ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಾಣೂರು– ಮಂಗಳೂರು ನಡುವೆ ಚತುಷ್ಫಥ ಗೊಳ್ಳುತ್ತಿದ್ದು, ಗಂಜಿಮಠದ ಸೂರಲ್ಪಾಡಿಯಲ್ಲಿ ಟೋಲ್ ಪ್ಲಾಜಾ ನಿರ್ಮಿಸಲಾಗುತ್ತಿದೆ. ಈ ಟೋಲ್‌ಗೇಟ್ ಅವೈಜ್ಞಾನಿಕವಾಗಿದೆ ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.
‘ರಾಷ್ಟ್ರಿಯ ಹೆದ್ದಾರಿಯಲ್ಲಿ ಎರಡು ಟೋಲ್ ಪ್ಲಾಜಾಗಳ ನಡುವೆ ಕನಿಷ್ಠ 60 ಕಿ.ಮೀ ಅಂತರವಿರಬೇಕು ಎಂಬ ನಿಯಮವಿದೆ. ಆದರೆ, ನಂತೂರಿನಿಂದ 17 ಕಿ.ಮೀ ದೂರದಲ್ಲಿ ಗಂಜಿಮಠದ ಸೂರಲ್ಪಾಡಿ ಮಸೀದಿ ಸಮೀಪ ನಿರ್ಮಾಣವಾಗುತ್ತಿರುವ ಟೋಲ್ ಪ್ಲಾಜಾ ತಲಪಾಡಿ ಟೋಲ್ ಸಂಗ್ರಹ ಕೇಂದ್ರದಿಂದ 36 ಕಿ.ಮೀ, ಹೆಜಮಾಡಿ ಟೋಲ್‌ಗೇಟ್‌ನಿಂದ 45 ಕಿ.ಮೀ, ಬಿ.ಸಿ. ರೋಡ್ ಟೋಲ್‌ಗೇಟ್‌ನಿಂದ 35 ಕಿ.ಮೀ ಅಂತರದಲ್ಲಿದೆ. ಇದು ರಾಷ್ಟ್ರೀಯ ಹೆದ್ದಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆ’ ಎಂದು ಸಮಿತಿ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಯಲ್ಲಿ ಸ್ವಜನ ಪಕ್ಷಪಾತ ನಡೆಸಿರುವ ಬಗ್ಗೆ ಹಾಗೂ ನಿಧಾನಗತಿಯಯಲ್ಲಿ ನಡೆಯುತ್ತಿರುವ ಕಾಮಗಾರಿಯ ಅವ್ಯವಸ್ಥೆಗಳ ಬಗ್ಗೆ ದೂರುಗಳು ಬಂದಿದ್ದರಿಂದ ಸಮಿತಿಯ ಪ್ರಮುಖರು ಸೂರಲ್ಪಾಡಿ ಟೋಲ್ ಪ್ಲಾಜಾ ಕಾಮಗಾರಿ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಮಸೀದಿ, ಮದುವೆ ಮಂಟಪ, ಶಾಲೆಗಳಿರುವ ಪ್ರದೇಶದಿಂದ ಕೂಗಳತೆ ದೂರದಲ್ಲಿ ಟೋಲ್ ಪ್ಲಾಜಾ ನಿರ್ಮಿಸಲಾಗುತ್ತಿದೆ. ಇದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
‘ಗುರುಪುರ ಪೇಟೆಯನ್ನು ಉಳಿಸುವ ನೆಪದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಆ ಪ್ರದೇಶದಲ್ಲಿ ಭೂಮಿ ಖರೀದಿಸಿರುವ ಪ್ರಭಾವಿ ರಿಯಲ್ ಎಸ್ಟೇಟ್ ಲಾಬಿಗಳಿಗೆ ಅನುಕೂಲ ಕಲ್ಪಿಸಲು ಈ ರೀತಿ ಮಾಡಲಾಗಿದೆ. ಇದರಿಂದ ಹೆದ್ದಾರಿಯ ಉದ್ದ 5 ಕಿ.ಮೀ. ಹೆಚ್ಚಾಗಲಿದೆ. ಕಾಮಗಾರಿಯ ಬಜೆಟ್ ಹೆಚ್ಚಳಕ್ಕೆ ಇದು ಕಾರಣವಾಗಿದ್ದು, ಇದರಿಂದ ಟೋಲ್ ದರ ದುಬಾರಿಯಾಗಲಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಇದರ ಹೆಚ್ಚುವರಿ ಭಾರವನ್ನು ಹೊರಬೇಕಿದೆ’ ಎಂದು ಸಮಿತಿ ಆರೋಪಿಸಿದೆ.
‘ಈ ಯೋಜನೆ ಮಂಜೂರಾಗಿ ಏಳೆಂಟು ವರ್ಷಗಳಾದರೂ, ಇನ್ನೂ ಶೇ 50ರಷ್ಟು ಕಾಮಗಾರಿ ನಡೆದಿಲ್ಲ. ನಂತೂರಿನಿಂದ ವಾಮಂಜೂರುವರಗಿನ ಹೆದ್ದಾರಿಯಲ್ಲಿ ಪದೇ ಪದೇ ವಾಹನ ದಟ್ಟಣೆ ಎದುರಾಗುತ್ತದೆ. ಇಲ್ಲೂ ಕಾಮಗಾರಿ ತೀರ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆತ್ತಿಕಲ್ ಗುಡ್ಡವನ್ನು ಅಪಾಯಕಾರಿಯಾಗಿ ಕತ್ತರಿಸಲಾಗಿದ್ದು, ಮಣ್ಣು ಕುಸಿತದ ಆತಂಕ ಎದುರಾಗಿದೆ. ಗುಡ್ಡದ ಮೇಲ್ಭಾಗದ ನಿವಾಸಿಗಳು ಮನೆ ತೊರೆದಿದ್ದಾರೆ. ಮೇಲ್ಸೇತುವ ನಿರ್ಮಾಣದಿಂದ ಕೈಕಂಬ ಪೇಟೆ ನಶಿಸುವ ಭೀತಿ ಎದುರಿಸುತ್ತಿದೆ. ಈ ಕುರಿತು ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ನಾಗರಿಕರ, ಸ್ಥಳೀಯರ ಯಾವುದೇ ದೂರುಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸ್ಪಂದಿಸಿಲ್ಲ’ ಎಂದು ಸಮಿತಿ ದೂರಿದೆ.
ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತ ಬಾವಾ ಪದರಂಗಿ, ಡಿವೈಎಫ್ಐ ಮುಂದಾಳು ಶ್ರೀನಾಥ್ ಕುಲಾಲ್, ಕಾರ್ಮಿಕ ನಾಯಕರಾದ ನೋಣಯ್ಯ ಗೌಡ, ಗೋಪಾಲ ಮೂಲ್ಯ, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ವಾಮಂಜೂರು ಮೊದಲಾದವರು ಭಾವಗಹಿಸಿದ್ದರು
‘ಹೆದ್ದಾರಿ ಕಾಮಗಾರಿ ಶೇ 50ರಷ್ಟು ಪೂರ್ಣಗೊಳ್ಳುವ ಮುನ್ನವೇ ಟೋಲ್ ಪ್ಲಾಜಾ ನಿರ್ಮಿಸುವ ಅಗತ್ಯವಾದರೂ ಏನು. ಕಾಮಗಾರಿ ಪೂರ್ಣಗೊಳ್ಳದೆಯೇ ವಾಹನಗಳಿಂದ ಟೋಲ್ ಸಂಗ್ರಹಿಸುವ ಬಗ್ಗೆ ಅನುಮಾನ ಸೃಷ್ಟಿಗೆ ಇದು ಕಾರಣವಾಗಿದೆ. ಕಾಮಗಾರಿ ಪೂರ್ಣಗೊಳ್ಳದೇ ಯಾವುದೇ ಕಾರಣಕ್ಕೂ ಸುಂಕ ವಸೂಲಿಗೆ ಅವಕಾಶ ಕಲ್ಪಿಸಬಾರದು‘ ಎಂದು ಸಮಿತಿ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.