ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ಒತ್ತು ನೀಡಿದ ಕುಲಪತಿ

ಮಂಗಳೂರು ವಿವಿ ಕುಲಪತಿಯಾಗಿದ್ದ ಪ್ರೊ.ಸವದತ್ತಿ
Last Updated 10 ಜೂನ್ 2021, 6:20 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾಲಯದ ಮೂರನೇ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪ್ರೊ.ಎಂ.ಐ. ಸವದತ್ತಿ, 1989 ರಿಂದ 1995 ರವರೆಗೆ ಎರಡು ಅವಧಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು.

ಭೌತ ವಿಜ್ಞಾನ ಕ್ಷೇತ್ರದಿಂದ ಬಂದವರಾಗಿದ್ದರೂ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಜನಪದ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಪ್ರೊ.ಸವದತ್ತಿ ಅವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೈಕ್ರೋ ಟ್ರೋಲ್‌ ಎಕ್ಸ್‌ಲರೇಟರ್‌ ಅನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ಹಿರಿದು. ಡಾ. ಶಿವರಾಮ ಕಾರಂತರ ಅಪ್ರಕಟಿತ ಲೇಖನಗಳನ್ನು ಮಂಗಳೂರು ವಿವಿ ಪ್ರಸಾರಾಂಗದ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಸಾಹಿತಿಗಳು, ವಿಜ್ಞಾನಿಗಳು, ಬರಹಗಾರರನ್ನು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸುವುದಷ್ಟೇ ಅಲ್ಲ, ಅವುಗಳ ಕಾರ್ಯರೂಪಕ್ಕೂ ಶ್ರಮ ವಹಿಸುತ್ತಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ದಶಮಾನೋತ್ಸವದ ವರ್ಷ (1990)ದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಇತಿಹಾಸ, ಜೀವವೈವಿಧ್ಯ, ಕಲೆ, ಆರ್ಥಿಕತೆಗಳ ಮೇಲೆ ಬೆಳಕು ಚೆಲ್ಲಬಲ್ಲ, ಸಂಶೋಧಕರಿಗೆ ಉಪಯುಕ್ತವಾಗಬಲ್ಲ ವಿದ್ವತ್‌ಪೂರ್ಣ ಲೇಖನಗಳ ಸಂಕಲನವನ್ನು ಆಗಿನ ಕುಲಪತಿ ಪ್ರೊ.ಎಂ.ಐ.ಸವದತ್ತಿ ಆಸಕ್ತಿ ವಹಿಸಿದ್ದರಿಂದ ಹೊರತರುವುದು ಸಾಧ್ಯವಾಯಿತು ಎಂದು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವಿ. ಜೋಷಿ ನೆನಪಿಸಿಕೊಳ್ಳುತ್ತಾರೆ.

ಸಂಶೋಧನೆಗೆ ಒತ್ತು: 2018 ರಲ್ಲಿ ನಡೆದ ನಗರದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ 150 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪ್ರೊ.ಸವದತ್ತಿ ಅವರು, ‘ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಅಗತ್ಯವಿದೆ. ವಿದ್ಯಾರ್ಥಿಗಳು ಪದವಿ ಕಲಿಯುವ ಹಂತದಲ್ಲಿಯೇ ಸಂಶೋಧನೆಯಲ್ಲಿ ತೊಡಗಬೇಕು. ಕಾಲೇಜುಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕಿದೆ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಶಿಕ್ಷಕರು ಪಠ್ಯದ ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಗಳನ್ನು ಕಲಿಸಬೇಕು. ದೇಶದಲ್ಲಿ ಬೇರೊಬ್ಬರನ್ನು ದೂಷಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕಾಲೇಜುಗಳ ಬೆಳವಣಿಗೆಯ ದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಾಯ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ನಾಯಕತ್ವ ಗುಣ ಕಡಿಮೆಯಾಗಿದೆ’ ಎನ್ನುವ ಮಾತನ್ನೂ ಹೇಳಿದ್ದರು.

‘ವಿದ್ವತ್‌ಪೂರ್ಣ ವ್ಯಕ್ತಿತ್ವ’

ಪ್ರೊ.ಎಂ.ಐ. ಸವದತ್ತಿ ಅವರದ್ದು ವಿದ್ವತ್‌ಪೂರ್ಣ ವ್ಯಕ್ತಿತ್ವ. ವಿಶ್ವವಿದ್ಯಾಲಯದ ಆಡಳಿತವಿರಲಿ, ಬೋಧನಾ ಕ್ರಮವಿರಲಿ, ಇತಿಹಾಸ, ಸಾಹಿತ್ಯ, ಸಂಶೋಧನೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅವರ ಸಾಧನೆ ಅಪಾರವಾಗಿತ್ತು ಎಂದು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವಿ. ಜೋಷಿ ತಿಳಿಸಿದ್ದಾರೆ.

ಕಟ್ಟಡ, ವಿಸ್ತಾರ, ನೇಮಕಾತಿಯ ಆಧಾರದಲ್ಲಿ ವಿಶ್ವವಿದ್ಯಾಲಯದ ಹಿರಿಮೆ ಇರದು. ಸಂಶೋಧನೆಗಳು ಆದಂತೆ ವಿಶ್ವವಿದ್ಯಾಲಯದ ಹಿರಿಮೆ ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯ ಅವರದಾಗಿತ್ತು. ಅಸಾಧಾರಣ ಜ್ಞಾನವನ್ನು ಹೊಂದಿದ್ದ ಅವರು, ಅಪರೂಪದ ಪ್ರಾಧ್ಯಾಪಕ, ಕುಲಪತಿ ಹಾಗೂ ಆಡಳಿತಗಾರರಾಗಿದ್ದರು ಎಂದು ಡಾ.ಜೋಷಿ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT