ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಷರತ್ತುಗಳಿಗೆ ವ್ಯಾಪಾರಿಗಳು ಒಪ್ಪಿಲ್ಲ–ಗುರುತುಚೀಟಿ ನೀಡಿಲ್ಲ

ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಮಿತಿಯ ಆರೋಪ ತಳ್ಳಿ ಹಾಕಿದ ಮೇಯರ್‌
Published : 5 ಆಗಸ್ಟ್ 2024, 16:24 IST
Last Updated : 5 ಆಗಸ್ಟ್ 2024, 16:24 IST
ಫಾಲೋ ಮಾಡಿ
Comments

ಮಂಗಳೂರು: ನಗರದಲ್ಲಿ ಬೀದಿ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ತಡೆಯಲು ಪಾಲಿಕೆ ನಡೆಸುತ್ತಿರುವ ಟೈಗರ್‌ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ  ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ‘ಅನಧಿಕೃತ ಗೂಡಂಗಡಿಗಳ ತೆರವು ನಿರಂತರ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಬೀದಿ ಬದಿಯ ಗೂಡಂಗಡಿ ತೆರವಿನ ಬಗ್ಗೆ ಮೊದಲೇ ತಿಳಿಸಿದ್ದೆವು. ಆದರೂ ಬೀದಿ ಬದಿಯಲ್ಲಿ ಅನಧಿಕೃತ ವ್ಯಾಪಾರ ನಿಲ್ಲದ ಕಾರಣ ಕಾರ್ಯಾಚರಣೆ ನಡೆಸಬೇಕಾಗಿ ಬಂತು. ಟೀಕೆಗಳಿಗೆಲ್ಲ ಮಣಿಯುವುದಿಲ್ಲ’ ಎಂದರು. 

ಗುರುತಿನ ಚೀಟಿ ಹೊಂದಿರುವ ಬೀದಿ ಬದಿ ವ್ಯಾಪಾರಿಗಳ ಸೊತ್ತುಗಳನ್ನು ಪಾಲಿಕೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘2014ರ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ಪಾಲಿಕೆ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ 1045 ಮಂದಿಯನ್ನು ಗುರುತಿಸಿ, 667 ಮಂದಿಗೆ ಗುರುತಿನ ಚೀಟಿ ನೀಡಲು ಪಟ್ಟಣ ವ್ಯಾಪಾರ ಸಮಿತಿಯನ್ನು ನಿರ್ಧರಿಸಿದ್ದು ನಿಜ.  ಶಾಶ್ವತ ರಚನೆ ನಿರ್ಮಿಸಬಾರದು ಎಂಬುದೂ ಸೇರಿದಂತೆ 18 ಷರತ್ತುಗಳಿಗೆ ಬೀದಿ ಬದಿ ವ್ಯಾಪಾರಿಗಳು ಒಪ್ಪಿರಲಿಲ್ಲ. 10 ಮಂದಿ ಹೊರತಾಗಿ ಉಳಿದ ಯಾರಿಗೂ ಗುರುತಿನ ಚೀಟಿ ನೀಡಿಲ್ಲ’ ಎಂದರು. 

‘ಹಾಗಿದ್ದರೆ, 600ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ನೀಡಿದ್ದು ಹೇಗೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್‌, ‘ಪಾಲಿಕೆ ವ್ಯಾಪ್ತಿಯಲ್ಲಿ 667 ಮಂದಿಗೆ ಸಾಲ ನೀಡಿದ್ದು ನಿಜ. ಇದರಲ್ಲಿ ಮನೆಯಲ್ಲೇ ಆಹಾರ ತಯಾರಿಸಿ ಮಾರುವವರೂ ಇದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ನಮ್ಮ ಷರತ್ತುಗಳಿಗೆ ಒಪ್ಪಿದವರಿಗೆ ಬೀದಿ ಬದಿ ವ್ಯಾಪಾರಕ್ಕೆ ಅನುವು ಮಾಡಿಕೊಡಲು ಸಿದ್ಧ. ಹತ್ತು ಕಡೆ ಬೀದಿ ಬದಿ ವ್ಯಾಪಾರ ವಲಯಗಳು ತಿಂಗಳ ಒಳಗೆ ಸಜ್ಜುಗೊಳ್ಳಲಿವೆ. ಒಬ್ಬನೇ ವ್ಯಕ್ತಿ 200ಕ್ಕೂ ಹೆಚ್ಚು ಗೂಡಂಗಡಿ ಇಟ್ಟು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸುನೀತಾ, ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್‌ ಎಸ್‌., ಲೋಹಿತ್ ಅಮೀನ್ ಭಾಗವಹಿಸಿದ್ದರು.

‘ನಗರದಲ್ಲೂ ಫುಡ್ ಸ್ಟ್ರೀಟ್‌’
‘ನಗರದಲ್ಲೂ 'ಫುಡ್‌ ಸ್ಟ್ರೀಟ್‌' ರೂಪಿಸುವ ಯೋಜನೆ ಇದೆ. ಇದಕ್ಕಾಗಿ ಬೀದಿಗಳನ್ನು ಗುರುತಿಸುತ್ತೇವೆ. ಶೀಘ್ರವೇ ಟೆಂಡರ್‌ ಕರೆದು 10 x10 ಚ.ಅಡಿ ಅಥವಾ 10 x 20 ಚ.ಅಡಿ ವಿಸ್ತೀರ್ಣದ ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಿದ್ದೇವೆ‘ ಎಂದು ಮೇಯರ್‌ ತಿಳಿಸಿದರು.

‘ಇಂದೋರ್‌ಗೆ ತೆರಳಿ ಭೇಟಿಯಾಗಬೇಕಿತ್ತೇ’

ಮಂಗಳೂರು: ‘ಬೀದಿಬದಿ ವ್ಯಾಪಾರಿಗಳ ಸರಕು ಸರಂಜಾಮುಗಳನ್ನು ಧ್ವಂಸಗೊಳಿಸುವಾಗ ಮೇಯರ್‌ ಇಂದೋರ್ ಪ್ರವಾಸದಲ್ಲಿದ್ದರು.  ಇಂದೋರ್‌ಗೆ ತೆರಳಿ ಅವರನ್ನು ಭೇಟಿ ಮಾಡಬೇಕಿತ್ತೇ’ ಎಂದು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದ್ದಾರೆ.

‘ಮೇಯರ್‌ ಮೊದಲು ಫೋನ್‌ ಕರೆ ಸ್ವೀಕರಿಸುವುದನ್ನು ಕಲಿಯಲಿ. ಗುರುತಿನ ಚೀಟಿ ನೀಡಲು ಪಾಲಿಕೆ  ಹಾಕಿರುವ ಷರತ್ತುಗಳು ಬೀದಿ ವ್ಯಾಪಾರಕ್ಕೆ ಸಂಬಂಧಿಸಿದರ ಕಾನೂನಿಗೆ ವಿರುದ್ಧವಾಗಿವೆ.  ಹಾಗಾಗಿ ನಾವು ಒಪ್ಪಿಲ್ಲ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT