ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಮ ಶಾಲೆಗಳ ಚಿಣ್ಣರ ಕಲರವ

22ನೇ ವರ್ಷದ ಚಿಣ್ಣರ ಉತ್ಸವ.
Last Updated 27 ನವೆಂಬರ್ 2022, 15:26 IST
ಅಕ್ಷರ ಗಾತ್ರ

ಮಂಗಳೂರು: ಚಿಣ್ಣರು ಕಪ್ಪೆಜಿಗಿತ ಜಿಗಿದರು, ನಿಂಬೆ ಹಣ್ಣಿರುವ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು, ಅದು ಕೆಳಗೆ ಬೀಳದಂತೆ ಎಚ್ಚರದಿಂದ ಹೆಜ್ಜೆ ಹಾಕಿದರು, ತಲೆ ಮೇಲೆ ಪುಸ್ತಕ ಹೊತ್ತು ಸಮತೋಲನದಿಂದ ಓಡಿದರು, ಕಾಲುಗಳಲ್ಲಿ ಗೋಣಿಚೀಲ ಧರಿಸಿ ಓಟಕ್ಕಿತ್ತರು.

ಜಿಲ್ಲೆಯ ವಿವಿಧ ಆಶ್ರಮ ಶಾಲೆಗಳ ಚಿಣ್ಣರಿಗೆ ಭಾನುವಾರ ಸಡಗರವೋ ಸಡಗರ. ಅವರ ಈ ಸಂಭ್ರಮಕ್ಕೆ ವೇದಿಕೆ ಕಲ್ಪಿಸಿದ್ದು, ಮಂಗಳೂರು ಸೆಂಟ್ರಲ್‌ ರೋಟರಿ ಕ್ಲಬ್‌ ಮತ್ತು ಮಂಗಳೂರು ಸಿಟಿಯ ರೋಟರ‍್ಯಾಕ್ಟ್‌ ಕ್ಲಬ್‌ಗಳ ಆಶ್ರಯದಲ್ಲಿ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ 22ನೇ ವರ್ಷದ ಚಿಣ್ಣರ ಉತ್ಸವ.

ಉತ್ಸವದಲ್ಲಿ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹುಡುಗರಿಗೆ ಹಾಗೂ ಹುಡುಗಿಯರಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ಬಲ್ಮಠದ ಸ್ವಾಮಿ ಶ್ರದ್ಧಾನಂದ ಸೇವಾಶ್ರಮ, ಕಂಕನಾಡಿಯ ಈಶ್ವರಾನಂದ ಸೇವಾಶ್ರಮ, ಕುತ್ತಾರು ಪದವಿನ ಬಾಲಸಂರಕ್ಷಣಾ ಕೇಂದ್ರ, ಬಂದರ್‌ನ ಝಿನತ್ ಬಕ್ಷ್ ಯತೀಂಖಾನ, ಕೊಂಚಾಡಿಯ ಬಾಲಯೇಸು ನಿಲಯ, ಫಳ್ನೀರ್‌ನ ಡಿ ಮರ್ಸೀಡ್‌ ಆಶ್ರಮ, ಕಾಪಿಕಾಡ್‌ನ ಪ್ರಜ್ಞಾ ಚಿಣ್ಣರ ತಂಗುಧಾಮ, ಬಿಜೈನ ಸೇಂಟ್‌ ಆಗ್ನೆಲಾ ಹೋಮ್‌, ಶಿವಭಾಗ್‌ ಇಂಚರ ಚಿಣ್ಣರ ಮನೆ, ಕುಲಶೇಖರ ಇನ್ಫೆಂಟ್ ಮೇರೀಸ್‌ ಹಾಸ್ಟೆಲ್‌ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದರು.

ಚಿಣ್ಣರ ಉತ್ಸವವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್‌.ಯಡಪಡಿತ್ತಾಯ, ‘ಆಶ್ರಮಗಳ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸಡಗರಕ್ಕೆ ಬೆಲೆ ಕಟ್ಟಲಾಗದು. ಈ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವುದು ಎಲ್ಲರ ಜವಾಬ್ದಾರಿ’ ಎಂದರು.

ರೋಟರಿ ಜಿಲ್ಲೆ 3181ನ ಸಹಾಯಕ ಗವರ್ನರ್‌ ರಾಜಗೋಪಾಲ ರೈ, ಕಾರ್ಯಕ್ರಮದ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಬಿ.ದೇವದಾಸ ರೈ ಇದ್ದರು. ರೋಟರಿ ಕ್ಲಬ್‌ ಅಧ್ಯಕ್ಷ ಸಾಯಿಬಾಬಾ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್‌ ಕುಲಾಲ್‌ ಧನ್ಯವಾದ ಸಮರ್ಪಿಸಿದರು. ರೋಟರ‍್ಯಾಕ್ಟ್‌ ಕ್ಲಬ್‌ ಅಧ್ಯಕ್ಷ ಅರ್ಜುನ್‌ ಪ್ರಕಾಶ್‌ ಹಾಗೂ ಕಾರ್ಯದರ್ಶಿ ಅವಿನಾಶ್ ಇದ್ದರು. ರಾಜೇಶ್‌ ಶೆಟ್ಟಿ ಹಾಗೂ ಶ್ರೀಯಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT