ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ, ಕೊಡಗಿನಲ್ಲಿ ಮುಂದುವರಿದ ಮಳೆ

Published 25 ಜೂನ್ 2024, 4:29 IST
Last Updated 25 ಜೂನ್ 2024, 4:29 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯಿಡೀ ಬಿಟ್ಟು ಬಿಟ್ಟು ಬಿರುಸಿನ ಮಳೆಯಾಗಿದೆ. ಸೋಮವಾರ ಬಿಸಿಲಿನಿಂದ ಕೂಡಿದ ವಾತಾವರಣ ವಿತ್ತು. ಮಧ್ಯಾಹ್ನದ ಬಳಿಕ ಸುಮಾರು ಅರ್ಧ ಗಂಟೆ ಧಾರಾಕಾರ ಮಳೆ ಸುರಿಯಿತು.

ಸೋಮವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಬಂಟ್ವಾಳ ತಾಲ್ಲೂಕಿನ ಮಂಚಿಯಲ್ಲಿ 13 ಸೆಂ.ಮೀ, ಬಾಳ್ತಿಲದಲ್ಲಿ 11, ಬಂಟ್ವಾಳದಲ್ಲಿ 10, ತುಂಬೆಯಲ್ಲಿ 10, ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆಯಲ್ಲಿ 12, ಅರಸಿನಮಕ್ಕಿಯಲ್ಲಿ 11, ಪುತ್ತೂರು ತಾಲ್ಲೂಕಿನ ಬೆಳಂದೂರಿನಲ್ಲಿ 12, ನೂಜಿಬಾಳ್ತಿಲದಲ್ಲಿ 10, ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ನಲ್ಲಿ 10, ಸುಳ್ಯ ತಾಲ್ಲೂಕಿನ ಕಲ್ಮಡ್ಕದಲ್ಲಿ 10 ಸೆಂ.ಮೀ. ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಇದೇ 27ರವರೆಗೂ ಸಿಡಿಲು, ಗುಡುಗು ಹಾಗೂ ಗಾಳಿಯಿಂದ
ಕೂಡಿದ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಶೃಂಗೇರಿ, ಕಳಸ, ಕೊಪ್ಪ ಮತ್ತು ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಗೋಣಿಕೊಪ್ಪಲು ವರದಿ (ಕೊಡಗು ಜಿಲ್ಲೆ): ದಕ್ಷಿಣ ಕೊಡಗಿನ ಶ್ರೀಮಂಗಲ, ಟಿ.ಶೆಟ್ಟಿಗೇರಿ, ಬೀರುಗ ಬಿರುನಾಣಿ, ಹುದಿಕೇರಿ, ಬಿ.ಶೆಟ್ಟಿಗೇರಿ ಭಾಗದಲ್ಲಿ ಸೋಮವಾರ ರಭಸದ ಮಳೆಯಾಯಿತು.

ಬೆಳಿಗ್ಗೆಯಿಂದಲೇ ಶುರುವಾದ ಮಳೆ ಮಧ್ಯಾಹ್ನದ ಬಳಿಕ ಬಿರುಸು ಪಡೆಯಿತು. ನದಿ, ತೊರೆ, ತೋಡುಗಳಲ್ಲಿ ನೀರು ತುಂಬಿ ಹರಿಯಿತು. ಸಂಜೆ ಯಾಗುತ್ತಿದ್ದಂತೆ ಮಳೆ ರಭಸ ಕಡಿಮೆಯಾಯಿತು. ಮಡಿಕೇರಿ, ಗೋಣಿಕೊಪ್ಪಲು, ಪೊನ್ನಂಪೇಟೆ, ಕಿರುಗೂರು, ನಲ್ಲೂರು ಭಾಗದಲ್ಲಿ ಸಾಧಾರಣ ಮಳೆಯಾಯಿತು.

ತೊರೆ ತೋಡುಗಳಲ್ಲಿ ಹರಿಯುವ ಮಳೆ ನೀರನ್ನು ಗದ್ದೆಗೆ ಹಾಯಿಸಿಕೊಂಡಿರುವ ರೈತರು ಭತ್ತ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT