ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್‌ಗಳು ವಾರಸುದಾರರಿಗೆ ವಾಪಸ್

39 ಮೊಬೈಲ್‌ಗಳ ವಾರಸುದಾರರ ಪತ್ತೆ ಹಚ್ಚಿದ ನಗರ ಕಮಿಷನರೇಟ್‌ ಪೊಲೀಸರು
Last Updated 17 ಮಾರ್ಚ್ 2023, 6:49 IST
ಅಕ್ಷರ ಗಾತ್ರ

ಮಂಗಳೂರು: ‘ಕೊರಗಜ್ಜನ ಕೃಪೆ. ಸೆಂಟ್ರಲ್‌ ಇಕ್ವಿಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ (ಸಿಇಐಆರ್‌) ಪೋರ್ಟಲ್‌ (ceir.gov.in) ಮತ್ತು ಮಂಗಳೂರು ಪೊಲೀಸರಿಂದಾಗಿ ನನ್ನ ಸೆಲ್‌ಪೋನ್‌ ಮರಳಿ ಸಿಕ್ಕಿತು’ ಎನ್ನುವಾಗ ಶ್ರಾವ್ಯ ಅವರ ಮುಖ ಅರಳಿತ್ತು.

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಳೆದುಹೋದ 39 ಮೊಬೈಲ್‌ಗಳನ್ನು ಪೊಲೀಸರು ಮರಳಿ ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಕಮಿಷನರ್‌ ಅವರ ಕಚೇರಿಯಲ್ಲಿ ಗುರುವಾರ ವಾರಸುದಾರರಿಗೆ ಮರಳಿಸಲಾಯಿತು. ಕಳೆದುಹೋದ ಮೊಬೈಲ್‌ ಮರಳಿ ಪಡೆದವರಲ್ಲಿ ಶ್ರಾವ್ಯ ಅವರೂ ಒಬ್ಬರು.

‘ಆರು ತಿಂಗಳ ಹಿಂದೆ ನಾನು ದೇವಸ್ಥಾನವೊಂದಕ್ಕೆ ಹೋದಾಗ ಬ್ಯಾಗ್‌ನಲ್ಲಿದ್ದ ‘ರೆಡ್ಮಿ 10’ ಮೊಬೈಲ್‌ ಕಳವಾಗಿದ್ದು ಗೊತ್ತಾಯಿತು. ಆಗಲೇ ದೂರು ನೀಡಿದ್ದೆ. ಮೊಬೈಲ್‌ನ ಐಎಂಇಐ ಸಂಖ್ಯೆಯನ್ನೂ ಬಂದರು ಠಾಣೆಯ ಪೊಲೀಸರಿಗೆ ತಲುಪಿಸಿದ್ದೆ’ ಎಂದು ದಿಯಾ ಸಿಸ್ಟಮ್ಸ್‌ನ ಉದ್ಯೋಗಿ ಶ್ರಾವ್ಯ ತಿಳಿಸಿದರು.

ಕೇಂದ್ರ ದೂರಸಂಪರ್ಕ ಇಲಾಖೆ ಆರಂಭಿಸಿರುವ ಸಿಇಐಆರ್‌ ಪೋರ್ಟಲ್‌ನಲ್ಲಿ ಅವರು ದೂರು ದಾಖಲಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಕಳವಾದ ಮೊಬೈಲ್ ಫೋನ್‌ ಪತ್ತೆಗೆ ವಿಶೇಷ ಅಭಿಯಾನವನ್ನು ಪೊಲೀಸ್‌ ಇಲಾಖೆ ಆರಂಭಿಸಿರುವುದನ್ನು ತಿಳಿದು ಎಫ್‌ಐಆರ್‌ ದಾಖಲೆ, ಆಧಾರ್‌ ಸಂಖ್ಯೆಯನ್ನು ಹಾಗೂ ಐಎಂಇಐ ಸಂಖ್ಯೆಯನ್ನು ಸಿಇಐಆರ್‌ ಪೋರ್ಟಲ್‌ಗೆ ಅವರು ಮತ್ತೆ ಅಪ್‌ಲೋಡ್ ಮಾಡಿದ್ದರು. ಬಳಿಕ ಬಂದರು ಠಾಣೆ ಪೊಲೀಸರು ಆಕೆಯ ಮೊಬೈಲ್‌ ಪತ್ತೆಹಚ್ಚಿದ್ದರು.

ದೇವಸ್ಥಾನವೊಂದರ ರಥೋತ್ಸವದ ಸಂದರ್ಭದಲ್ಲಿ ಜನವರಿಯಲ್ಲಿ ಮೊಬೈಲ್‌ ಕಳೆದುಕೊಂಡಿದ್ದ ಡಾ.ಗಾಯತ್ರಿ ಅವರಿಗೂ ಮೊಬೈಲ್‌ ಮರಳಿ ಸಿಕ್ಕಿದೆ. ಅವರ ಮೊಬೈಲ್‌ ಅನ್ನು ಪೊಲೀಸರು ಉಡುಪಿಯಲ್ಲಿ ಪತ್ತೆ ಹಚ್ಚಿದ್ದಾರೆ.

‘ಮೊಬೈಲ್‌ ಮರಳಿ ಸಿಗುತ್ತದೆ ಎಂಬ ವಿಶ್ವಾಸವೇ ನನಗಿರಲಿಲ್ಲ’ ಎಂದು ಗಾಯತ್ರಿ ತಿಳಿಸಿದರು.

ಮಂಗಳೂರು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್ ಜೈನ್‌, ‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮೊಬೈಲ್‌ಗಳು ಕಳವಾದ/ ಕಾಣೆಯಾದ ಬಗ್ಗೆ 402 ದೂರುಗಳು ಬಂದಿದ್ದು, ಅವುಗಳಲ್ಲಿ 124 ಪತ್ತೆಯಾಗಿವೆ. 39 ಫೋನ್‌ಗಳನ್ನು ಪೋರ್ಟಲ್‌ನ ಸಹಾಯದಿಂದ ಮರಳಿ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಾಣೆಯಾದ ಮೊಬೈಲ್‌ಗಳನ್ನು ಪತ್ತೆಹಚ್ಚುವುದು ಈ ಹಿಂದೆ ಸವಾಲಿನ ಕೆಲಸವಾಗಿತ್ತು. ಅದು ಪತ್ತೆಯಾದರೂ ಅದರ ನೈಜ ಮಾಲೀಕರನ್ನು ಹುಡುಕಲು ಮತ್ತಷ್ಟು ಕಷ್ಟವಾಗುತ್ತಿತ್ತು. ಸಿಇಐಆರ್‌ ಪೋರ್ಟಲ್‌ ಆರಂಭವಾದ ಬಳಿಕ ಈ ಕಾರ್ಯ ಸುಲಲಿತವಾಗಿದೆ. ಮೊಬೈಲ್‌ ಕಳಕೊಂಡವರು ಈ ಪೋರ್ಟಲ್‌ನ ಪ್ರಯೋಜನ ಪಡೆಯಬೇಕು’ ಎಂದರು.

ಡಿಸಿಪಿ (ಕಾನೂನು ಸುವ್ಯವಸ್ಥೆ) ಅಂಶುಕುಮಾರ್‌, ಬಿ.ಪಿ.ದಿನೇಶ್‌ ಕುಮಾರ್ ಇದ್ದರು.

–0–

ಐಎಂಇಐ ಸಂಖ್ಯೆ ಪರಿಶೀಲಿಸಿ

ಪೋನ್‌ನ ಪೆಟ್ಟಿಗೆಯಲ್ಲಿ ಐಎಂಇಐ ಸಂಖ್ಯೆ ದಾಖಲಾಗಿರುತ್ತದೆ. ಬಳಕೆಯಾದ ಫೋನ್‌ಗಳನ್ನು ಖರೀದಿಸುವವರು *#06# ಡಯಲ್‌ ಮಾಡುವ ಮೂಲಕ ಐಎಂಇಐ ಸಂಖ್ಯೆಯನ್ನು ಪರಿಶೀಲಿಸಬೇಕು. ಆ ಸಮಖ್ಯೆ ಬ್ಲಾಕ್‌ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದೆ ಎಂಬ ಸಂದೇಶ ಕಾಣಿಸಿಕೊಂಡರೆ ಅಂತಹ ಫೋನ್‌ಗಳನ್ನು ಖರೀದಿಸಬಾರದು ಎಂದು ಸಿಇಐಆರ್‌ ಸಲಹೆ ನೀಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT