ಮಳೆಯ ನಡುವೆಯೇ ಶಿಕ್ಷಕರ ಪ್ರತಿಭಟನೆ

ಭಾನುವಾರ, ಜೂಲೈ 21, 2019
27 °C
ಆರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಮಳೆಯ ನಡುವೆಯೇ ಶಿಕ್ಷಕರ ಪ್ರತಿಭಟನೆ

Published:
Updated:
Prajavani

ಮಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸುವುದು ಸೇರಿದಂತೆ ತಮ್ಮ ಆರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ಪ್ರಾಥಮಿಕ ಶಾಲೆಗಳ 2,000ಕ್ಕೂ ಹೆಚ್ಚು ಶಿಕ್ಷಕರು ಮಂಗಳವಾರ ಸುರಿಯುವ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿದರು.

ರಾಜ್ಯದಾದ್ಯಂತ ನಡೆದ ಪ್ರಾಥಮಿಕ ಶಿಕ್ಷಕರ ಪ್ರತಿಭಟನೆಯ ಭಾಗವಾಗಿ ಜಿಲ್ಲೆಯ ಶಿಕ್ಷಕರು ಡಾ.ಬಿ.ಆರ್‌.ಅಂಬೇಡ್ಕರ್‌ (ಜ್ಯೋತಿ) ವೃತ್ತದಿಂದ ನೆಹರೂ ಮೈದಾನದವರೆಗೆ ಜಾಥಾ ನಡೆಸಿದರು. ನೆಹರೂ ಮೈದಾನದಲ್ಲಿ ಸಮಾವೇಶಗೊಳ್ಳುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯಲಾರಂಭಿಸಿತು. ಕೊಡೆ ಹಿಡಿದುಕೊಂಡೇ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸ್ಟಾನಿ ತಾವ್ರೊ, ‘ಶಿಕ್ಷಕರನ್ನು ರಸ್ತೆಗಿಳಿಸುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಸೆಪ್ಟಂಬರ್ 5ರಂದು ಶಿಕ್ಷಕರ ದಿನವನ್ನು ಬಹಿಷ್ಕರಿಸಿ ವಿಧಾನಸೌಧ ಚಲೋ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಮಂಜನಾಡಿ ಮಾತನಾಡಿ, ‘ಬೇಡಿಕೆ ಈಡೇರದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಶಕ್ತಿ ಶಿಕ್ಷಕರಿಗಿದೆ’ ಎಂದು  ಹೇಳಿದರು.

ಬಂಟ್ವಾಳ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್‌ ಮಾತನಾಡಿ, ‘ಪದವಿಯ ನೆಪದಲ್ಲಿ ಶಿಕ್ಷಕರಿಗೆ ಹಿಂಬಡ್ತಿ ನೀಡುವ ಪ್ರಕ್ರಿಯೆ ಖಂಡನೀಯ. ನಿಯಮಗಳನ್ನು ತರುವ ಅಧಿಕಾರಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಕಷ್ಟದ ಅರಿವಿಲ್ಲ. ಯಾವುದೇ ಇಲಾಖೆಗೆ ಇಲ್ಲದ ಶಿಕ್ಷೆ ಶಿಕ್ಷಕರಿಗೆ ಏಕೆ’ ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವಶಂಕರ ಭಟ್ ಕೆ. ಮಾತನಾಡಿ, ‘ಶಿಕ್ಷಕರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಡವಾಗಿ ಬೀದಿಗೆ ಇಳಿದಿದ್ದೇವೆ. ಸರ್ಕಾರ ಬೇಡಿಕೆಯನ್ನು ಪರಿಗಣಿಸಬೇಕು. ಇಲ್ಲವಾದಲ್ಲಿ ವಿಧಾನಸೌಧ ಚಲೋ ನಡೆಸಲು ಮಾನಸಿಕವಾಗಿ ಸಿದ್ದರಾಗಿದ್ದೇವೆ’ ಎಂದರು.

ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕು. ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು ಎಂಬುದು ಸೇರಿದಂತೆ ಏಳು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ವಿವಿಧ ತಾಲೂಕು ವಿಭಾಗಗಳ ಮುಖಂಡರಾದ ಜಗದೀಶ್ ಶೆಟ್ಟಿ, ಚಂಚಲಾಕ್ಷಿ, ನಾಗೇಶ್, ಪ್ರಭಾಕರ, ಶ್ರೀಧರ ಗೌಡ, ಸುರೇಶ್, ಮಾವಚ್ಚನ್ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !