ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮಳೆ; ನದಿಗಳಲ್ಲಿ ಹೆಚ್ಚಿದ ಹರಿವು

Last Updated 9 ಜನವರಿ 2021, 3:45 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಮೂರು ದಿನಗಳಿಂದ ಆರಂಭವಾಗಿರುವ ಮಳೆಯಿಂದಾಗಿ ನದಿಗಳಲ್ಲಿ ಮತ್ತೆ ಜಲರಾಶಿ ಹರಿಯುತ್ತಿದೆ. ಕೃಷಿ, ಕುಡಿಯುವ ನೀರಿಗಾಗಿ ಬೇಸಿಗೆಯನ್ನು ಅನುಭವಿಸಬೇಕಿದ್ದ ಬವಣೆ ಸ್ವಲ್ಪ ಮಟ್ಟಿಗೆ ನೀಗುವ ಲಕ್ಷಣಗಳು ಗೋಚರಿಸುತ್ತಿವೆ.

ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಧಾರಾಕಾರ ಮಳೆಯಿಂದ ತುಂಬಿ ಹರಿದಿದ್ದ ನದಿಗಳು, ನವೆಂಬರ್‌, ಡಿಸೆಂಬರ್‌ ವೇಳೆಗೆ ಬರಿದಾಗಿದ್ದವು. ಇದೀಗ ಹೊಸ ವರ್ಷದಲ್ಲಿ ಶುರುವಾದ ಮಳೆಯಿಂದ ನದಿಗಳಿಗೆ ಜೀವಕಳೆ ಬಂದಂತಾಗಿದೆ.

ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 3 ಮೀಟರ್‌ ಇದ್ದರೆ, ಉಪ್ಪಿನಂಗಡಿಯಲ್ಲಿ 23.8 ಮೀಟರ್‌ ದಾಖಲಾಗಿದೆ. ಇನ್ನು ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯ ನೀರಿನ ಮಟ್ಟ 10 ಮೀಟರ್‌ ಇತ್ತು.

ಪಿಂಡಪ್ರದಾನಕ್ಕಾಗಿ ಉಪ್ಪಿನಂಗಡಿಯ ಬಳಿ ನದಿಯಲ್ಲಿ ನಿರ್ಮಿಸಿರುವ ಶೆಡ್‌ ಜಲಾವೃತಗೊಂಡಿದ್ದು, ಅದರಲ್ಲಿದ್ದ ಕೆಲ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜೊತೆಗೆ ಅಡಿಕೆ ಬೆಳೆಗಾರರಿಗೆ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ.

ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಸುಬ್ರಹ್ಮಣ್ಯ ಸವಾರಿ ಮಂಟಪ ಬಳಿ ಸುಳ್ಯ ರಸ್ತೆಯ ಸೇತುವೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

ಕೆಲವೆಡೆ ರಸ್ತೆಯೂ ಕೆಸರುಮಯವಾಗಿದೆ. ಬಿಳಿನೆಲೆ, ಪಂಜ, ಏನೆಕಲ್ಲು, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಕೈಕಂಬ ಭಾಗದಲ್ಲಿಯೂ ಮಳೆಯಾಗಿದೆ.

ಜಿಲ್ಲೆಯಾದ್ಯಂತ ಮಳೆ:ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗಿನವರೆಗೆ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ 7.7, ಬೆಳ್ತಂಗಡಿ ತಾಲ್ಲೂಕಿನಲ್ಲಿ 6.4, ಮಂಗಳೂರು ತಾಲ್ಲೂಕಿನಲ್ಲಿ 7, ಪುತ್ತೂರು ತಾಲ್ಲೂಕಿನಲ್ಲಿ 3.6 ಹಾಗೂ ಸುಳ್ಯ ತಾಲ್ಲೂಕಿನಲ್ಲಿ 1.2 ಸೆಂ.ಮೀ. ಮಳೆ ದಾಖಲಾಗಿತ್ತು.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗಿನವರೆಗೆ ಬೆಳ್ತಂಗಡಿ ತಾಲ್ಲೂಕಿನಲ್ಲಿ 3.3, ಪುತ್ತೂರು ತಾಲ್ಲೂಕಿನಲ್ಲಿ 4.1 ಹಾಗೂ ಸುಳ್ಯ ತಾಲ್ಲೂಕಿನಲ್ಲಿ 1.7 ಸೆಂ.ಮೀ. ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT