ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ತಂಬಾಕು ಉತ್ಪನ್ನ ಮಾರಾಟ ಸ್ಥಳ ನಿಯಂತ್ರಣ ಬೈಲಾಕ್ಕೆ ವಿರೋಧ

ರಾಜ್ಯ ಸಣ್ಣ ಬೀಡಿ– ಸಿಗರೇಟು ಮಾರಾಟಗಾರರ ಸಂಘದಿಂದ ಪ್ರತಿಭಟನೆ
Last Updated 27 ಆಗಸ್ಟ್ 2022, 9:43 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಮುನ್ಸಿಪಾಲಿಟಿಗಳ (ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಮಾರಾಟ ಸ್ಥಳಗಳ ನಿಯಂತ್ರಣ ಮತ್ತು ತನಿಖೆ) ಮಾದರಿ ಬೈಲಾ 2022 ಅನುಷ್ಠಾನಕ್ಕೆ ರಾಜ್ಯ ಸಣ್ಣ ಬೀಡಿ– ಸಿಗರೇಟು ಮಾರಾಟಗಾರರ ಸಂಘವು ವಿರೋಧ ವ್ಯಕ್ತಪಡಿಸಿದೆ.

ಬೀಡಿ– ಸಿಗರೇಟು ಮಾರಾಟಗಾರರಿಗೆ ವಿನಾಶಕಾರಿಯಾಗಿ ಪರಿಣಮಿಸಲಿರುವ ಈ ಬೈಲಾವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಂಘದ ಸದಸ್ಯರು ನಗರದ ಕ್ಲಾಕ್‌ ಟವರ್‌ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ವಕ್ತಾರ ಸುನಿಲ್‌ ಕುಮಾರ್‌ ಬಜಾಲ್‌, ‘ ಬೀಡಿ– ಸಿಗರೇಟು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕಾರ್ಮಿಕರು, ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕಾಗಿ 2003ರಲ್ಲಿ ರೂಪಿಸಲಾದ ‘ಜಾಹೀರಾತು ಮತ್ತು ವ್ಯಾಪಾರ ಹಾಗೂ ವಾಣಿಜ್ಯ ಉತ್ಪಾದನೆ ಪೂರೈಕೆ ಮತ್ತು ವಿತರಣೆ ನಿಷೇದ ಕಾಯ್ದೆ’ (ಕೊಟ್ಪಾ)ಜಾರಿಗೊಂಡ ಬಳಿಕ ಅಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ. ಈಗ ರೂಪಿಸಿರುವ ಬೈಲಾ ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಪಡೆಯುವುದು ಹಾಗೂ ಸಲಹಾ ಪುಸ್ತಕ ನಿರ್ವಹಿಸುವುದು ಕಡ್ಡಾಯ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಬೇಕಾಬಿಟ್ಟಿ ದಂಡ ವಿಧಿಸಲು ಇದು ಅವಕಾಶ ಕಲ್ಪಿಸಲಿದೆ. ವ್ಯಾಪಾರಿಗಳ ಶೋಷಣೆಗೆ ಇದು ಮತ್ತಷ್ಟು ದಾರಿ ಮಾಡಿಕೊಡಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಣ್ಣ ವ್ಯಾಪಾರಿಗಳು ಸರ್ಕಾರದಿಂದ ಪರವಾನಗಿ ಪಡೆಯುವುದಕ್ಕೆ ಎಷ್ಟು ಕಷ್ಟ ಇದೆ ಎಂದು ಗೊತ್ತಿದೆ. ಇದಕ್ಕೆ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿಸುವಷ್ಟರಲ್ಲಿ ಅನಕ್ಷರಸ್ಥ ವ್ಯಾಪಾರಿಗಳು ಹೈರಾಣಾಗಲಿದ್ದಾರೆ. ಪ್ರತಿ ವರ್ಷವೂ ಪರವಾನಗಿಯನ್ನು ನವೀಕರಿಸಬೇಕು. ಈ ರೀತಿ ಕಾನೂನುಗಳು ಹೆಚ್ಚಿದಂತೆ ಭ್ರಷ್ಟಾಚಾರವೂ ಹೆಚ್ಚಲಿದೆ‌. ಒಂದೆಡೆ ಸುಲಲಿತ ಉದ್ಯಮದ ಹೆಸರಿನಲ್ಲಿ ಕಾನೂನು ಕಟ್ಟಳೆಗಳನ್ನು ಸರಳಗೊಳಿಸುವ ಭರವಸೆ ನೀಡಿರುವ ಸರ್ಕಾರ, ಇನ್ನೊಂದೆಡೆ ಇಂತಹ ಬೈಲಾಗಳ ಮೂಲಕ ಸಣ್ಣ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯಲು ಮುಂದಾಗಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಪರವಾನಗಿ ಪಡೆದ ಅಂಗಡಿಯಲ್ಲಿ ಕೆಟ್ಟ ಘಟನೆ ನಡೆದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಬೈಲಾದಲ್ಲಿ ಹೇಳಲಾಗಿದೆ. ಕೆಟ್ಟ ಘಟನೆಯ ವ್ಯಾಖ್ಯಾನ ಏನೆಂದೇ ಸ್ಪಷ್ಟಪಡಿಸಿಲ್ಲ’ ಎಂದರು.

ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್‌, ‘ಬೀಡಿ– ಸಿಗರೇಟು, ತಂಪುಪಾನೀಯ, ಖನಿಜಯುಕ್ತ ನೀರು ಮಾರಿಕೊಂಡು ಸಾವಿರಾರುಸಣ್ಣ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂತ ತತ್ತರಿಸಿದ್ದ ಸಣ್ಣ ವ್ಯಾಪಾರಿಗಳ ಮೇಲೆ ಮತ್ತೆ ಗದಾಪ್ರಹಾರ ಸರಿಯೇ’ ಎಂದು ಪ್ರಶ್ನಿಸಿದರು.

ಸಿಐಟಿಯು ದ.ಕ. ಜಿಲ್ಲಾ ಘಟಕದ ಉಪಾಧ್ಯಕ್ಷ ಸುಕುಮಾರ್‌ ತೊಕ್ಕೊಟ್ಟು, ಬೀದಿಬದಿ ವ್ಯಾಪಾರಿಗಳ ಸಂಘದ ಸಂತೋಷ್‌, ಮಹಮ್ಮದ್‌ ಮುಸ್ತಾಫ, ಹರೀಶ ಪೂಜಾರಿ, ಸಣ್ಣ ವ್ಯಾಪಾರಿಗಳ ಸಂಘದ ಸತೀಶ ಮಲ್ಯ, ಗಿರಿ ಅತ್ತಾವರ, ಅಬೂಬಕ್ಕರ್‌, ರೇಷ್ಮಾ ಮತ್ತಿತರರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT