ಮಂಗಳೂರು: ಚೂರಿಯಿಂದ ಇರಿದು ವ್ಯಕ್ತಿ ಕೊಲೆ, ಜ್ಯುವೆಲ್ಲರಿ ಅಂಗಡಿಯಲ್ಲಿ ಕೃತ್ಯ
ಮಂಗಳೂರು: ನಗರದ ಬಲ್ಮಠ ರಸ್ತೆಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ನಗರದ ಹಂಪನಕಟ್ಟೆಯ ಮಂಗಳೂರು ಜ್ಯುವೆಲರ್ಸ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಅತ್ತಾವರದ ರಾಘವೇಂದ್ರ ಆಚಾರಿ (55) ಕೊಲೆಯಾದವರು. ವ್ಯಕ್ತಿಯೊಬ್ಬ ಅಂಗಡಿ ಪ್ರವೇಶಿಸಿ ರಾಘವ ಅವರಿಗೆ ಚೂರಿಯಿಂದ ಇರಿದಿದ್ದು, ಆ ವೇಳೆ ಅಂಗಡಿಯ ಮಾಲೀಕ ಕೇಶವ ಆಚಾರಿ ಊಟಕ್ಕೆ ತೆರಳಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
‘ಅಂಗಡಿಯ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಸಂಗ್ರಹಿಸಲಾಗಿದೆ. ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಿ ಅಂಗಡಿಯ ಒಳಗೆ ಹೋಗಿದ್ದ ವ್ಯಕ್ತಿಯೊಬ್ಬ ಸುಮಾರು ಅರ್ಧ ಗಂಟೆ ಅಲ್ಲಿ ಇದ್ದು, ಹೊರ ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮಧ್ಯಾಹ್ನ 3.30ರಿಂದ 4 ಗಂಟೆಯ ವೇಳೆಗೆ ಕೊಲೆ ಕೃತ್ಯ ನಡೆದಿರಬಹುದು. ಯಾಕಾಗಿ ಈ ಕೊಲೆ ನಡೆದಿದೆ, ಆರೋಪಿ ಹೇಗೆ ಬಂದಿದ್ದ ಮತ್ತು ವಾಪಸ್ ಹೇಗೆ ತೆರಳಿದ್ದಾನೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಅಂಗಡಿಯ ಮಾಲೀಕರು ಪ್ರತಿದಿನ ಮಧ್ಯಾಹ್ನ 1.30ರ ವೇಳೆಗೆ ಊಟಕ್ಕೆ ಮನೆಗೆ ಹೋಗುತ್ತಿದ್ದರು. ಆ ವೇಳೆಗೆ ರಾಘವೇಂದ್ರ ಆಚಾರಿ ಒಬ್ಬರೇ ಅಂಗಡಿಯಲ್ಲಿ ಇರುತ್ತಿದ್ದರು. ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಕೆಲವು ಬಂಗಾರದ ಚೈನ್‌ಗಳು ಕಾಣುತ್ತಿಲ್ಲ ಎಂದು ಪ್ರಾಥಮಿಕ ತನಿಖೆಯ ವೇಳೆ ಅಂಗಡಿ ಮಾಲೀಕರು ತಿಳಿಸಿದ್ದಾರೆ. ರಾಘವೇಂದ್ರ ಅವರು ಈ ಹಿಂದೆ ಬೇರೆ ಬೇರೆ ಬಂಗಾರದ ಅಂಗಡಿಗಳಲ್ಲಿ ಕೆಲಸ ಮಾಡಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ’ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು’ ಎಂದು ಅವರು ವಿವರಿಸಿದರು.
‘ನಾನು ಪ್ರತಿನಿತ್ಯ 1.30ಕ್ಕೆ ಊಟಕ್ಕೆ ಹೋಗಿ 3.30ಕ್ಕೆ ವಾಪಸ್ ಬರುತ್ತೇನೆ. ಇವತ್ತು ಕೂಡ ವಾಪಸ್ ಬಂದು, ಅಂಗಡಿ ಎದುರು ಬೈಕ್ ಅಡ್ಡ ಇದೆ, ಅದನ್ನು ತೆಗೆದಿಡು ಎಂದು ಹೇಳಲು ಕಾಲ್ ಮಾಡಿದಾಗ, ರಾಘವೇಂದ್ರ ಅವರು ನನಗೆ ಚೂರಿ ಹಾಕಿದ್ದಾರೆ ಏಳಲು ಆಗದು ಎಂದು ಹೇಳುವಷ್ಟರಲ್ಲಿ ಕಾಲ್ ಕಟ್ ಆಗಿದೆ. ತಕ್ಷಣ ಕಾರನ್ನು ಅಲ್ಲಿಯೇ ನಿಲ್ಲಿಸಿ ಒಳಗೆ ಹೋಗುವಾಗ, ಬಾಗಿಲು ತೆಗೆಯುತ್ತಿದ್ದಂತೆ, ಒಳಗಿದ್ದ ವ್ಯಕ್ತಿ ಹೊರಬಿದ್ದಿದ್ದಾನೆ’ ಎಂದು ಮಾಲೀಕ ಕೇಶವ ಆಚಾರಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.