ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುನಿಕೋಡ್‌ನಲ್ಲಿ ತುಳುವಿಗೆ ಪ್ರತ್ಯೇಕ ಸ್ಥಾನ ಸಿಗಲಿ: ದಯಾನಂದ ಕತ್ತಲಸಾರ್

‘ತಜ್ಞರು ಅರ್ಧದಲ್ಲಿ ಕೈಚೆಲ್ಲಿದ ಕಾರಣ ವಿಳಂಬ; ಕಡಿಮೆ ಬಳಕೆಯಲ್ಲಿರುವ ಭಾಷೆ ತಿಗಳಾರಿ’
Published : 11 ಸೆಪ್ಟೆಂಬರ್ 2024, 14:23 IST
Last Updated : 11 ಸೆಪ್ಟೆಂಬರ್ 2024, 14:23 IST
ಫಾಲೋ ಮಾಡಿ
Comments

ಮಂಗಳೂರು: ‘ತುಳು–ತಿಗಳಾರಿ ಭಾಷೆ ಈಚೆಗೆ ಯುನಿಕೋಡ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಸಂತೋಷದ ವಿಷಯ. ಆದರೆ ತುಳುವಿಗೆ ಮಾತ್ರ ಪ್ರತ್ಯೇಕ ಸ್ಥಾನ ಸಿಗಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ತುಳುವಿಗೆ ಸ್ಥಾನ ನೀಡಬೇಕೆಂದು ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕೆಲಸ ಶೇಕಡ 80ರಷ್ಟು ಪೂರ್ಣಗೊಂಡಿದೆ’ ಎಂದರು.

‘ವೆಂಕಟರಾಜ ಪುಣಿಂಚಿತ್ತಾಯ ಅವರು ತುಳು ಲಿಪಿ ಕುರಿತು ಮೊದಲಿಗೆ ಗಮನಸೆಳೆದಿದ್ದರು. ಲಿಪಿ ಕುರಿತು ರಾಧಾಕೃಷ್ಣ ಬೆಳ್ಳೂರು ಅಧ್ಯಯನ ನಡೆಸಿದ್ದರು. 2009ರಲ್ಲಿ ಪ್ರವೀಣ್ ರಾಜ್ ಮಂಜೇಶ್ವರ ಬಳಗ ಮತ್ತು ಕೆ.ಪಿ.ರಾವ್‌ ಅವರು ಫಾಂಟ್ ಸಿದ್ಧಪಡಿಸಿದ್ದರು. ನಂತರ ಯುನಿಕೋಡ್‌ನಲ್ಲಿ ತುಳು ಫಾಂಟ್‌ ಸೇರ್ಪಡೆಗೆ ಪ್ರಯತ್ನ ನಡೆದಿತ್ತು’ ಎಂದು ಅವರು ತಿಳಿಸಿದರು. 

‘ತುಳು ವಿಷಯದಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ತಂತ್ರಜ್ಞಾನ ತಜ್ಞ, ಲೇಖಕ ಯು.ಬಿ.ಪವನಜ ಅವರು ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದ ಕಾರಣ ತುಳುವಿಗೆ ಸ್ಥಾನ ಸಿಗುವುದು ವಿಳಂಬವಾಗಿದೆ. ತುಳು ಯುನಿಕೋಡ್‌ನಲ್ಲಿ ಸೇರ್ಪಡೆಯಾಗಿದೆ ಎಂಬ ಸುದ್ದಿಯನ್ನು ಈಚೆಗೆ ಅವರೇ ಹಬ್ಬಿದ್ದರು’ ಎಂದು ದೂರಿದರು.

‘ಪವನಜ ಅವರು ಪ್ರಸ್ತಾವ ಮಾತ್ರ ಸಲ್ಲಿಸಿ ಕೈಬಿಟ್ಟಿದ್ದರು. ನಂತರ ಅಕಾಡೆಮಿ ಜವಾಬ್ದಾರಿ ವಹಿಸಿಕೊಂಡಿತು. ಜೈ ತುಳುನಾಡು ಸಂಘಟನೆ ಬೆಂಬಲವಾಗಿ ನಿಂತಿತು. ಈಗ ಸೇರ್ಪಡೆಯಾಗಿರುವ ತಿಗಳಾರಿಗೂ ತುಳುವಿಗೂ ಶೇ 25ರಷ್ಟು ವ್ಯತ್ಯಾಸವಿದೆ. ಆದ್ದರಿಂದ ತುಳುವನ್ನು ಅದರ ಜೊತೆಗೆ ಸೇರಿಸಿದ್ದು ಸರಿಯಲ್ಲ’ ಎಂದರು.

ಯುನಿಕೋಡ್‌ಗೆ ಪ್ರಸ್ತಾವನೆ ಸಲ್ಲಿಸಿದ ತಂಡದ ಸದಸ್ಯ ಕಿರಣ್ ಕೊಯ್ಕುಡೆ, ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಉದಯ ಪೂಂಜ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ನಾಗೇಶ್ ಕುಲಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT