ಪುತ್ತೂರಿನಲ್ಲಿ ಗಾಂಧಿ ಪ್ರತಿಮೆ ವಿರೂಪ: ದೂರು

ಪುತ್ತೂರು: ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯಿರುವ ಗಾಂಧಿ ಮಂಟಪದಲ್ಲಿನ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ಗಾಂಧಿ ಪ್ರತಿಮೆಗೆ ಅಳವಡಿಸಲಾಗಿದ್ದ ಕನ್ನಡಕವನ್ನು ತೆಗೆದು ತಲೆಯ ಮೇಲಿಟ್ಟಿದ್ದಾರೆ. ಪ್ರತಿಮೆಯ ತಲೆಯ ಭಾಗಕ್ಕೆ ಟೀ ಶರ್ಟ್ ಇಟ್ಟು, ಅದರ ಮೇಲೆ ಕನ್ನಡಕವನ್ನು ಇಡುವ ಮೂಲಕ ತಮ್ಮ ವಿಕೃತ ಪ್ರದರ್ಶಿಸಿದ್ದಾರೆ.
ಪುತ್ತೂರಿನ ಗಾಂಧಿಕಟ್ಟೆ ಸಮಿತಿಯವರು ನೀಡಿದ ಮಾಹಿತಿಯಂತೆ ಪುತ್ತೂರಿನ ಡಿವೈಎಸ್ಪಿ ಗಾನ ಪಿ.ಕುಮಾರ್, ನಗರ ಠಾಣೆಯ ಇನ್‌ಸ್ಪೆಕ್ಟರ್ ಗೋಪಾಲ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಠಾರದ ಅಶ್ವತ್ಥಕಟ್ಟೆಯ ಬದಿಯಲ್ಲಿದ್ದ ಗಾಂಧಿ ಪ್ರತಿಮೆಯನ್ನು ಆ ಬಳಿಕ ಅಶ್ವತ್ಥಕಟ್ಟೆಯ ಸಮೀಪ ಗಾಂಧಿ ಮಂಟಪ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಭವ್ಯವಾದ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಅತ್ಯಾಧುನಿಕ (ಐಟೆಕ್) ಬಸ್ ನಿಲ್ದಾಣದ ನಿರ್ಮಾಣದ ವೇಳೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಗಾಂಧಿಮಂಟಪ ಹಾಗೂ ಅಶ್ವತ್ಥಕಟ್ಟೆ ಬದಿ ತನಕವೂ ಮಣ್ಣು ಅಗೆದ ಪರಿಣಾಮವಾಗಿ ಅಶ್ವತ್ಥಕಟ್ಟೆ ಮತ್ತು ಗಾಂಧಿಮಂಟಪ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ನಂತರದ ದಿನದಲ್ಲಿ ಅಶ್ವತ್ಥಕಟ್ಟೆ ಮತ್ತು ಗಾಂಧಿಕಟ್ಟೆಯನ್ನು ರಸ್ತೆಗೆ ಸಮನಾಂತರವಾಗಿ ತಗ್ಗಿಸಿ ನವೀಕರಣಗೊಳಿಸಿ, ಮತ್ತೆ ಗಾಂಧಿ ಪ್ರತಿಮೆಯನ್ನು ಅಲ್ಲಿ ಮರುಸ್ಥಾಪಿಸಿತ್ತು. ಆದರೆ, ಇದೀಗ ಪ್ರತಿಮೆಯನ್ನೇ ವಿಕೃತಗೊಳಿಸುವ ಕೃತ್ಯ ನಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.