆ ಮಾಡುವಂತೆ ಸೂಚನೆ ನೀಡಬೇಕು. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

‘ತಮಿಳುನಾಡಿನ ರಾಜಕೀಯ ಶಕ್ತಿಗಳು ಕೇಂದ್ರದ ಮೇಲೆ ಒತ್ತಡ ಹೇರಿ ಜಿಂದಾಲ್‌ನಿಂದ ತಮ್ಮ ರಾಜ್ಯಕ್ಕೆ ಹೆಚ್ಚುವರಿ ಆಮ್ಲಜನಕ ಪೂರೈಕೆಗೆ ಮಾಡಿಕೊಳ್ಳುತ್ತಿವೆ. ನಮ್ಮ ರಾಜ್ಯಕ್ಕೂ ಅದು ಆಗಬೇಕು. ನಮ್ಮ ಸಂಸದರು ಮತ್ತು ಸರ್ಕಾರ ಈ ಬಗ್ಗೆ ಒತ್ತಡ ಹೇರಬೇಕು’ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು