ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಸಾನ್ನಿಧ್ಯ ನಿರ್ಮಾಣ ವಿಚಾರ: ಗೊಂದಲದಲ್ಲಿಯೇ ಸಭೆ ಮುಕ್ತಾಯ

Last Updated 25 ಜೂನ್ 2022, 4:43 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ನರಿಮೊಗ್ರು ಮೃತ್ಯುಂಜಯೇಶ್ವರ ದೇವಳಕ್ಕೆ ಸಂಬಂಧಿಸಿದ ನಾಗನಕಟ್ಟೆಯನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಜೂನ್ 7ರಂದು ನಡೆಸಲು ಉದ್ದೇಶಿಸಿದ್ದ ನಾಗಪ್ರತಿಷ್ಠೆ ಕಾರ್ಯಕ್ಕೆ ಕೆಲ ಗ್ರಾಮಸ್ಥರು ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಉಂಟಾ ಗಿದ್ದ ಗೊಂದಲವನ್ನು ನಿವಾರಿಸುವ ಸಲುವಾಗಿ ಕರೆಯಲಾದ ಸಭೆಯು ಮತ್ತೆ ಗೊಂದಲದಲ್ಲಿ ಅಂತ್ಯಗೊಂಡಿತು.

ದೇವಳದಲ್ಲಿ ಈ ಹಿಂದೆ ಅಷ್ಟಮಂಗಲ ಪ್ರಶ್ನೆ ನಡೆಸಿದ್ದ ಶಶೀಂದ್ರ ನಾಯರ್ ಕುತ್ತಿಕೋಲು, ದೇವಳದ ತಂತ್ರಿ ನಾಗೇಶ್ ತಂತ್ರಿ ಕೆಮ್ಮಿಂಜೆ ಮತ್ತು ಕಾರ್ತಿಕ್ ತಂತ್ರಿ, ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಣಾಧಿಕಾರಿ ಶ್ರೀಧರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜನಾರ್ದನ ಜೋಯಿಸ ಪ್ರಾಸ್ತಾ ವಿಕವಾಗಿ ಮಾತನಾಡಿ, ಕ್ಷೇತ್ರದ ತಂತ್ರಿಯವರ ಮಾರ್ಗದರ್ಶನದಂತೆ ನಾಗನಕಟ್ಟೆ ನಿರ್ಮಾಣ ಕಾರ್ಯ ನಡೆದಿದೆ. ನಿಧಿ ಇರುವ ನಾಗ ಸಾನ್ನಿಧ್ಯದ ಸ್ಥಳದಲ್ಲಿದ್ದ ಮರದ ಬುಡವನ್ನು ತೆಗೆದರೆ ಸಾನ್ನಿಧ್ಯಕ್ಕೆ ಹಾನಿಯಾಗುತ್ತದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಮರದ ಬುಡವನ್ನು ತೆಗೆಯದೆ ಸಾನ್ನಿಧ್ಯ ನಿರ್ಮಾಣ ಮಾಡಲಾಗಿದೆ ಎಂದರು.

‘ನಾಗ ಸಾನ್ನಿಧ್ಯ ನಿರ್ಮಾಣ ಕೆಲಸ ವನ್ನು ಶೀಘ್ರವಾಗಿ ಮಾಡಬೇಕಾಗಿ ದ್ದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇವೆ. ತಪ್ಪಾಗಿದ್ದರೆ ಊರವರ ಸಹಕಾರದೊಂದಿಗೆ ಸರಿಪಡಿಸಲು ಬದ್ಧರಾಗಿದ್ದೇವೆ. ಈ ಗೊಂದಲ ನಿವಾರಿಸುವ ಉದ್ದೇಶದಿಂದ ಸಭೆ ಕರೆಯಲಾಗಿದೆ’ ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಮಾತ ನಾಡಿ, ‘ತಪ್ಪಾಗಿದ್ದರೆ ಸರಿಪಡಿಸುವ ಉದ್ದೇಶದಿಂದಲೇ ದೇವರ ಹಿತ ತಿಳಿದು ಕೊಳ್ಳಲು ಸಭೆ ಕರೆಯಲಾಗಿದೆ. ಪ್ರಸ್ತುತ ನಿರ್ಮಾಣ ಮಾಡಿರುವ ನಾಗನ ಕಟ್ಟೆ ವಾಸ್ತು ಪ್ರಕಾರ ಆಗಿದೆಯೋ ಇಲ್ಲವೋ ಎಂಬುವುದನ್ನು ವಾಸ್ತು ತಜ್ಞರು, ವಿಧಿವಿಧಾನ ಪ್ರಕಾರ ಆಗಿದೆಯೋ ಇಲ್ಲ ವೋ ಎಂಬುವುದನ್ನು ತಂತ್ರಿಗಳು, ದೇವ ಹಿತ ಇದೆಯೋ ಇಲ್ಲವೇ ಎಂಬುವುದನ್ನು ಪ್ರಶ್ನಾಚಿಂತನೆಯ ಮೂಲಕ ದೈವಜ್ಞರು ತಿಳಿಸಬೇಕು’ ಎಂದರು.

ಅದಕ್ಕೆ ಆಕ್ಷೇಪಿಸಿದ ಸಮಿತಿಯ ಮಾಜಿ ಅಧ್ಯಕ್ಷ ಅರುಣ್‍ಕುಮಾರ್ ಪುತ್ತಿಲ, ‘ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಇಲ್ಲಿ ಯಾವುದೂ ಆಗಿಲ್ಲ. ನಾಗನ ಕಟ್ಟೆಯನ್ನು ನೋಡುವಾಗಲೇ ಸರಿಯಿಲ್ಲ ಎಂಬುವುದು ಗೊತ್ತಾಗುತ್ತದೆ. ಇಂತಹ ಲೋಪವಿರುವಾಗ ಇಲ್ಲಿ ಪ್ರಶ್ನೆ ಇಟ್ಟು ದೈವಚಿತ್ತ ಇದೆಯೇ ಎಂದು ತಿಳಿಯುವುದಕ್ಕೆ ನಮ್ಮ ಆಕ್ಷೇಪವಿದ್ದು, ಸಾರ್ವತ್ರಿಕ ತೀರ್ಮಾನಕ್ಕೆ ನೀವು ಬದ್ಧರಾಗಬೇಕು’ ಎಂದರು.

‘ನಾವು ಕೇವಲ ಇಚರ್ಚೆ ಮಾಡಲು ಬಂದಿಲ್ಲ. ಮಾಡಿದ ಕಾರ್ಯಕ್ಕೆ ದೇವರ ಹಿತ ಹೇಗುಂಟು ಎಂದು ಹೇಳಲು ಬಂದಿದ್ದೇವೆ. ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿಯೇ ನಿಧಿ ಸಂಕೇತವಿರುವ ನಾಗ ಸಾನ್ನಿಧ್ಯದಲ್ಲಿನ ಮರದ ಬುಡ ವನ್ನು ತೆಗೆಯಬಾರದು ಎಂದು ಕಂಡು ಬಂದಿತ್ತು. ವಾಸ್ತು ಪ್ರಕಾರ ಆಗಿದೆಯೇ, ದೇವರ ಹಿತ ಇದೆಯೇ ಎಂದಷ್ಟೇ ತಿಳಿದುಕೊಳ್ಳಬೇಕಾಗಿರುವ ವಿಚಾರ’ ಎಂದು ಶಶೀಂದ್ರ ನಾಯರ್ ಹೇಳಿದರು.

ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಜಯಂತ ನಡುಬೈಲು, ಮಹೇಶ್ಚಂದ್ರ ಸಾಲ್ಯಾನ್, ಗ್ರಾಮಸ್ಥರಾದ ಮನು ಎಂ.ರೈ, ಶ್ರೀಕಾಂತ್ ಆಚಾರ್ಯ, ಸುಂದರ ಗೌಡ, ಸೀತಾರಾಮ ಗೌಡ ಮತ್ತಿತರರು, ‘ಇಲ್ಲಿ ಯಾರನ್ನೂ ವಿಶ್ವಾಸ ತೆಗೆದುಕೊಳ್ಳದೆ ಅವರ ಅನುಕೂಲಕ್ಕೆ ತಕ್ಕಂತೆ ನಾಗನ ಕಟ್ಟೆ ನಿರ್ಮಾಣ ಮಾಡಲಾಗಿದ್ದು, ಯಾವುದೂ ಸರಿಯಿಲ್ಲ’ ಎಂದು ವಾದಿಸತೊಡಗಿದರು.

ಧಾರ್ಮಿಕದತ್ತಿ ಇಲಾಖೆಯ ಪರಿವೀಕ್ಷಣಾಧಿಕಾರಿ ಶ್ರೀಧರ್ ಮಾತ ನಾಡಿ, ‘ದೇವಳಕ್ಕೆ ಸಂಬಂಧಿಸಿದ ಧಾರ್ಮಿಕ, ವೈದಿಕ, ತಾಂತ್ರಿಕ ವಿಧಿ ವಿಧಾನಗಳನ್ನು ನಡೆಸುವ ಜವಾಬ್ದಾರಿ ವ್ಯವಸ್ಥಾಪನಾ ಸಮಿತಿಯದ್ದಾಗಿದೆ. ತಪ್ಪು ಎಂದು ಹೇಳುವವರು ಎಲ್ಲಿ ತಪ್ಪಾಗಿದೆ ಎಂದು ಹೇಳಬೇಕು. ಎಲ್ಲವೂ ತಪ್ಪು ಎನ್ನುವುದಾದರೆ ನಾನು ಎದ್ದು ಹೋಗುತ್ತೇನೆ’ ಎಂದರು.

ಆ ಬಳಿಕವೂ ಕೆಲವರು ದೇವರ ಹಿತ ತಿಳಿಯಲು ಪ್ರಶ್ನಾಚಿಂತನೆಯ ಅಗತ್ಯವಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆ ಗೊಂದಲಮಯವಾಗಿ ಮುಕ್ತಾಯವಾಯಿತು.

ಜನವರಿ ನಂತರ ನಾಗಪ್ರತಿಷ್ಠೆ: ಸಲಹೆ
‘ನಿರ್ಮಾಣಗೊಂಡಿರುವ ನಾಗಸಾನ್ನಿಧ್ಯ ಕುರಿತು ದೇವರ ಹಿತ ತಿಳಿಯುವುದಕ್ಕೆ ಆಕ್ಷೇಪಗಳು ಇರುವುದರಿಂದ, ವಾಸ್ತು ತಜ್ಞರು ಹಾಗೂ ತಂತ್ರಿಗಳ ಮಾರ್ಗದರ್ಶನದಲ್ಲಿ ತಪ್ಪುಗಳಾಗಿದ್ದಲ್ಲಿ ಸರಿಪಡಿಸಿಕೊಂಡು ಮುಂದಿನ ವರ್ಷ ಜನವರಿ 15ರ ಬಳಿಕದ ಉತ್ತರಾಯನ ಸಂದರ್ಭದಲ್ಲಿ ಶುಭ ಮುಹೂರ್ತವನ್ನು ನೋಡಿಕೊಂಡು ನಾಗ ಪ್ರತಿಷ್ಠೆ ಮಾಡುವುದು ಊರಿನ ದೃಷ್ಟಿಯಿಂದ ಉತ್ತಮ’ ಎಂದು ದೈವಜ್ಞ ಶಶೀಂದ್ರ ನಾಯರ್ ಸಲಹೆ ನೀಡಿದರು.

ಶಿಲ್ಪ ಪ್ರಕಾರವೇ ಆಗಿದೆ: ‘ಚಿತ್ರಕೂಟ ಎಂದರೆ ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿ ಶಿಲ್ಪ ಶಾಸ್ತ್ರ ಪ್ರಕಾರವೇ ನಾಗ ಸಾನ್ನಿಧ್ಯ ನಿರ್ಮಾಣ ಕಾರ್ಯ ಆಗಿದೆ. ಇಲ್ಲಿ ಸರಿಯಾಗಿಯೇ ಇದ್ದು ವ್ಯತ್ಯಾಸಗಳು ಆಗಿಲ್ಲ. ನಾನು ಹಣ ಕೇಳಿ ಪಡೆಯುವ ಮನುಷ್ಯನೂ ಅಲ್ಲ. ಇಲ್ಲಿ ಗಲಾಟೆ ಮಾಡುವುದಾದರೆ ನಾವು ಬರುವ ಅಗತ್ಯವೂ ಇಲ್ಲ. ದೇವಸ್ಥಾನದಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಎಲ್ಲರಿಗೂ ಹಾಳು. ಇಲ್ಲಿ ದೇವರಿದ್ದಾರೆ ಎಂಬುವುದು ಯಾರಿಗೂ ಗೊತ್ತಿಲ್ಲ. ನೀವು ಈ ರೀತಿ ಮಾಡುವುದಾದರೆ ನಾವು ಇಲ್ಲಿ ಇರುವುದಿಲ್ಲ’ ಎಂದು ಪ್ರಸಾದ್ ಮುನಿಯಂಗಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT