ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಹರಿವು ನಿಲ್ಲಿಸಿದ ನದಿ–ತೊರೆಗಳಲ್ಲಿ ‘ಗುಟುಕು ನೀರು’

ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗದಂತೆ ತಡೆದ ಪಶ್ಚಿಮ ವಾಹಿನಿ ಯೋಜನೆಯ ಕಿಂಡಿ ಅಣೆಕಟ್ಟುಗಳು
Published 13 ಮೇ 2024, 5:21 IST
Last Updated 13 ಮೇ 2024, 5:21 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಲದ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ 2023ರ ಬೇಸಿಗೆಯಷ್ಟು ತೀವ್ರವಾಗಿ ಕಾಡಿಲ್ಲ.  ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ನಡು ನಡುವೆ ಕೆಲವು ಕಡೆ ಮಳೆಯಾಗಿದ್ದು ಇದಕ್ಕೆ ಒಂದು ಕಾರಣವಾದರೆ, ‘ಪಶ್ಚಿಮ ವಾಹಿನಿ’ ಯೋಜನೆಯಡಿ ನಿರ್ಮಿಸಲಾದ ಕಿಂಡಿ ಅಣೆಕಟ್ಟುಗಳು ಇನ್ನೊಂದು ಕಾರಣ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವ ‘ಪಶ್ಚಿಮ ವಾಹಿನಿ’ ಯೋಜನೆಯಡಿ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ₹ 3,986.25 ಕೋಟಿ ವೆಚ್ಚದಲ್ಲಿ 1348 ಅಣೆಕಟ್ಟುಗಳನ್ನು ನಿರ್ಮಿಸುವ ಮಾಸ್ಟರ್‌ ಪ್ಲ್ಯಾನ್ ಅನ್ನು ಸಣ್ಣ ನೀರಾವರಿ ಇಲಾಖೆ ರೂಪಿಸಿತ್ತು. ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ 123 ಕಿಂಡಿ ಅಣೆಕಟ್ಟುಗಳು  ಮಂಜೂರಾಗಿದ್ದು ಅವುಗಳಲ್ಲಿ 110ಕ್ಕೂ ಹೆಚ್ಚು ಅಣೆಕಟ್ಟುಗಳ  ಕಾಮಗಾರಿಗಳು ಪೂರ್ಣಗೊಂಡಿವೆ.

‘ಪಶ್ಚಿಮ ವಾಹಿನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾದ ಬಹುತೇಕ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಪೂರ್ಣಗೊಂಡಿವೆ. ಕೆಲವು ಕಿಂಡಿ ಅಣೆಕಟ್ಟೆಗಳಲ್ಲಿ ಕಳೆದ ಮಳೆಗಾಲದ ಬಳಿಕ ನೀರನ್ನೂ ಶೇಖರಿಸಲಾಗಿದೆ. ಜಿಲ್ಲೆಯ ನದಿ ತೊರೆಗಳಲ್ಲಿ ನೀರಿನ ಒರತೆ ಹೆಚ್ಚಿಸುವಲ್ಲಿ ಇವುಗಳ ಕೊಡುಗೆ ಗಮನಾರ್ಹ. ನೇತ್ರಾವತಿ ನದಿಗೆ ಅಡ್ಡಲಾಗಿ ಬಿಳಿಯೂರು, ಅಡ್ಯಾರ್– ಹರೇಕಳ  ನಿರ್ಮಿಸಿರುವ ಕಿಂಡಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹ ಸಾಧ್ಯವಾಗಿರುವುದದರಿಂದ ಕಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಬಹಳಷ್ಟು ಸಹಾಯವಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಮಂಗಳೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌  ಕೆ.ಸಯ್ಯದ್‌ ಅತೀಕುರ್‌ ರೆಹಮಾನ್‌ ಇದ್ರೂಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಳಿಯೂರಿನ ಕಿಂಡಿ ಅಣೆಕಟ್ಟೆಯಲ್ಲಿ 4 ಮೀ. ನೀರು ಸಂಗ್ರಹಿಸಲಾಗಿದ್ದು, ಉಪ್ಪಿನಂಗಡಿ, ಬಂಟ್ವಾಳ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಪೂರೈಸಲು ನೆರವಾಗಿದ್ದೇ ಈ ಅಣೆಕಟ್ಟು. 2023ರಲ್ಲಿ ಎಎಂಆರ್‌ ಅಣೆಕಟ್ಟೆಯ ನೀರು ಖಾಲಿಯಾಗಿ  ಶಂಬೂರು, ಸರಪಾಡಿ, ಕಡೆಶಿವಾಲಯ, ಅಜಿಲಮೊಗರು, ನಾವೂರು, ಮಣಿನಾಲ್ಕೂರು ಮೊದಲಾದ ಗ್ರಾಮಗಳ ನಿವಾಸಿಗಳು ಕುಡಿಯುವ ನೀರಿಗೂ ತತ್ವಾರ ಎದುರಿಸಿದ್ದರು. ಈ ಸಲ ಅಳಿಯೂರು ಅಣೆಕಟ್ಟೆಯ ನೀರನ್ನು ಹರಿಸುವ ಅವಕಾಶ ಸಿಕ್ಕಿದ್ದರಿಂದ ಪರಿಸ್ಥಿತಿ ಆ ಮಟ್ಟಿಗೆ ಬಿಗಡಾಯಿಸದಂತೆ ನೀರಿನ ನಿರ್ವಹಣೆ ಸಾಧ್ಯವಾಗಿದೆ. ಏ 18ರ ಬಳಿಕ ಎ..ಎಂ.ಆರ್‌ ಅಣೆಕಟ್ಟೆಗೆ ನೀರು ಹರಿಸಲಾಗಿದೆ. ಅಳಿಯೂರು ಅಣೆಕಟ್ಟೆಯಲ್ಲಿ ಭಾನುವಾರ 1.60 ಮೀಟರ್‌ಗಳಷ್ಟು ನೀರಿನ ಸಂಗ್ರಹವಿತ್ತು.

ಹರೇಕಳ–ಅಡ್ಯಾರ್‌ ಕಿಂಡಿ ಅಣೆಕಟ್ಟೆ 3 ಮೀ. ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಭೂಸ್ವಾಧೀನ ಪೂರ್ಣವಾಗದ ಕಾರಣ ಅಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹ ಸಾಧ್ಯವಿಲ್ಲ. ಈ ಜಲಾಶಯದಲ್ಲಿ 1.70 ಮೀ ನೀರಿನ (ಭಾನುವಾರದವರೆಗೆ) ಸಂಗ್ರಹವಿದೆ. ಇದರಿಂದಾಗಿ ತುಂಬೆ ಅಣೆಕಟ್ಟೆಯಲ್ಲಿ ಸೋರಿಕೆಯಾಗಿ ಹೋಗುವ ನೀರು ಅನಗತ್ಯವಾಗಿ ಸಮುದ್ರಪಾಲಾಗುವುದು ತಪ್ಪಿದೆ. ಸೋರಿಕೆಯಾದ ನೀರನ್ನು ಮರಳಿ ತುಂಬೆ ಜಲಾಶಯಕ್ಕೆ ಪಂಪ್‌ ಮಾಡಿ ಬಳಸಲು ಸಾಧ್ಯವಾಗಿದೆ. ಇದು  ಪಾಲಿಕೆ ವ್ಯಾಪ್ತಿಯ  ಕುಡಿಯುವ ನೀರಿನ ಬೇಡಿಕೆಯ ಒತ್ತಡವನ್ನು ತುಸು ಮಟ್ಟಿಗೆ ಕಡಿಮೆ ಮಾಡಲು ನೆರವಾಗಿದೆ.

ಬಂಟ್ವಾಳ ಬಳಿಯ ಜಕ್ರಿಬೆಟ್ಟುವಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ₹ 135 ಕೋಟಿ ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆಸಹಿತ ಕಿಂಡಿ ಅಣೆಕಟ್ಟೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇಲ್ಲಿ ನದಿಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗಿದೆ. ಈ ಲಯಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹ ಸಾಧ್ಯವಾದರೆ ಬಂಟ್ವಾಳ ಪುರಸಭೆಯ ನೀರಿನ ಕೊರತೆ ನಿವಾರಣೆ ಆಗಲಿದೆ ಎನ್ನುತ್ತಾರೆ ಸ್ಥಳೀಯರು.

ತುಂಬೆ ಜಲಾಶಯದಲ್ಲಿ 7 ಮೀಟರ್‌ಗಳಷ್ಟು ನೀರು ಸಂಗ್ರಹ ಸಾಮರ್ಥ್ಯವಿದ್ದರೂ, ಅಲ್ಲಿ 6 ಮೀಟರ್‌ನಷ್ಟು ಮಾತ್ರ ನೀರು ಸಂಗ್ರಹಿಸಲಾಗುತ್ತದೆ. ಭಾನುವಾರದವರೆಗೆ 3.74 ಮೀ. ನೀರು ಸಂಗ್ರಹವಿತ್ತು. ಎಎಂಆರ್‌  ಜಲಾಶಯದಲ್ಲಿ 15.28 ಮೀ (ಗರಿಷ್ಠ ಸಾಮರ್ಥ್ಯ 18.90 ಮೀ.) ನೀರು ಸಂಗ್ರಹವಿದೆ. ಪಶ್ಚಿಮ ಘಟ್ಟದ ತಪ್ಪಲಿನ ಕೆಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಹಾಗಾಗಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.

ಮಂಗಳೂರಿನ ಹರೆಕಳ ಸೇತುವೆ –ಪ್ರಜಾವಾಣಿ ಚಿತ್ರ 
ಮಂಗಳೂರಿನ ಹರೆಕಳ ಸೇತುವೆ –ಪ್ರಜಾವಾಣಿ ಚಿತ್ರ 

ಕಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ತಾರಕಕ್ಕೆ ಹೋಗದಂತೆ ತಡೆಯಲು ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳ ಕೊಡುಗೆಯೂ ಇದೆ

–ಕೆ.ಸಯ್ಯದ್‌ ಅತೀಕುರ್‌ ರೆಹಮಾನ್‌ ಇದ್ರೂಸ್‌ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌

ದಕ್ಷಿಣ ಕನ್ನಡ: ಪಶ್ಚಿಮ ವಾಹಿನಿ ಯೋಜನೆಯ ಕಿಂಡಿ ಅಣೆಕಟ್ಟುಗಳ ವಿವರ ವರ್ಷ; ಮೊತ್ತ (ಕೋಟಿ ₹ಗಳಲ್ಲಿ); ಮಂಜೂರಾದ ಕಾಮಗಾರಿಗಳು; ನೀರು ಶೇಖರಣೆ ಸಾಮರ್ಥ್ಯ (ಲಕ್ಷ ಘನ ಅಡಿ) ; ಅಚ್ಚುಕಟ್ಟು (ಹೆಕ್ಟೇರ್‌) 2021–22;359.78;121;6703.3;9126.38 2022–23;81.97;2;394.9;1988.16 ಅಂಕಿ–ಅಂಶ 123 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ನಿರ್ಮಾಣಗೊಂಡಕಿಂಡಿ ಅಣೆಕಟ್ಟುಗಳು 7098.2 ಲಕ್ಷ ಘನ ಅಡಿ ಈ ಯೋಜನೆಯಡಿ ನಿರ್ಮಾಣವಾದ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಒಟ್ಟು ಸಂಗ್ರಹ ಸಾಮರ್ಥ್ಯ 11114.54  ಹೆಕ್ಟೇರ್‌ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಿಸಿದ ಅಣೆಕಟ್ಟುಗಳಿಂದ  ದ.ಕ ಜಿಲ್ಲೆಯಲ್ಲಿ ಹೆಚ್ಚಳವಾದ ಅಚ್ಚುಕಟ್ಟು ಪ್ರದೇಶ ₹ 441.75 ಕೋಟಿ ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳಿಗೆ ಮಂಜೂರಾದ ಅನುದಾನ

‘ಹರಿವು ಬೇಗ ನಿಲ್ಲಿಸುವ ನದಿ ತೊರೆಗಳು’

‘ಪಶ್ಚಿಮಾಭಿಮುಖವಾಗಿ ಹರಿಯುವ ನದಿ ತೊರೆಗಳಲ್ಲಿ ಈ ಹಿಂದೆ ಫೆಬ್ರುವರಿ ಮಾರ್ಚ್ ತಿಂಗಳವರೆಗೂ ನೀರಿನ ಹರಿವು ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡು ಮೂರು ತಿಂಗಳು ಮುನ್ನವೇ ನಿರಿನ ಹರಿವು ನಿಲ್ಲುತ್ತಿದೆ. ಪಶ್ಚಿಮ ಘಟ್ಟದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿದ ಬಳಿಕವಂತೂ ಕೆಲವು ನದಿ ತೊರೆಗಳು ಅಕ್ಟೊಬರ್‌ ನವೆಂಬರ್‌ನಲ್ಲೇ ಹರಿವು ನಿಲ್ಲಿಸುತ್ತಿವೆ. ಇದರಿಂದಾಗಿ ಕಿಂಡಿ ಅಣೆಕಟ್ಟುಗಳಿಂದ ನಿರೀಕ್ಷಿತ ಪ್ರಯೋಜನವಾಗುತ್ತಿಲ್ಲ’ ಎನ್ನುತ್ತಾರೆ ಪರಿಸರ ಕಾರ್ಯಕರ್ತ ದಿನೇಶ್‌ ಹೊಳ್ಳ. ‘ನದಿಗಳಿಗೆ ದೊಡ್ಡ  ಅಣೆಕಟ್ಟೆ ನಿರ್ಮಿಸುವುದಕ್ಕಿಂತ ಸಣ್ಣ ಪುಟ್ಟ ಕಿಂಡಿ ಅಣೆಕಟ್ಟುಗಳನ್ನು ಅಲ್ಲಲ್ಲಿ ನಿರ್ಮಿಸುವುದು ಒಳ್ಳೆಯದೇ. ನದಿಯಲ್ಲಿ ನೀರಿನ ಹರಿವು ಅಕ್ಟೋಬರ್‌ ನವೆಂಬರ್‌ ತಿಂಗಳಲ್ಲೇ ನಿಂತರೆ ಅಲ್ಲಿಯವರೆಗೆ ಸಂಗ್ರಹಿಸುವ ನೀರು ಎಷ್ಟುದಿನಗಳವರೆಗೆ ಬಂದೀತು. ಹಾಗಾಗಿ ಪಶ್ಚಿಮ ಘಟ್ಟದ ಮೇಲಾಗುವ ಹಾನಿಯನ್ನು ತಡೆದು ಸಂರಕ್ಷಣೆಗೆ ಒತ್ತು ನೀಡಿದರೆ ಮಾತ್ರ ನದಿ ತೊರೆಗಳ ಒರತೆ ಹೆಚ್ಚಿಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

‘ಅಣೆಕಟ್ಟೆ: ನಿರ್ವಹಣೆಗೂ ಸಿಗಲಿ ಆದ್ಯತೆ’

‘ಸಣ್ಣ ಹಳ್ಳ ಹಾಗೂ ತೊರೆಗಳಲ್ಲಿ ಸಣ್ಣ ನೀರಾವರಿ ಇಲಾಖೆ ಕಿಂಡಿ ಅಣೆಕಟ್ಟುಗಳನ್ನೇನೋ ನಿರ್ಮಿಸುತ್ತದೆ. ಆದರೆ ಅವುಗಳ ನಿರ್ವಹಣೆ ಸಮರ್ಪಕವಾಗಿ ಆಗುವುದಿಲ್ಲ. ಜಿಲ್ಲೆಯಲ್ಲಿ ಈ ಹಿಂದೆಯೂ ವಿವಿಧ ಯೋಜನೆಗಳಡಿ ನಿರ್ಮಿಸಿರುವ ಕಿಂಡಿನ ಅಣೆಕಟ್ಟೆಗಳು ನಿರ್ವಹಣೆ ಇಲ್ಲದೇ ಸೊರಗಿವೆ. ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಿಸಿದ ಅಣೆಕಟ್ಟುಗಳ ನಿರ್ವಹಣೆಗೂ ಕ್ರಮ ಕೈಗೊಳ್ಳಬೇಕು’ ಎಂಬುದು ಸಾರ್ವಜನಿಕರ ಒತ್ತಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT