ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಲಾಕ್‌ಡೌನ್‌ನಲ್ಲಿ ಸಿದ್ಧವಾಯ್ತು 35 ಪಕ್ಷಿಗಳ ಚರಿತ್ರೆ

ಸೋದರಿಯರ ಸಾಧನೆ | ಪುತ್ತೂರು ತಾಲ್ಲೂಕಿನ ಮಾಡಾವಿನಲ್ಲಿ ಸಹೋದರಿಯರ ವಿಶಿಷ್ಟ ಕಾರ್ಯ
Last Updated 15 ಸೆಪ್ಟೆಂಬರ್ 2020, 7:45 IST
ಅಕ್ಷರ ಗಾತ್ರ

ಮಂಗಳೂರು: ಶಾಲೆಗಳಿಗೆ ರಜೆ ಇರುವ ಸಂದರ್ಭದಲ್ಲಿ ಹಲವು ಮಕ್ಕಳು ಮೊಬೈಲ್‌ ಸೇರಿದಂತೆ ವಿವಿಧ ಗ್ಯಾಜೆಟ್‌‌ಗಳಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲೆಯ ಪುತ್ತೂರು ತಾಲ್ಲೂಕಿನ ಮಾಡಾವು ಗ್ರಾಮದಲ್ಲಿರುವ ಸಹೋದರಿಯರಿಬ್ಬರು ಲಾಕ್‌ಡೌನ್‌ ಸಂದರ್ಭದಲ್ಲಿ ವಿವಿಧ ಬಗೆಯ 35 ಹಕ್ಕಿಗಳ ದಾಖಲೀಕರಣ ಮಾಡಿದ್ದಾರೆ.

14 ವರ್ಷದ ಧೃತಿ ಹಾಗೂ 12 ವರ್ಷದ ದಿಯಾ ಈ ಸಾಧನೆ ಮಾಡಿದಸಹೋದರಿಯರು. ಪಾಲಕರಾದ ಮಮತಾ ರೈ ಮತ್ತು ಬಿ.ಸಿ. ಶೆಟ್ಟಿ ಅವರು ಕಾರ್ಕಳದಲ್ಲಿ ನೆಲೆಸಿದ್ದು, ಉಡುಪಿ ಜಿಲ್ಲೆಯ ಕೈಮಗ್ಗ ಸೀರೆಗಳ ಪುನರಜ್ಜೀವನ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಬಹಳಷ್ಟು ಸಮಯ ಅದರಲ್ಲಿಯೇ ಕಳೆಯುತ್ತಿದ್ದುದರಿಂದ ರಜೆಯಲ್ಲಿ ಸಹೋದರಿಯರನ್ನು ಅಜ್ಜಿಯ ಮನೆಗೆ ಕಳುಹಿಸಲಾಗಿತ್ತು.

‘9 ನೇ ತರಗತಿ ಓದುತ್ತಿರುವ ಧೃತಿ ಹಾಗೂ 7 ನೇ ತರಗತಿ ಓದುತ್ತಿರುವ ದಿಯಾರನ್ನು ಅಜ್ಜಿಯ ಮನೆಯಾದ ಮಾಡಾವು ಗ್ರಾಮದಲ್ಲಿ ಬಿಟ್ಟಿದ್ದೇವೆ. ಗ್ರಾಮದಲ್ಲಿ ಸೀಮಿತ ಮೊಬೈಲ್‌ ನೆಟ್‌ವರ್ಕ್‌ ಇದ್ದು, ಅವರಿಬ್ಬರು ಹಳ್ಳಿಯ ಜೀವನವನ್ನು ಆನಂದಿಸುತ್ತಿದ್ದಾರೆ. ಮೊದಲಿನಿಂದಲೂ ಹಕ್ಕಿಗಳ ಬಗ್ಗೆ ಆಸಕ್ತಿ ಇದ್ದ ಇವರು, ರಜೆಯ ಅವಧಿಯಲ್ಲಿ ಅಜ್ಜಿಯ ಮನೆಯ ಹಿಂಭಾಗದಲ್ಲಿ ಕಂಡು ಬಂದ 35 ಪಕ್ಷಿಗಳ ಬಗ್ಗೆ ದಾಖಲೀಕರಣ ಮಾಡಿರುವುದು ಸಂತಸ ತಂದಿದೆ’ ಎಂದು ತಾಯಿ ಮಮತಾ ರೈ ತಿಳಿಸಿದ್ದಾರೆ.

‘ನಾವು ಪರಿಸರದ ಮಧ್ಯೆಯೇ ಬೆಳೆದಿದ್ದು, ಪಕ್ಷಿಗಳಿಗೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿದ್ದೇವೆ. ಅಜ್ಜಿಯ ಮನೆ ಹಿಂಭಾಗದಲ್ಲಿ ಸಾಕಷ್ಟು ಮರಗಳಿದ್ದು, ಪಕ್ಷಿಗಳನ್ನು ಆಕರ್ಷಿಸುತ್ತವೆ. ಹೀಗಾಗಿ ನಿತ್ಯ ಹಕ್ಕಿಗಳ ಕಲರವ ಕೇಳುವುದೇ ಒಂದು ಸಂತಸ’ ಎಂದು ಧೃತಿ ಹೇಳುತ್ತಾರೆ.

‘ನಾವು ನಮ್ಮ ಭೂಮಿಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದೂ ಸೇರಿದಂತೆ ಪರಿಸರ ಮಾಲಿನ್ಯ ತಡೆಗಟ್ಟುವ ಜೀವನ ಕ್ರಮ ಅಳವಡಿಸಿಕೊಳ್ಳುವುದು ಅಗತ್ಯ. ನಾವು ಗಿಡಗಳನ್ನು ಬೆಳೆಸುವುದರಿಂದ ನೆರಳು, ಆಮ್ಲಜನಕದ ಜೊತೆಗೆ ಹಲವಾರು ಪಕ್ಷಿಗಳಿಗೂ ಆಶ್ರಯ ಸಿಗುತ್ತದೆ’ ಎಂದು ದಿಯಾ ಹೇಳುತ್ತಾರೆ.

ಲೇಖಕಿಯಾಗುವ ಆಸೆ ಇರುವ ಧೃತಿ ಹಾಗೂ ಬ್ಯಾಂಕ್‌ ಉದ್ಯೋಗಿಯಾಗುವ ಕನಸಿರುವ ದಿಯಾ ಸೇರಿ ಚಿಟ್ಟೆ, ಕ್ರಿಮಿ–ಕೀಟಗಳು ಹಾಗೂ ಸಾಮಾನ್ಯ ಹಾವುಗಳ ಬಗೆಗೂ ದಾಖಲೀಕರಣ ಮಾಡಿದ್ದಾರೆ.

ತಂದೆಗೆ ಕಿರು ಪುಸ್ತಕ ಕೊಡುಗೆ

ಈ ಹಿಂದೆಯೂ ಕಾರ್ಕಳದ ರಾಮಸಮುದ್ರ ಕೆರೆಯ ಸುತ್ತ ಕಂಡು ಬಂದ 40 ಪಕ್ಷಿಗಳ ಬಗ್ಗೆ ದಾಖಲೀಕರಣ ಮಾಡಿದ್ದರು. ಪ್ರತಿ ಪಕ್ಷಿಯ ಚಿತ್ರವನ್ನು ಬರೆದು, ಅದಕ್ಕೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿಯನ್ನು ಹಾಕಿರುವ ಕಿರು ಪುಸ್ತಕವನ್ನು ತಮ್ಮ ತಂದೆ ಬಿ.ಸಿ. ಶೆಟ್ಟಿ ಅವರಿಗೆ ಜನ್ಮದಿನದ ಕೊಡುಗೆಯಾಗಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT