ಶುಕ್ರವಾರ, ಜುಲೈ 30, 2021
28 °C
ಶ್ರೀಗಂಧ ಬೆಳೆಯುವ ಯೋಜನೆಗೆ ಚಾಲನೆ ನೀಡಿದ ಒಡಿಯೂರು ಸ್ವಾಮೀಜಿ

ಅಕೇಶಿಯಾ ಮುಕ್ತ ಕಾಡು ನಿರ್ಮಾಣ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಟ್ಲ: ‘ಪ್ರಕೃತಿಯ ಉಳಿವು ನಮ್ಮಿಂದಲೇ ಆಗಬೇಕು. ಅಕೇಶಿಯಾ ಮಕ್ತ ಕಾಡಿನ ನಿರ್ಮಾಣ ಮಾಡಬೇಕೆಂಬ ಇಚ್ಛೆ ಇದೆ. ಹಣ್ಣು–ಹಂಪಲಿನ ಗಿಡಗಳನ್ನು ನೆಟ್ಟರೆ ಪ್ರಾಣಿ–ಪಕ್ಷಿಗಳಿಗೆ ಆಹಾರವಾಗುತ್ತದೆ. ಔಷಧ ಗಿಡಗಳನ್ನು ಬೆಳೆಸುವ ಯೋಚನೆ ಇದೆ’ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಶ್ರೀಗಳ ಷಷ್ಠ್ಯಬ್ಧಿ ಸಂಭ್ರಮದ ಪ್ರಯುಕ್ತ ಗುರುವಾರ ಮಠದಲ್ಲಿ ನಡೆದ ‘ಮನೆಗೊಂದು ಶ್ರೀಗಂಧದ ಗಿಡ ಬೆಳೆಯೋಣ’ ಯೋಜನೆಯ ಆರಂಭೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ಪರಿಸರ ಹಸಿರಾಗಿದ್ದರೆ ಉತ್ತಮ ಗಾಳಿ ಸಿಗಲು ಸಾಧ್ಯ. ಸಾಧಕನಿಗೆ ಹುಟ್ಟಿದ ದಿನದ ಆಚರಣೆಯ ಅಗತ್ಯವಿಲ್ಲ. ಆ ದಿನದ ನೆಪದಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಅದರಂತೆಯೇ ಸಮಿತಿಗಳ ರಚನೆಯಾಗಿದ್ದು, ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ‘ಕೋವಿಡ್ ಕಾರಣಕ್ಕೆ ಸ್ವಾಮೀಜಿ ಷಷ್ಠ್ಯಬ್ಧಿ ಕಾರ್ಯಕ್ರಮಕ್ಕೆ ತಡೆ ಆಯಿತು. ಕೋವಿಡ್ ನಿಯಮ ಪಾಲನೆಯೊಂದಿಗೆ ಮುಂದಿನ ದಿನಗಳಲ್ಲಿ ಕೆಲವು ಕಾರ್ಯಕ್ರಮ ನಡೆಯಲಿದೆ. ಆಮ್ಲಜನಕಕ್ಕೆ ಜನರು ಪರಿತಪಿಸುವ ಕಾಲಘಟ್ಟ ಇದಾಗಿದೆ. ಈ ಸಂದರ್ಭದಲ್ಲಿ ಸಂಸ್ಥಾನದಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ’ ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ‘ಶ್ರೀಗಂಧದಬೀಡು ಈ ತುಳು ನಾಡಾಗಬೇಕೆಂಬುದು ಸ್ವಾಮೀಜಿ ಇಚ್ಛೆಯಾಗಿದೆ. ನಾವು ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕು’ ಎಂದರು.

ವೇದಿಕೆಯಲ್ಲಿ ಸಾಧ್ವಿ ಮಾತಾ ನಂದಮಯಿ, ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್, ಪುತ್ತೂರು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳೆಗಾರ್, ಬಂಟ್ವಾಳ ಸಾಮಾಜಿಕ ಅರಣ್ಯಾಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ಭಂಡಾರಿ ಪ್ರಾರ್ಥಿಸಿದರು. ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಯಶವಂತ ವಿಟ್ಲ ಹಾಗೂ ನವನೀತ ಶೆಟ್ಟಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.