ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಕಾರ್ಮಿಕರ ಕೊರತೆ

Last Updated 5 ಸೆಪ್ಟೆಂಬರ್ 2020, 19:46 IST
ಅಕ್ಷರ ಗಾತ್ರ

ಮಂಗಳೂರು: 'ಕಡಲಿಗೆ ಇಳಿಯುವುದೆಂದರೆ ಸುಲಭವಲ್ಲ. ಅದೂ 10 ರಿಂದ 12 ದಿನಗಳವರೆಗೆ ಸಮುದ್ರದಲ್ಲಿಯೇ ಉಳಿಯುವುದಕ್ಕೆ ಎಂಟೆದೆಯೂ ಬೇಕು. ಜೊತೆಗೆ ಸ್ಥಳೀಯರು ಒಂದೆರಡು ದಿನಗಳ‌ ಮೀನುಗಾರಿಕೆಗೇ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ನಾವು ಅನ್ಯ ರಾಜ್ಯದ ಕಾರ್ಮಿಕರನ್ನು ಅವಲಂಬಿಸುವುದು ಅನಿವಾರ್ಯ'.

ಮೀನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿರುವ ಬೋಟ್‌ಗಳ ಮಾಲೀಕರ ಸ್ಪಷ್ಟ ಮಾತುಗಳಿವು. ಕಾರ್ಮಿಕರು ಯಾವಾಗ ಬರುತ್ತಾರೆ ಎನ್ನುವುದನ್ನು ನೋಡಿಕೊಂಡೇ ಮೀನುಗಾರಿಕೆಯ ಮುಹೂರ್ತವೂ ನಿಗದಿಯಾಗುತ್ತದೆ.

ಕರಾವಳಿಯಲ್ಲಿ ಸ್ಥಳೀಯ ಕಾರ್ಮಿಕರ ಕೊರತೆ ಇಲ್ಲ. ಆದರೆ, ಆಳ ಸಮುದ್ರದ ಮೀನುಗಾರಿಕೆಗೆ ಆಸಕ್ತಿ ತೋರುವುದಿಲ್ಲ. ಅವರದು ಏನಿದ್ದರೂ ಒಂದೆರಡು ದಿನಗಳ ಮೀನುಗಾರಿಕೆ ಮಾತ್ರ.

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಸುಮಾರು 1,200 ದಷ್ಟು ಬೋಟ್‌ಗಳಿವೆ. 30 ಸಾವಿರದಷ್ಟು ಕಾರ್ಮಿಕರು ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಪರೋಕ್ಷವಾಗಿ ಇಷ್ಟೇ ಮಂದಿ ಇದನ್ನು ಅವಲಂಬಿಸಿದ್ದಾರೆ. ಸಾಮಾನ್ಯವಾಗಿ ಒಂದು ಬೋಟು ಸಮುದ್ರದಲ್ಲಿ ಮೀನು ಹಿಡಿದು ತಂದರೆ, ಅದರಿಂದ ಐಸ್‌ ಮಾರಾಟಗಾರರು, ಬೋಟ್‌ಗಳಿಂದ ಮೀನು ತೆಗೆಯುವ ಕಾರ್ಮಿಕರಿಗೂ ಕೆಲಸ ಸಿಗುವ ಜತೆಗೆ ವ್ಯಾಪಾರವೂ ಆಗುತ್ತದೆ.

ಅರ್ಧಕ್ಕಿಂತ ಹೆಚ್ಚು ಬೋಟ್ ಗಳು ದಡದಲ್ಲಿ: ’ಮಂಗಳೂರಿನ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಶೇ 60ರಷ್ಟು ಬೋಟ್‌ಗಳು ಈಗ ದಡದಲ್ಲಿವೆ. ಮೀನುಗಾರಿಕೆಗೆ ತೆರಳುವ ಹೆಚ್ಚಿನ ಮೀನು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ ಮೂಲದವರು. ಈಗ ತಮಿಳುನಾಡು, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಶೇ 30 ರಷ್ಟು ಕಾರ್ಮಿಕರು ಮಾತ್ರ ಮರಳಿದ್ದಾರೆ. ಆಂಧ್ರಪ್ರದೇಶದ ಕಾರ್ಮಿಕರು ಮಹಾಲಯ ಅಮಾವಾಸ್ಯೆಯ ನಂತರ ಹಿಂದಿರುಗುವುದಾಗಿ ಹೇಳಿದ್ದಾರೆ‘ ಎಂದು ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಮೋಹನ ಬೆಂಗ್ರೆ ಹೇಳುತ್ತಾರೆ.

’ಸದ್ಯಕ್ಕೆ ಶೇ 40 ರಷ್ಡು ಪರ್ಸಿನ್, ಶೇ 30 ರಷ್ಟು ಟ್ರಾಲ್ ಬೋಟ್ ಗಳು ಮಾತ್ರ ಮೀನುಗಾರಿಕೆಗೆ ತೆರಳುತ್ತಿವೆ.‌ ಇನ್ನೂ ಪೂರ್ಣಪ್ರ‌ಮಾಣದ ಮೀನುಗಾರಿಕೆ‌ ಆರಂಭ ಆಗಿಲ್ಲ‘ ಎನ್ನುತ್ತಾರೆ ಅವರು.

’ಈ ಬಾರಿ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೋಟ್‌ಗಳು ಒಂದು ಬಾರಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದರೆ ₹ 7 ಲಕ್ಷ ಮೌಲ್ಯದ ಮೀನು ತರಲೇಬೇಕು. ಸುಮಾರು ₹4 ಲಕ್ಷದಷ್ಟು ಖರ್ಚು ಕೇವಲ ಬೋಟ್‌ಗಳ ಡಿಸೇಲ್‌ಗೆ ತಗಲುತ್ತದೆ. ಇನ್ನು ಕಾರ್ಮಿಕರ‌ ವೇತನ, ಅಡುಗೆ ಸಾಮಗ್ರಿಗಳನ್ನೂ ಒದಗಿಸಬೇಕು‘ ಎಂದು ಮೋಹನ್ ಬೇಂಗ್ರೆ ಹೇಳುತ್ತಾರೆ.

ಇಲ್ಲಿನ ಜನರು ನದಿ ಹಾಗೂ ಒಂದು ದಿನ ಮೀನುಗಾರಿಕೆಗೆ ಒತ್ತು ನೀಡುತ್ತಾರೆ. ವಿದ್ಯಾವಂತರಾಗಿರುವ ಕೆಲವರು ಮೀನುಗಾರಿಕೆಯಿಂದ ದೂರ ಸರಿದಿದ್ದಾರೆ. ಆದ್ದರಿಂದ ಹೊರ ರಾಜ್ಯದ ಕಾರ್ಮಿಕರನ್ನೇ ನಾವು ಅವಲಂಬಿಸಬೇಕಾಗಿದೆ ಎಂದು ಅವರು ಹೇಳಿದರು.

’ಒಂದು ಟ್ರಾಲ್ ಬೋಟ್ ಮೀನುಗಾರಿಕೆಗೆ ತೆರಳಿದರೆ ಮರಳಿ ಬರುವುದು ಎರಡು ವಾರಗಳ ನಂತರವೇ. ಅಷ್ಟೊಂದು ದಿನ ಸಮುದ್ರದಲ್ಲಿ ಇರುವುದಕ್ಕೆ ಸ್ಥಳೀಯ ಜನರು ಮುಂದೆ ಬರುತ್ತಿಲ್ಲ. ಅಲ್ಲದೇ ಇಲ್ಲಿ ಸುಮಾರು 200 ಕ್ಕೂ ಅಧಿಕ ನಾಡದೋಣಿಗಳಿದ್ದು, ಬೆಳಿಗ್ಗೆ ಹೋಗಿ ಸಂಜೆ ಮೀನಿನೊಂದಿಗೆ ಮರಳುತ್ತವೆ. ಸ್ಥಳೀಯ ಮೀನಿಗಾರರು ನಾಡದೋಣಿಯ ಮೀನುಗಾರಿಕೆಗೆ ಒಲವು ತೋರುತ್ತಾರೆ‘ ಎನ್ನುವುದು ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಹೇಳುವ ಮಾತು.

’ಸ್ಥಳೀಯ ಮೀನುಗಾರರಿಗೆ ತರಬೇತಿಯ ಅಗತ್ಯವೇ ಇಲ್ಲ. ಪಾರಂಪರಿಕವಾಗಿ ಮೀನುಗಾರಿಕೆ ನಡೆಸಿಕೊಂಡು ಬರುತ್ತಿದ್ದಾರೆ‌. ಒಂದು- ಎರಡು ದಿನಗಳ ಮೀನುಗಾರಿಕೆಗೆ ಬರುತ್ತಾರೆ. ಆದರೆ, ಟ್ರಾಲ್ ಬೋಟ್ ಗಳಲ್ಲಿ ಕನಿಷ್ಠ 10 ದಿನವಾದರೂ ಮೀನುಗಾರಿಕೆ ನಡೆಸಿದರೆ ಮಾತ್ರ ಆದಾಯ ಗಳಿಸಲು ಸಾಧ್ಯ‘ ಎಂದು ಹೇಳುತ್ತಾರೆ.

ಇಲ್ಲಿಯೇ ಮನೆಗಳು ಇರುವುದರಿಂದ ಸಂಜೆಯೊಳಗೆ ಹಿಂದಿರುಗಬೇಕು ಎನ್ನುವ ಮನೋಭಾವವೇ ಹೆಚ್ಚು. ಹಾಗಾಗಿ ಸ್ಥಳೀಯ ಜನರು ಆಳ ಸಮುದ್ರ ಮೀನುಗಾರಿಕೆಗೆ ಹಿಂದೇಟು ಹಾಕುತ್ತಾರೆ ಎಂದು ಬೋಟ್ ಮಾಲೀಕ ಇಬ್ರಾಹಿಂ ಬೆಂಗ್ರೆ
ನುಡಿದರು.

60 ಸಾವಿರ ಕಾರ್ಮಿಕರು

ಪರ್ಸಿನ್ ಹಾಗೂ ಟ್ರಾಲ್ ಬೋಟ್‌ಗಳು ಸೇರಿ ಮಂಗಳೂರಿನಲ್ಲಿ 1,200 ಹಾಗೂ ಮಲ್ಪೆ ದಕ್ಕೆಯಲ್ಲಿ 1,800 ಬೋಟ್ಗಳಿವೆ. ಇದರಲ್ಲಿ ಸರಿಸುಮಾರು 30‌ ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಪೈಕಿ ಶೇ 80ರಷ್ಟು ಕಾರ್ಮಿಕರು ಆಂಧ್ರ ಪ್ರದೇಶ ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳಿಗೆ ಸೇರಿದವರು. ಮೀನುಗಾರಿಕೆಗೆ ಅಗತ್ಯವಾದ ಮಂಜುಗಡ್ಡೆ ಘಟಕಗಳು ಮತ್ತು ಫಿಶ್ ಮಿಲ್‌ಗಳಲ್ಲೂ ಹೊರ ರಾಜ್ಯದ 28 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಬೋಟ್‌ಗಳಿಗೆ ಕೋಟ್ಯಂತರ ವೆಚ್ಚ

ಪರ್ಸಿನ್, ಟ್ರಾಲ್‌ ಮತ್ತು ಸ್ಪೀಡ್ ಬೋಟ್‌ಗಳ ಜೊತೆಗೆ ಸಾಂಪ್ರದಾಯಿಕ ದೋಣಿಗಳು, ನಾಡದೋಣಿಗಳು ಸಹ ಇವೆ. ದೋಣಿಗಳು ಮತ್ತು ಬೋಟ್‌ಗಳ ತಯಾರಿಕೆಗೆ ತಗಲುವ ವೆಚ್ಚ ಅವುಗಳ ಗಾತ್ರದ ಮೇಲೆ ಅವಲಂಬಿತವಾಗಿರುತ್ತದೆ. ಈ ಸಾಂಪ್ರದಾಯಿಕ ದೋಣಿಗಳ ತಯಾರಿಕೆಗೆ ಕನಿಷ್ಠವೆಂದರೆ ಸುಮಾರು ₹30 ರಿಂದ 35 ಸಾವಿರಗಳು ಖರ್ಚಾದರೆ, ನಾಡದೋಣಿಗಳಿಗೆ ₹45-50 ಸಾವಿರಗಳು ಖರ್ಚಾಗುತ್ತದೆ. ಒಂದು ಪರ್ಶಿಯನ್ ಬೋಟ್‌ಗಳ ನಿರ್ಮಾಣಕ್ಕೆ ₹1.5 ರಿಂದ ₹2 ಕೋಟಿ ಬೇಕಾಗುತ್ತದೆ. ಇನ್ನು ಬೋಟ್‌ಗಳು ಉಪಯೋಗಿಸುವ ಬಲೆಗಳು ಕನಿಷ್ಠ ₹30-40 ಲಕ್ಷಗಳು ಬೆಲೆ ಬಾಳುತ್ತವೆ.

ವಿವಿಧ ಮೀನುಗಳಿಗೆ ಬಲೆ ಹಾಕುವುದರಿಂದ ಹಲವು ಬಗೆಯ ಬಲೆಗಳ ಅವಶ್ಯಕತೆಗಳಿರುತ್ತವೆ. ಸಾಪ್ರದಾಯಿಕ ದೋಣಿಗಳು ಬಲೆ ಬೀಸುವುದು, ಎಳೆಯುವ ಬಲೆ ಮತ್ತೆ ಬಲೆ ಹಾಕುವುದರಿಂದ ಮೀನುಗಾರಿಕೆ ನಡೆಸುತ್ತಾರೆ. ಆದರೆ, ಮರಳು ತೆಗೆಯುವುದರಿಂದ ಮತ್ತು ಅತಿಯಾದ ಡೈನಮೋಗಳ ಬಳಕೆಯಿಂದ ಮೀನು ಮೇಲೆ ಬರುವುದಿಲ್ಲ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಗಳಿಗೆ ತೊಂದರೆಯಾಗುತ್ತಲೇ ಇದೆ.

ಫಿಶ್‌ ಮಿಲ್‌ ಘಟಕಗಳ ವಿವರ

ದೇಶದಲ್ಲಿ 56 ಘಟಕಗಳು

ರಾಜ್ಯದಲ್ಲಿ 34 ಘಟಕಗಳು

ಶೇ 70ರಷ್ಟು ಮೀನು ಖರೀದಿ

ವಾರ್ಷಿಕ ₹20 ಸಾವಿರ ಕೋಟಿ ವಹಿವಾಟು

ಮಂಜುಗಡ್ಡೆ ಘಟಕಗಳು

ಉಡುಪಿ–70

ದಕ್ಷಿಣ ಕನ್ನಡ– 79

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT