ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಗಮನ ಸೆಳೆದಿದ್ದ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ

ಕಾನೂನು ವಿದ್ಯಾರ್ಥಿಗಳ ಅಧ್ಯಯನ ವಸ್ತುವಾದ ತೀರ್ಪು
Last Updated 6 ಸೆಪ್ಟೆಂಬರ್ 2020, 9:34 IST
ಅಕ್ಷರ ಗಾತ್ರ

ಮಂಗಳೂರು: ಕೇರಳದ ಕಾಸರಗೋಡಿನ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠಾಧೀಶ ಕೇಶವಾನಂದ ಭಾರತಿ ಸ್ವಾಮೀಜಿಯವರು ಶನಿವಾರ ಮಧ್ಯರಾತ್ರಿ ನಿಧನರಾದರು. 60 ನೇ‌ ಚಾತುರ್ಮಾಸ್ಯ ವ್ರತವನ್ನು ಇತ್ತೀಚೆಗಷ್ಟೆ ಪೂರ್ಣಗೊಳಿಸಿದ್ದ ಅವರು, ಪೇಜಾವರ ಮಠಾಧೀಶ ವಿಶ್ವೇಶ‌ತೀರ್ಥ ಸ್ವಾಮೀಜಿ ನಂತರ ಅತಿ ಹೆಚ್ಚು‌ ಚಾತುರ್ಮಾಸ್ಯ ವ್ರತ ಕೈಗೊಂಡ ಹಿರಿಮೆಗೆ ಪಾತ್ರರಾಗಿದ್ದರು.

1970ರಲ್ಲಿ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ದೇಶದಲ್ಲಿ ಈಗಲೂ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್‌ನ ದೊಡ್ಡ ಪೀಠದಲ್ಲಿ ನಿರಂತರ 68 ದಿನಗಳ ವಿಚಾರಣೆಯ ನಡೆದಿತ್ತು.

1970 ರ ಫೆಬ್ರುವರಿಯಲ್ಲಿ ಕೇರಳ ಸರ್ಕಾರ ಭೂಸುಧಾರಣೆ ಕಾಯ್ದೆಯ ಹೆಸರಲ್ಲಿ ಕಾಸರಗೋಡಿನ ಬಳಿ ಇರುವ ಎಡನೀರು ಮಠಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿ, ನೋಟಿಸ್‌ ಜಾರಿ ಮಾಡಿತ್ತು. ಆದರೆ ಸರ್ಕಾರದ ಈ ನಡೆಗೆ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದರು.

ಖ್ಯಾತ ವಕೀಲರಾದ ನಾನಾಭಾಯ್‌ ಫಾಲ್ಕಿವಾಲಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸ್ವಾಮೀಜಿ ಮನವೊಲಿಸಿದರು. ಅರ್ಜಿದಾರರ ಪರವಾಗಿ ಅವರೇ ವಕಾಲತ್ತು ವಹಿಸಿದ್ದರು. ಸರ್ಕಾರದ ಹಸ್ತಕ್ಷೇಪವಲ್ಲದೇ ಧಾರ್ಮಿಕ ಸ್ವಾಮ್ಯದ ಆಸ್ತಿಯನ್ನು ನಿರ್ವಹಿಸುವ ಹಕ್ಕಿನ ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪವಿತ್ತು. ಈ ಪ್ರಕರಣ ಕೇವಲ ಮಠದ ಆಸ್ತಿಗೆ ಸಂಬಂಧಿಸಿದ ವಿಚಾರಕ್ಕಷ್ಟೇ ಅಲ್ಲದೇ, ಮೂಲಭೂತ ಹಕ್ಕುಗಳ ಮಾನ್ಯತೆಯ ಬಗ್ಗೆಯೂ ವಿಸ್ತೃತ ಚರ್ಚೆಗೆ ನಾಂದಿ ಹಾಡಿತು. ’ಕೇಶವಾನಂದ ಭಾರತಿ ವರ್ಸಸ್‌ ಕೇರಳ ಸರ್ಕಾರ‘ ಎಂದು ಗುರುತಿಸಿಕೊಳ್ಳುವ ಈ ಪ್ರಕರಣದ ಕುರಿತು 68 ದಿನ ವಾದ ಪ್ರತಿವಾದಗಳು ನಡೆದವು.

1972ರ ಅಕ್ಟೋಬರ್‌ 31ರಂದು ಆರಂಭವಾದ ವಾದ- ಪ್ರತಿವಾದಗಳು 1973ರ ಮಾರ್ಚ್‌ 23ಕ್ಕೆ ಪೂರ್ಣಗೊಂಡವು. ಈ ಪ್ರಕರಣದ ತೀರ್ಪನ್ನು ಭಾರತದ ನ್ಯಾಯಾಂಗ ಹಾಗೂ ಸಂವಿಧಾನದ ವಿಚಾರದಲ್ಲಿ ಮಹತ್ತರ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ 13 ಸದಸ್ಯರ ಅತೀ ದೊಡ್ಡ ಸಾಂವಿಧಾನಿಕ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಿದ್ದು ಮತ್ತೊಂದು ವಿಶೇಷತೆಯಾಗಿದೆ.

ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆ. ಆದರೆ, ಈ ಅಧಿಕಾರ ಬಳಸಿ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಿದ್ದರೂ ತಿದ್ದಬಹುದೇ?’ ಎಂಬ ಪ್ರಶ್ನೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿ ಎದುರಾಯಿತು. ಆಗ ಸುಪ್ರೀಂ ಕೋರ್ಟ್‌, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯು ಅದರ ಮೂಲ ಸ್ವರೂಪ ಅಂದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಪರಿಚ್ಛೇದ 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೆ ಒಳಪಟ್ಟ ನಂತರವೇ ತಿದ್ದುಪಡಿಗೊಳ್ಳುವಂತೆಯೂ ಹೊಸ ಮಾರ್ಗಸೂಚಿ ಜಾರಿ ಮಾಡಿತು.

13 ನ್ಯಾಯಮೂರ್ತಿಗಳ ನ್ಯಾಯಪೀಠವು 7-6 ರಷ್ಟು ಬಹುಮತದಿಂದ ಈ ತೀರ್ಪು ನೀಡಿತು. ಸಂವಿಧಾನದ ಮೂಲಭೂತ ವೈಶಿಷ್ಟ್ಯಗಳನ್ನು ತಿರುಚುವ‌ ಅಥವಾ ಅದನ್ನು ದುರ್ಬಲಗೊಳಿಸುವ ಅಧಿಕಾರ ಸಂಸತ್ತಿಗಿಲ್ಲ ಎಂದು ತಿಳಿಸಿತು. ಈಗಲೂ ಭಾರತದ ಕಾನೂನು ವಿದ್ಯಾರ್ಥಿಗಳು ಅಭ್ಯಸಿಸುವ ಬಹು ಮುಖ್ಯವಾದ ಪ್ರಕರಣಗಳಲ್ಲಿ ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರದ ಪ್ರಕರಣ ಪ್ರಮುಖವಾಗಿದೆ.

ಗಡಿನಾಡಿನ ಸಾಂಸ್ಕೃತಿಕ ಕೇಂದ್ರ ಎಡನೀರು

1960ರ ನವಂಬರ್ 14ರಂದು ಎಡನೀರು ಮಠಾಧೀಶರಾಗಿದ್ದ ಕೇಶವಾನಂದ ಭಾರತಿ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಕೇಂದ್ರವಾಗಿ ಎಡನೀರು ಗುರುತಿಸಲಾಗುತ್ತಿದ್ದು, ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವಾಗಿ ಮಾರ್ಪಟ್ಟಿತ್ತು.

ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ, ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು. ಪ್ರತಿ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು. ಶ್ರೀಗಳು ಹರಿಕಥೆಯನ್ನು ಸಹ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT