ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಯಿಲ: 4 ಪಾಳು ಬಾವಿಗಳಿಗೆ ಕಾಯಕಲ್ಪ

ಉಪ್ಪಿನಂಗಡಿ: ಕುಡಿಯುವ ನೀರಿನ ಬರ ನಿವಾರಣೆಗೆ ಪಂಚಾಯಿತಿ ಭರದ ಸಿದ್ಧತೆ
Last Updated 14 ಫೆಬ್ರುವರಿ 2020, 11:04 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಈ ಬಾರಿ ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಬರ ನಿವಾರಣೆಗೆ ಕೊಯಿಲ ಗ್ರಾಮಪಂಚಾಯಿತಿ ಭರದ ಸಿದ್ಧತೆ ಆರಂಭಿಸಿದೆ. ಪಾಳು ಬಿದ್ದಿದ್ದ 4 ಬಾವಿಗಳನ್ನು ದುರಸ್ತಿ ಮಾಡಿಸಿದೆ. ಪಂಚಾಯಿತಿಯ ಮಹಿಳಾ ಅಧ್ಯಕ್ಷರಾದ ಹೇಮಾ ಮೋಹನ್‌ ದಾಸ್‌ ಶೆಟ್ಟಿ ಮುನ್ನೆಚ್ಚರಿಕೆ ಕ್ರಮಗಳ ಸಾರಥ್ಯ ವಹಿಸಿದ್ದಾರೆ.

ಫೆಬ್ರುವರಿ ತಿಂಗಳು ಕಳೆಯಿತೆಂದರೆ ಮತ್ತೆ ಜೂನ್‌ ವರೆಗೆ ಎಲ್ಲೆಡೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತದೆ. ಕಾಲೋನಿ, ಗುಂಪು ಮನೆಗಳಿರುವ ಗ್ರಾಮ ಪಂಚಾಯಿತಿ ನೀರು ಸರಬರಾಜು ವ್ಯವಸ್ಥೆಯನ್ನು ಅವಲಂಭಿಸಿರುವವರ ಪಾಡು ಹೇಳಿತೀರದು. ಹೀಗಾಗಿ ಕೊಯಿಲ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿರುವ ಪಾಲು ಬಿದ್ದಿದ್ದ ಬಾವಿಯನ್ನು ದುರಸ್ತಿ ಮಾಡಿಸಿ, ಸಂಭವನೀಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ.

ಕೊಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಂಡಿಬಾಗಿಲು, ಗೋಕುಲನಗರ, ವಲಕಡಮ ಮತ್ತು ಸಬಲೂರು ಸೇರಿದಂತೆ 4 ಕಡೆಗಳಲ್ಲಿ ಬಾವಿ ಇದೆ. ಬಾವಿಯಲ್ಲಿ ನೀರು ಇದ್ದರೂ ‌ ಹೂಳು ತುಂಬಿ ನಿರುಪಯುಕ್ತವಾಗಿ, ಪಾಳು ಬಿದ್ದಿತ್ತು. ಕಿಡಿಗೇಡಿಗಳು ತ್ಯಾಜ್ಯ ಎಸೆದು ನೀರು ಮಲೀನಗೊಳಿಸಿದ್ದರು. ಹೀಗಾಗಿ ನೀರು ಬಳಕೆಗೆ ಯೋಗ್ಯವಾಗಿರಲಿಲ್ಲ.

ನೀರಿಗೆ ಹಾಹಾಕಾರ: ಪ್ರತೀ ವರ್ಷ ಬಿರುಬೇಸಿಗೆ ಏಪ್ರಿಲ್, ಮೇ ತಿಂಗಳಲ್ಲಿ ಬೋರ್ವೆಲ್‌ನಲ್ಲಿ ಅಂತರ್ಜಲ ಕುಸಿತ ಆಗಿ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಾರೆ. ಈ ಸಂದರ್ಭಗಳಲ್ಲಿ ಇಂತಹ ಬಾವಿಯಲ್ಲಿ ನೀರು ಇರುತ್ತಿತ್ತು. ಆದರೆ ಮಲೀನಗೊಂಡಿದ್ದ ಕಾರಣ ಬಳಸುವಂತೆ ಇರುತ್ತಿರಲಿಲ್ಲ. ಇದನ್ನೆಲ್ಲ ಮನಗಂಡ ಕೊಯಿಲ ಗ್ರಾಮ ಪಂಚಾಯಿತಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಮುನ್ನ ಪರಿಹಾರ ಕಂಡುಕೊಂಡು ಸಿದ್ಧತೆ ಮಾಡಿಕೊಂಡಿದೆ.

ಸಾರ್ವಜನಿಕ ಪ್ರಶಂಸೆ:ಹತ್ತಾರು ವರ್ಷಗಳಿಂದ ಬಳಕೆ ಇಲ್ಲದೆ ಪಾಳು ಬಿದ್ದಿದ್ದ ಬಾವಿಯನ್ನು ದುರಸ್ತಿ ಮಾಡಿಸಿರುವುದು, ಬಿರು ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರ ಕುಡಿಯುವ ನೀರಿಗೆ ಸಮಸ್ಯೆಯನ್ನು ಎದುರಾಗಬಾರದು ಎಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ.

ನೀರಿಗೆ ಸಮಸ್ಯೆ ಆಗಬಾರದು: ‘ಪ್ರತಿವರ್ಷ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಅರ್ಥೈಸಿಕೊಂಡು ಅಂತಹ ಸಮಸ್ಯೆ ಎದುರಾದಾಗ ಕನಿಷ್ಠ ಕುಡಿಯುವ ನೀರಿನ ಸಲುವಾಗಿಯಾದರೂ ನೀರು ಸೇದಿ ತಂದು ಬಳಸಿಕೊಳ್ಳಲು ಬಾವಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಇದೀಗ ಅದನ್ನು ದುರಸ್ತಿ ಮಾಡಿ, ಬಳಕೆಗೆ ಯೋಗ್ಯ ಮಾಡಲು ಸಾಧ್ಯವಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ’ ಎಂದು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಮೋಹನ್ದಾಸ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT