ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ದೃಢಪಟ್ಟವರನ್ನು ಸ್ಥಳಾಂತರಿಸಿ: ಶಾಸಕ ಸಂಜೀವ ಮಠಂದೂರು ಸೂಚನೆ

Last Updated 13 ಜೂನ್ 2021, 4:38 IST
ಅಕ್ಷರ ಗಾತ್ರ

ಪುತ್ತೂರು: ಕೋವಿಡ್ ನಿಯಂತ್ರಣದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆರೋಗ್ಯ ಇಲಾಖೆ ಮತ್ತು ಕೋವಿಡ್ ಕಾರ್ಯಪಡೆ ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಕೋವಿಡ್ ದೃಢಪಟ್ಟವರನ್ನು ತಕ್ಷಣ ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಶೇ 100ರ ಸಾಧನೆಯಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ನೋಡಲ್ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಹಾಗೂ ಪೌರಾಯುಕ್ತ ಮಧು ಎಂ.ಎಸ್ ಅವರು ಕೋವಿಡ್ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು, ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಜತೆಗೆ, ಡೆಂಗಿ, ಮಲೇರಿಯ ನಿಯಂತ್ರಣಕ್ಕೆ ಸಂಬಂಧಿಸಿ ಕೈಗೊಂಡ ಮುಂಜಾಗ್ರತಾ ಕ್ರಮಗಳು ಮತ್ತು ಲಸಿಕೆ ವಿತರಣೆ ಕುರಿತು ಮಾಹಿತಿ ನೀಡಿದರು.

‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನ 75ಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಬೇಕು. ನಗರದ ಒಂದು ಫ್ಲಾಟ್‌ನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಲ್ಲಿ, ಆ ಫ್ಲಾಟ್‌ನಲ್ಲಿರುವ ಎಲ್ಲರ ಕೋವಿಡ್ ಪರೀಕ್ಷೆ ನಡೆಸಬೇಕು. ಗ್ರಾಮೀಣ ಪ್ರದೇಶದಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾದಲ್ಲಿ, ಆ ವ್ಯಾಪ್ತಿಯ 50 ಮನೆಗಳ ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಬೇಕು. ಇಂತಹ ಪ್ರದೇಶಗಳಿಗೆ ತೆರಳಿ ಅಲ್ಲಿಯೇ ತಪಾಸಣೆಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಸೂಚನೆ ನೀಡಿದರು.

ಕೋವಿಡ್ ತಡೆಗಾಗಿ ಹಮ್ಮಿಕೊಂಡಿದ್ದ ‘ವೈದ್ಯರ ನಡೆ ಹಳ್ಳಿ ಕಡೆಗೆ’ ಯೋಜನೆಯಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾಗಿಲ್ಲ. ಈ ತಂಡಕ್ಕೆ ಎಲ್ಲ ವ್ಯವಸ್ಥೆ ಕಲ್ಪಿಸಿದರೂ ಉಪಯೋಗವಾಗಲಿಲ್ಲ ಎಂದು ಶಾಸಕರು ಹೇಳಿದರು.

ಯೋಜನೆಯಲ್ಲಿ ವೈದ್ಯರ ಬದಲು ತಂತ್ರಜ್ಞರನ್ನು ಬಳಕೆ ಮಾಡಿಕೊಂಡಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಡಾ.ಯತೀಶ್ ಉಳ್ಳಾಲ್ ಸಲಹೆ ನೀಡಿದರು. ತಹಶೀಲ್ದಾರ್ ರಮೇಶ್ ಬಾಬು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT