ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟ್ಲ: ರೈತಸಂಘದಿಂದ ಅಂಚೆ ಕಾರ್ಡ್ ಚಳವಳಿ

ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ
Last Updated 12 ಆಗಸ್ಟ್ 2021, 4:39 IST
ಅಕ್ಷರ ಗಾತ್ರ

ವಿಟ್ಲ: ‘ರೈತರಿಗೆ ಕಂಟಕವಾಗಿರುವ ಯೋಜನೆಗೆ ನಿರಾಕ್ಷೇಪಣೆ ನೀಡಬಾರದು ಎಂಬ ನಿಟ್ಟಿನಲ್ಲಿ ರೈತ ಸಂಘದ ವತಿಯಿಂದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ನೋಟಿಸ್ ನೀಡಲಾಗುವುದು. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಭೇಟಿ ಮಾಡಿ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಲಾಗುವುದು. ಅಂಚೆ ಕಾರ್ಡ್ ಚಳವಳಿ ಆರಂಭಿಸಲಾಗುತ್ತದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಆದಾಯದ ಮೂಲವಾದ ಕೃಷಿ ಭೂಮಿಯಲ್ಲಿ ವಿದ್ಯುತ್ ಟವರ್ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಶಾಸಕರು ಹಾಗೂ ಸಂಸದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ತುಂಬುತ್ತಿವೆ. ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ‘ವಿದ್ಯುತ್ ಮಾರ್ಗದಿಂದ 1,000 ಹೆಕ್ಟೇರ್ ಕೃಷಿ ಭೂಮಿ ಯೋಜನೆಯಿಂದ ನಾಶವಾಗುತ್ತಿದೆ. ಯೋಜನೆಯ ಸಾಧಕ–ಬಾಧಕದ ವಿಮರ್ಶಿಸದೆ, ಏಕಾಏಕಿ ಅನುಮತಿ ನೀಡಿರುವ ಕ್ರಮ ಸರಿಯಲ್ಲ. ಕಂಪನಿಯ ಸಿಬ್ಬಂದಿ ಕೃಷಿ ಭೂಮಿಗೆ ಕಾಲಿಟ್ಟರೆ ಕಟ್ಟಿ ಹಾಕುವ ತೀರ್ಮಾನ ಮಾಡಲಾಗಿದೆ. ಈಗಾಗಲೇ ತೆಗೆದ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಸಂಘ ಮಾಡಲಿದೆ’ ಎಂದು ತಿಳಿಸಿದರು.

ಸಂತ್ರಸ್ತ ರೈತ ಅನಿಲ್ ಮೆಲ್ವಿನ್ ರೇಗೊ ಮಾತನಾಡಿ, ‘ಉಷ್ಣವಿದ್ಯುತ್ ಸ್ಥಾವರದಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಇದೆ. ಇದರ ಬದಲಾಗಿ ಪರಿಸರಕ್ಕೆ ಪೂರಕವಾದ ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಕೇರಳದಲ್ಲಿ ಮಾಡಲಿ’ ಎಂದರು.

ಹೋರಾಟ ಸಮಿತಿ ಕಾರ್ಯದರ್ಶಿ ರೋಹಿತಾಕ್ಷ ಮಾತನಾಡಿದರು. ಸಂತ್ರಸ್ತರ ರೈತ ಚಿತ್ತರಂಜನ್ ನೆಕ್ಕಿಲ್ಲಾರ್ ಮಾತನಾಡಿ, ‘ಜುಲೈ 12ರ 4 ಗಂಟೆ ಸುಮಾರಿಗೆ ನಮ್ಮ ಜಮೀನಿಗೆ ಇಬ್ಬರು ವ್ಯಕ್ತಿಗಳು ಕಳ್ಳರ ಹಾಗೆ ಬಂದು, ಪಲಾಯನ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT