ಭಾನುವಾರ, ನವೆಂಬರ್ 28, 2021
20 °C
ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲೆಗಳು ಆರಂಭ: ಮುನ್ನೆಚ್ಚರಿಕೆಯೊಂದಿಗೆ ತರಗತಿ

ಶಾಲೆಗಳತ್ತ ಚಿಣ್ಣರು: ಅಂಗಡಿಗಳತ್ತ ಪೋಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಜ್ಯದಾದ್ಯಂತ 1 ರಿಂದ 5 ನೇ ತರಗತಿಯವರೆಗಿನ ಶಾಲೆಗಳು ಸೋಮವಾರದಿಂದ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಚಿಣ್ಣರು ಸುಮಾರು ಒಂದೂವರೆ ವರ್ಷದ ನಂತರ ಶಾಲೆಗಳಿಗೆ ಮರಳಿದರು. ಮೊದಲ ದಿನವೇ ಉತ್ಸಾಹದಿಂದ ಮಕ್ಕಳು ತರಗತಿಗೆ ಹಾಜರಾಗಿದ್ದರು.

ಮತ್ತೆ ಸ್ನೇಹಿತರು, ಶಿಕ್ಷಕರನ್ನು ಭೇಟಿ ಮಾಡುವುದರ ಜೊತೆಗೆ ಶಾಲೆಯಲ್ಲಿನ ಸಂತಸ ಕ್ಷಣಗಳನ್ನು ಮೆಲುಕು ಹಾಕಿದರು. ಇದರ ಜೊತೆಗೆ ಕೆಲ ವಿದ್ಯಾರ್ಥಿಗಳು, ಸ್ನೇಹಿತರ ಜೊತೆಗೆ ಕೂಡುವುದು ಹಾಗೂ ವಿದ್ಯಾಭ್ಯಾಸದ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸಿದ ಉದಾಹರಣೆಗಳು ಸಿಕ್ಕವು.

6 ರಿಂದ 10 ನೇ ತರಗತಿವರೆಗೆ ಈಗಾಗಲೇ ಆರಂಭವಾಗಿದ್ದು, ಭೌತಿಕ ತರಗತಿಗಳನ್ನು ನಡೆಸಲಾಗುತ್ತಿದೆ. ಜೊತೆಗೆ ಪರೀಕ್ಷೆಗಳನ್ನು ನಡೆಸ
ಲಾಗುತ್ತಿದೆ. ಇದೀಗ ಎರಡನೇ ಹಂತದಲ್ಲಿ ಪ್ರಾಥಮಿಕ ಶಾಲೆಗಳು ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಈ ಹಿಂದಿನ ಅನುಭವದಂತೆ ವಿದ್ಯಾರ್ಥಿಗಳು ತರಗತಿಗಳಿಗೆ ಹೊಂದಿಕೊಳ್ಳಲು ಸರ್ಕಾರ ಒಂದು ವಾರದ ಕಾಲಾವಕಾಶ ನೀಡಿದೆ. ಸದ್ಯಕ್ಕೆ ಅರ್ಧ ದಿನ ತರಗತಿಗಳನ್ನು ನಡೆಸಲಾಗುತ್ತಿದ್ದು, ನವೆಂಬರ್‌ 2 ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಿದೆ.

ಸಮವಸ್ತ್ರ, ಶುಲ್ಕದ ಚಿಂತೆ: ಒಂದೆಡೆ ವಿದ್ಯಾರ್ಥಿಗಳಿಗೆ ಶಾಲೆಯ ಬಾಗಿಲು ತೆರೆದಿದ್ದರೆ, ಇನ್ನೊಂದೆಡೆ ಪಾಲಕರಿಗೆ ಶುಲ್ಕ ಹಾಗೂ ಸಮವಸ್ತ್ರದ ಚಿಂತೆ ಕಾಡುತ್ತಿದೆ. ಈಗಾಗಲೇ ಪ್ರೌಢಶಾಲೆಯ ತರಗತಿಗಳು ಆರಂಭವಾಗಿದ್ದು, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅದಕ್ಕೂ ಮೊದಲು ಒಂದು ಮತ್ತು ಎರಡನೇ ಕಂತಿನ ಶಾಲಾ ಶುಲ್ಕ ಪಾವತಿಸುವ ಅನಿವಾರ್ಯತೆಯೂ ಪಾಲಕರದ್ದಾಗಿದೆ.

ಕಳೆದ ವರ್ಷದ ಶಿಕ್ಷಣ ಸಂಸ್ಥೆಗಳು ಶುಲ್ಕದಲ್ಲಿ ಶೇ 30 ರಷ್ಟು ರಿಯಾಯಿತಿ ನೀಡಿದ್ದವು. ಆದರೆ, ಈ ವರ್ಷ ಈಗಲೇ ಶಾಲೆಗಳು ಆರಂಭವಾಗಿರುವುದರಿಂದ ಯಾವುದೇ ವಿನಾಯಿತಿ ನೀಡಲು ಮುಂದಾಗಿಲ್ಲ. ಹೀಗಾಗಿ ಪೂರ್ಣಪ್ರಮಾಣದ ಶುಲ್ಕ ಪಾವತಿಸಲೇಬೇಕಾಗಿದೆ.

ಇನ್ನೊಂದೆಡೆ ವಿದ್ಯಾರ್ಥಿಗಳ ಪಾಲಕರು ಶಾಲಾ ಸಮವಸ್ತ್ರಕ್ಕಾಗಿ ಬಟ್ಟೆ ಅಂಗಡಿಗಳ ಮುಂದೆ ಸರದಿ ನಿಲ್ಲುವಂತಾಗಿದೆ. ಒಂದೂವರೆ ವರ್ಷದ ಹಿಂದಿನ ಸಮವಸ್ತ್ರಗಳು ಮಕ್ಕಳಿಗೆ ಬರುತ್ತಿಲ್ಲ. ಹಾಗಾಗಿ ಹೊಸ ಬಟ್ಟೆ ಖರೀದಿಸಬೇಕಾಗಿದೆ. ಇದಕ್ಕಾಗಿ ಸಮವಸ್ತ್ರದ ಅಂಗಡಿಗಳು ಪಾಲಕರಿಂದ ತುಂಬಿ ತುಳುಕುತ್ತಿದ್ದವು.

ಸದ್ಯದ ಪರಿಸ್ಥಿತಿಯಲ್ಲಿ ಶಾಲಾ ಶುಲ್ಕವನ್ನು ಪಾವತಿಸಬೇಕು. ಇದರ ಜೊತೆಗೆ ಸಮವಸ್ತ್ರ, ನೋಟ್‌ಬುಕ್‌ಗಳನ್ನೂ ಖರೀದಿಸಬೇಕು. ಎಲ್ಲ ವಸ್ತುಗಳ ದರವೂ ಹೆಚ್ಚಾಗಿದೆ. ಹಣ ಹೊಂದಿಸುವುದೇ ದುಸ್ತರವಾಗಿದೆ ಎಂದು ಪಾಲಕರು ಅಳಲು ತೋಡಿಕೊಂಡರು.

ಕುಣಿದು ಸಂಭ್ರಮಿಸಿದ ಶಾಲಾ ಮಕ್ಕಳು

ಬಂಟ್ವಾಳ: ಇಲ್ಲಿನ ನಲ್ಕೆಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳನ್ನು ಸೋಮವಾರ ಬ್ಯಾಂಡ್ ವಾದ್ಯಗಳೊಂದಿಗೆ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಅದ್ಧೂರಿಯಾಗಿ ಸ್ವಾಗತಿಸಿದರು.

6 ಮತ್ತು 7ನೇ ತರಗತಿ ಸ್ಕೌಟ್ಸ್‌ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬ್ಯಾಂಡ್ ನುಡಿಸಿದರು. ಬಣ್ಣದ ಬಲೂನುಗಳಿಂದ ಶಾಲೆಯನ್ನು ಅಲಂಕರಿಸಿದ್ದ ಶಿಕ್ಷಕಿಯರು, ಆರತಿ ಎತ್ತಿ, ಕುಂಕುಮ ಹಣೆಗಿಟ್ಟು ಮಕ್ಕಳನ್ನು ಬರಮಾಡಿಕೊಂಡರು. ಬಣ್ಣ ಬಣ್ಣದ ಉಡುಗೆ ತೊಟ್ಟಿದ್ದ ಮಕ್ಕಳು ಶಿಕ್ಷಕಿ ರೇಖಾ ರಾವ್ ಹಾಡಿದ ಹಾಡಿಗೆ ಕುಣಿದು ಸಂಭ್ರಮಿಸಿದರು. ಅಮ್ಟಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನಿಲ್ ಕುಮಾರ್, ಪಿಡಿಒ ರವಿ, ಮುಖ್ಯಶಿಕ್ಷಕಿ ಜ್ಯೋತಿ, ಶಿಕ್ಷಕಿ ಶಶಿಕಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು