ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ‘ವಿಶಿಷ್ಟ’ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳ ಸಂಭ್ರಮ

Published 22 ಜನವರಿ 2024, 7:38 IST
Last Updated 22 ಜನವರಿ 2024, 7:38 IST
ಅಕ್ಷರ ಗಾತ್ರ

ಮಂಗಳೂರು: ಒಂದೆಡೆ ಗೊಂಬೆ ಕುಣಿತ, ಮತ್ತೊಂದೆಡೆ ತಿರುಗುವ ಮರದ ಕುದುರೆಯ ಮೇಲೆ ಕುಳಿತವರ ಸಂಭ್ರಮದ ಮೊರೆತ. ಜೀವಂತ ಕುದುರೆ, ಒಂಟೆಯ ಮೇಲೆ ಸವಾರಿಯ ಕಲೆ; ತಿರುಗುವ ತೊಟ್ಟಿಲಿನಲ್ಲಿ ಖುಷಿಯ ಅಲೆ...

ಆಶಾಜ್ಯೋತಿ ಮತ್ತು ಕೆನರಾ ಶಿಕ್ಷಣ ಸಂಸ್ಥೆಗಳು ವಿಶೇಷ ಮಕ್ಕಳಿಗಾಗಿ ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ವಿಶೇಷ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ವಿಶಿಷ್ಟ ತಿಂಡಿ ಮಳಿಗೆಗಳು, ಪಾನೀಯ ಮಳಿಗೆಗಳು ಹಾಗೂ ಹಣ್ಣಿನ ಅಂಗಡಿಗಳಲ್ಲಿ ಹೊಟ್ಟೆ ತುಂಬ ತಿಂದು ಪಾನೀಯ ಸೇವಿಸಿದ ಮಕ್ಕಳು ಮೋಜಿನ ಆಟಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ನಗುಮುಖದ ಚಿತ್ರಗಳನ್ನು ಕ್ಲಿಕ್ಕಿಸಲು ಸೆಲ್ಫಿ ಪಾಯಿಂಟ್‌ ಕೂಡ ಅಲ್ಲಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಅಂಗವಿಕಲ ಮಕ್ಕಳ ಬಗ್ಗೆ ಸರ್ಕಾರ ಮಾತ್ರ ಕಾಳಜಿ ವಹಿಸಬೇಕು ಎಂದುಕೊಳ್ಳಬಾರದು. ಸಮಾಜವೂ ಜವಾಬ್ದಾರಿಯಿಂದ ವರ್ತಿಸಬೇಕು. ದೇಶದ ಜನಸಂಖ್ಯೆಯಲ್ಲಿ ಶೇಕಡ 2ರಷ್ಟು ಮಾತ್ರ ಇರುವ ಅಂಗವಿಕಲರನ್ನು ಮುಖ್ಯವಾಹಿನಿಗೆ ತರಲು ಉಳಿದ ಶೇಕಡ 98 ಮಂದಿ ಮುಂದಾಗಬೇಕು ಎಂದರು.

‘ಈಗ ಸುದ್ದಿಯಲ್ಲಿರುವ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವನ್ನು ಅಂಗವಿಕಲರ ನೆರವಿಗಾಗಿ ಬಳಸುವ ಪ್ರಯತ್ನ ಆಗಬೇಕು’ ಎಂದು ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ನಂದಗೋಪಾಲ ಶೆಣೈ ಸಲಹೆ ನೀಡಿದರು. ಗರ್ಭಿಣಿಯರಿಗೆ ಪ್ರೀ ನೇಟಲ್ ಕೌನ್ಸೆಲಿಂಗ್‌ ಮಾಡುವುದರಿಂದ ಅಂಕವಿಕಲ ಮಕ್ಕಳು ಜನಿಸದಂತೆ ನೋಡಿಕೊಳ್ಳಬಹುದು. ಈ ಬಗ್ಗೆ ಜಾಗೃತಿ ಅಭಿಯಾನ ನಡೆಯಬೇಕು ಎಂದು ಅವರು ಹೇಳಿದರು.

ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ವಾಸುದೇವ ಕಾಮತ್, ಐಡಿಯಲ್ ಐಸ್‌ಕ್ರೀಂ ಮಾಲೀಕ ಮುಕುಂದ ಕಾಮತ್, ಸೇವಾ ಭಾರತಿ ಕಾರ್ಯದರ್ಶಿ ನಾಗರಾಜ ಭಟ್, ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಪಾಲ್ಗೊಂಡಿದ್ದರು.

ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ಒಂಟೆ ಮೇಲೆ ಸವಾರಿಯ ಸಂಭ್ರಮ -ಪ್ರಜಾವಾಣಿ ಚಿತ್ರ 
ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ಒಂಟೆ ಮೇಲೆ ಸವಾರಿಯ ಸಂಭ್ರಮ -ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT