ಶನಿವಾರ, ಡಿಸೆಂಬರ್ 5, 2020
24 °C
ಮೀನುಗಾರಿಕೆ ಕೌಶಲಾಭಿವೃದ್ಧಿ ಕೇಂದ್ರ: ಸ್ಮಾರ್ಟ್‌ ಸಿಟಿ ಜತೆ ಒಪ್ಪಂದ

2 ವರ್ಷಗಳಲ್ಲಿ 360 ಮಂದಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೇಶದ ಮೊದಲ ಮೀನುಗಾರಿಕಾ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ರಾಜ್ಯದ ಏಕೈಕ ಮೀನುಗಾರಿಕೆ ಕಾಲೇಜು, ಇದೀಗ ಮೀನುಗಾರರ ಕೌಶಲ ವೃದ್ಧಿಗೆ ಮುಂದಾಗಿದೆ. ಸಂಕಷ್ಟದ ಸುಳಿಗೆ ಸಿಲುಕಿರುವ ಮೀನುಗಾರರಿಗೆ ಆದಾಯ ಗಳಿಸುವ ಮಾರ್ಗಗಳನ್ನು ಕಲಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಯಿಗೆ ಬಜಾರ್‌ನಲ್ಲಿರುವ ಕಾಲೇಜಿನ ತಾಂತ್ರಿಕ ವಿಭಾಗದಲ್ಲಿ ಸುಮಾರು ₹4.75 ಕೋಟಿ ವೆಚ್ಚದಲ್ಲಿ ಕೌಶಲಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಮೀನುಗಾರಿಕೆ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಕುಮಾರನಾಯ್ಕ ಎ.ಎಸ್. ಸಲ್ಲಿಸಿದ ಯೋಜನಾ ವರದಿಯನ್ನು ಪರಿಗಣಿಸಿ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಈ ಯೋಜನೆಗೆ ಆರ್ಥಿಕ ನೆರವು ನೀಡಿದೆ.

ತರಬೇತಿ ಕೇಂದ್ರದ ಕಟ್ಟಡವನ್ನು 9 ತಿಂಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರದ ಸ್ಥಾಪನೆಯ ನಂತರ ಎರಡು ವರ್ಷಗಳವರೆಗೆ ಒಟ್ಟು 360 ಶಿಬಿರಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಮೀನುಗಾರಿಕೆ ಕಾಲೇಜಿನದ್ದಾಗಿದೆ. ಪ್ರತಿ ಶಿಬಿರಕ್ಕೆ ತಲಾ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ 30 ದಿನಗಳವರೆಗೆ ತರಬೇತಿ ನೀಡಲಾಗುವುದು. ವರ್ಷಕ್ಕೆ 180 ನಿರುದ್ಯೋಗಿ ಯುವಕ-ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿರುವವರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು.

ಎರಡು ಮಹಡಿಗಳ ಕೇಂದ್ರದ ನಿರ್ಮಾಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಮೀನುಗಾರಿಕಾ ಕಾಲೇಜು ಮತ್ತು ಸ್ಮಾರ್ಟ್‌ ಸಿಟಿ ಕಂಪನಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ ವೆಲ್, ಡಾ.ಎ.ಟಿ. ರಾಮಚಂದ್ರ ನಾಯ್ಕ, ಡಾ.ಕೆ.ಎಸ್. ರಮೇಶ್, ಡಾ.ಎಚ್.ಎನ್. ಅಂಜನೇಯಪ್ಪ, ಡಾ.ಶಿವಕುಮಾರ ಎಂ., ಡಾ.ಎಸ್.ಆರ್. ಸೋಮಶೇಖರ, ಡಾ.ಎಸ್. ಸಿದ್ದಪ್ಪ, ಡಾ.ಎಸ್. ವರದರಾಜು ಹಾಗೂ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಕಾಂತ್, ಸಹಾಯಕ ಎಂಜಿನಿಯರ್ ಅನಂತ್ ಎಸ್. ಶಂಕರ್ ಇದ್ದರು.

ತರಬೇತಿ ಕ್ಷೇತ್ರ
ಮೀನುಗಾರಿಕೆಗೆ ಸಂಬಂಧಿಸಿದಂತೆ ಲಾಭದಾಯಕ ಕಸಬು ಕೈಗೊಳ್ಳಲು ಅನುಕೂಲವಾಗುವಂತೆ ತರಬೇತಿಯನ್ನು ರೂಪಿಸಲಾಗಿದೆ.

ಅಕ್ವೇರಿಯಂ ಜೋಡಣೆ, ನಿರ್ವಹಣೆ ಮತ್ತು ಅಲಂಕಾರಿಕ ಮೀನುಗಳ ಪಾಲನೆ, ಅಕ್ವಾಫೋನಿಕ್ ಮತ್ತು ಹೈಡ್ರೋಫೋನಿಕ್ ಸಮಗ್ರತೆಯ ಏಕೀಕರಣ, ಮೀನಿನ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ ಮತ್ತು ಮಾರಾಟ, ಮೀನಿನ ಸಂಸ್ಕರಣೆಯಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಹಾಗೂ ಧಾರಣೆ, ಮೀನಿನ ತಾಜ್ಯದಿಂದ ಗೊಬ್ಬರ ತಯಾರಿಕೆ, ಸ್ಕ್ಯೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್, ಮೀನುಗಾರಿಕೆ ದೋಣಿಗಳ ನವೀಕರಣ ಮತ್ತು ಸುರಕ್ಷತೆ ಹಾಗೂ ಮೀನಿನ ಬಲೆಗಳ ಹೆಣೆಯುವಿಕೆ ಮತ್ತು ನವೀಕರಣದ ಕುರಿತು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಡಾ.ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದ್ದಾರೆ.

**

ಆಯ್ಕೆ ಮಾಡಿದ ವಿಷಯಗಳ ಜತೆಗೆ ಸಮಯಕ್ಕೆ ತಕ್ಕಂತೆ ಅವಶ್ಯವಿರುವ ಇತರೆ ಮೀನುಗಾರಿಕಾ ತಾಂತ್ರಿಕತೆಗಳ ಬಗ್ಗೆಯೂ ತರಬೇತಿ ನೀಡಲಾಗುವುದು.
-ಡಾ.ಎ.ಟಿ. ರಾಮಚಂದ್ರ ನಾಯ್ಕ, ತರಬೇತಿಯ ಸಂಯೋಜಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು