ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಭುತ್ವವನ್ನು ವಿರೋಧಿಸುತ್ತಿದ್ದ ಕಾರಂತರು’

ಕೃಷ್ಣಮೂರ್ತಿ ಹನೂರು, ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ಪಿ ರಾವ್‌ಗೆ ಕಾರಂತ ಪ್ರಶಸ್ತಿ
Published 30 ಮೇ 2024, 6:31 IST
Last Updated 30 ಮೇ 2024, 6:31 IST
ಅಕ್ಷರ ಗಾತ್ರ

ಮೂಡುಬಿದಿರೆ (ದಕ್ಷಿಣ ಕನ್ನಡ): ‘ಆಡಳಿತ ಟೀಕಿಸುವ ಸ್ವಾತಂತ್ರ್ಯವನ್ನು ಪ್ರಭುತ್ವವು ಕಡಿತಗೊಳಿಸುತ್ತದೆ. ಟೀಕಿಸುವವರನ್ನು ಪ್ರಭುತ್ವ ಒಪ್ಪುವುದಿಲ್ಲ. ಹೊಗಳಿಕೆ ಲಾಭದಾಯದ ದಾರಿ ಎಂಬುದನ್ನು ಅದು ತೋರಿಸಿಕೊಡುತ್ತದೆ. ತನಗನ್ನಿಸಿದನ್ನು ಮುಲಾಜಿಲ್ಲದೆ ಹೇಳುತ್ತಿದ್ದ ಶಿವರಾಮ ಕಾರಂತರು ಕೂಡ ಪ್ರಭುತ್ವವನ್ನು ವಿರೋಧಿಸುತ್ತಿದ್ದರು. ಆ ಕಾರಣಕ್ಕಾಗಿಯೇ  ಕಾರಂತರು ಈಗಲು ನಮಗೆ ಬೇಕು, ಅವರ ಮಾತು ಕೇಳಬೇಕು ಅನ್ನಿಸುತ್ತದೆ’ ಎಂದು ಚಿಂತಕ ಲಕ್ಷ್ಮೀಶ ತೊಳ್ಪಾಡಿ ಹೇಳಿದರು.

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನ ಇಲ್ಲಿನ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರಂತರು ಯಾವುದೇ ವಿಷಯದ ಕುರಿತು ವಿಮರ್ಶೆ ಮಾಡದೆ ಮಾತನಾಡುತ್ತಿರಲಿಲ್ಲ. ಇತರರಂತೆ ಅವರು ಯಾರನ್ನೂ ಹೊಗಳುತ್ತಿರಲಿಲ್ಲ. ಕಾರಂತರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಬೇಕಿತ್ತು. ಅವರ ನೇರ ಮಾತುಗಳನ್ನು ಸ್ವಪಕ್ಷೀಯರು, ವಿರೋಧಪಕ್ಷದವರು ಹಾಗೂ ಜನರು ಕೇಳಬೇಕಿತ್ತು. ಆದರೆ, ಕಾರಂತರ ಮಾತುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆಅವರಿಗೆ ರಾಜ್ಯಸಭೆ ಸದಸ್ಯತ್ವದ ಅವಕಾಶ ಸಿಗಲಿಲ್ಲ’ ಎಂದರು.

ಕಾರಂತ ಪ್ರಶಸ್ತಿ: ಮೈಸೂರಿನ ಕೃಷ್ಣಮೂರ್ತಿ ಹನೂರು, ಬೆಂಗಳೂರಿನ ಮೂಡ್ನಾಕೂಡು ಚಿನ್ನಸ್ವಾಮಿ, ಉಡುಪಿಯ ಕೆ.ಪಿ ರಾವ್‌ಗೆ 2023ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಗ್ಗೋಡಿನ ನೀನಾಸಂ ರಂಗ ಮಂದಿರ ಪರವಾಗಿ ಸಿದ್ಧಾರ್ಥ ಭಟ್ ಪ್ರಶಸ್ತಿ ಸ್ವೀಕರಿಸಿದರು.

ಕಾರಂತ ಪುರಸ್ಕಾರ: ಎಚ್.ಆರ್ ಲೀಲಾವತಿ, ಬಿ.ಜನಾರ್ಧನ ಭಟ್, ಪ್ರೊ.ಎಚ್.ಟಿ ಪೋತೆ ಮತ್ತು  ನಿತ್ಯಾನಂದ ಶೆಟ್ಟಿ ಅವರಿಗೆ ಶಿವರಾಮ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪ್ರಮುಖರಾದ ಎಂ. ಮೋಹನ ಅಳ್ವ, ಕೃಷ್ಣರಾಜ ಹೆಗ್ಡೆ, ಶ್ರೀಪತಿ ಭಟ್, ಧನಂಜಯ್ ಕುಂಬ್ಳೆ, ವೇಣುಗೋಪಾಲ ಶೆಟ್ಟಿ ಇದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಾವಿನಕುಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT