ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ಅಗತ್ಯ:  ಎಂ.ವೆಂಕಯ್ಯ ನಾಯ್ಡು ಕರೆ

Last Updated 2 ನವೆಂಬರ್ 2019, 6:29 IST
ಅಕ್ಷರ ಗಾತ್ರ

ಮಂಗಳೂರು: ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕೈಗೊಳ್ಳುವ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವಂತಹ ಸಂಶೋಧನೆ ಮತ್ತು ಆವಿಷ್ಕಾರ ಯೋಜನೆಗಳಲ್ಲಿ ಖಾಸಗಿ ಬಲಯದ ಹೂಡಿಕೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದರು.

ಇಲ್ಲಿನ ಸುರತ್ಕಲ್ ನಲ್ಲಿ ಶನಿವಾರ ನಡೆದ ಎನ್ಐಟಿಕೆಯ ವಜ್ರ ಮಹೋತ್ಸವ ವರ್ಷಾಚರಣೆಯ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪದವಿ ಪ್ರದಾನ ಮಾಡಿ ಮಾತನಾಡಿದರು.

ಖಾಸಗಿ ವಲಯವು ಇಂತಹ ಹೂಡಿಕೆ ಮಾಡುವ ಪ್ರವೃತ್ತಿ ಬೆಳೆದಿಲ್ಲ. ಈಗ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿದ ಚಟುವಟಿಕೆಗಲ್ಲಿ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಹೆಚ್ಚಿನ ಅವಕಾಶಗಳಿವೆ. ಇದಕ್ಕಾಗಿ ಖಾಸಗಿ ವಲಯದ ಉದ್ದಿಮೆಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಪ್ರತ್ಯೇಕವಾದ ಶೈಕ್ಷಣಿಕ ನಿಧಿ ಸ್ಥಾಪಿಸಬೇಕು ಎಂದು ಕರೆ ನೀಡಿದರು ‌

ಶಿಕ್ಷಣಕ್ಕೆ ಉದ್ಯೋಗ ಖಾತರಿಯ ಶಕ್ತಿ ನೀಡುವುದು ಈಗ ದೇಶದ ಮುಂದಿರುವ ಸವಾಲು. ಏಕ ಕೌಶಲ ಆಧಾರಿತ ಉದ್ಯೋಗಗಳು ಯಂತ್ರಗಳ ಬಳಕೆಯಿಂದ ಅವಸಾನದ ಅಂಚಿನಲ್ಲಿವೆ. ಯುವಜನರು ಈ ಸವಾಲನ್ನು ಎದುರಿಸಿ ಉದ್ಯೋಗ ಪಡೆಯಬೇಕಾದರೆ ಬಹುಶಿಸ್ತೀಯ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇಂತಹ ಕೌಶಲ ಅಭಿವೃದ್ಧಿಯು ಭವಿಷ್ಯದ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳನ್ನು ಅಭಿವೃದ್ಧಿಯಲ್ಲಿ ಹಿಂದುಳಿದ ರಾಷ್ಟ್ರಗಳಿಂದ ಪ್ರತ್ಯೇಕಿಸಲಿದೆ. ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವು ಅಗತ್ಯವಿದೆ ಎಂದರು.

ಜನಸಂಖ್ಯೆಯ ದೃಷ್ಟಿಯಿಂದ ಭಾರತ ಹೆಚ್ಚು ಅನುಕೂಲಗಳನ್ನು ಹೊಂದಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದಾರೆ. ಯುವಜನರಲ್ಲಿ ಬಹುಶಿಸ್ತೀಯ ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸಿದರೆ ಭಾರತ ವಿಶ್ವಗುರು ಆಗಲಿದೆ ಎಂದರು.

ದೇಶದ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಮುಂದಿನ ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾದ ಸಂಶೋಧನೆಗಳೊಂದಿಗೆ ಅತ್ಯುನ್ನತ ಶೈಕ್ಷಣಿಕ ಗುಣಮಟ್ಟ ಸಾಧಿಸಲು ದೂರದೃಷ್ಟಿ ಯೋಜನೆಗಳನ್ನು ಸಿದ್ಧಪಡಿಸಬೇಕು. ಇದಕ್ಕಾಗಿ ತಮ್ಮ ಎಂದಿನ ಕಾರ್ಯಶೈಲಿಯನ್ನು ಬದಲಾವಣೆ ಮಾಡಿಕೊಂಡು ಮುನ್ನಡೆಯಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವ ಶಿಕ್ಷಣ ಕ್ರಮವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಭಾರತ ಸಾಂಸ್ಕೃತಿಕವಾಗಿ ಬಹುತ್ವದ ತೊಟ್ಟಿಲು. ಇಂತಹ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ, ಪೋಷಣೆಯನ್ನೂ ಮಾಡಬೇಕು. ಜಗತ್ತಿನಾದ್ಯಂತ ಸಮಾಜೋ ಆರ್ಥಿಕ ಚಿತ್ರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಈ ಸವಾಲು ಎದುರಿಸಲು ಎಂಜಿನಿಯರಿಂಗ್ ಶಿಕ್ಷಣದಿಂದ ಪಡೆದ ಜ್ಞಾನವನ್ನು ಬಳಸಬೇಕು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ಅಂತಿಮಗೊಂಡಿದೆ. ಕಲಿಯಲು ತಿಳಿಯುವುದು, ಕೆಲಸ ಮಾಡಲು ತಿಳಿಯುವುದು, ಸಹಬಾಳ್ವೆ ಮತ್ತು ಕಲಿಕೆ ಮುಂದುವರಿಸುವುದು ಈ ಹೊಸ ನೀತಿಯ ಆಧಾರ ಸ್ತಂಭಗಳಾಗಿವೆ. ಇದು ಬಹುಶಿಸ್ತೀಯ ಅಧ್ಯಯನಕ್ಕೆ ಹೆಚ್ಚು ಅವಕಾಶ ನೀಡಲಿದೆ ಎಂದು ಹೇಳಿದರು.

ಭ್ರಷ್ಟಾಚಾರ ತಡೆಗೆ ಡಿಜಿಟಲ್ ಮದ್ದು:ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಡಿಜಿಟಲ್ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕಿದೆ. ಆ ಮೂಲಕ ಶ್ರೀಸಾಮಾನ್ಯನ ಜೀವನಮಟ್ಟ ಸುಧಾರಣೆ ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವ ಯುವಜನರು ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.

ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುಂದಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಯೋಗ ಶಿಕ್ಷಣ ಉತ್ತೇಜಿಸುವ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎನ್ಐಟಿಕೆ ಅಧ್ಯಕ್ಷ ಪ್ರೊ.ಕೆ.ಬಾಲವೀರರೆಡ್ಡಿ, ನಿರ್ದೇಶಕ ಉಮಾಮಹೇಶ್ವರ ರಾವ್ ಉಪಸ್ಥಿತರಿದ್ದರು.

ವಿವಿಧ ವಿಭಾಗಗಳ 1,545 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT