ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪಾರ್ಕಿಂಗ್ ಅವ್ಯವಸ್ಥೆ; ಸಂಚಾರ ಕಿರಿಕಿರಿ

Published 17 ಜೂನ್ 2023, 15:23 IST
Last Updated 17 ಜೂನ್ 2023, 15:23 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ವಾಹನಗಳ ಪಾರ್ಕಿಂಗ್ ಅವ್ಯವಸ್ಥೆ, ನಂತೂರು ಸರ್ಕಲ್ ಮತ್ತು ಕೆಪಿಟಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ, ಶಾಲೆಗಳು ಆರಂಭವಾಗುವ ಮತ್ತು ಮುಗಿಯುವ ಅವಧಿಯಲ್ಲಿ ಸಂಚಾರ ಕಿರಿಕಿರಿ, ವಾಹನ, ಬಸ್ ನಿಲುಗಡೆಯಲ್ಲಿ ಶಿಸ್ತಿನ ಕೊರತೆ... ಇಂತಹ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟರು.

ನಗರ ಸಂಚಾರ ಪೊಲೀಸ್ ವತಿಯಿಂದ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಸಂಚಾರ ಸಂಪರ್ಕ ದಿವಸ’ದಲ್ಲಿ ಆಟೊರಿಕ್ಷಾ ಚಾಲಕರು, ಟ್ಯಾಕ್ಸಿ ಮಾಲೀಕರ ಸಂಘದವರು, ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಅಧಿಕಾರಿಗಳು ಅಭಿಪ್ರಾಯ ಹಂಚಿಕೊಂಡರು.

ನಗರದ ಅನೇಕ ಕಡೆಗಳಲ್ಲಿ ರಸ್ತೆ ವಿಸ್ತರಣೆ ಆಗಿದ್ದರೂ, ಎರಡೂ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಪಾದಚಾರಿಗಳು, ವಾಹನ ಸವಾರರಿಗೆ ಸಮಸ್ಯೆಯಾಗುತ್ತದೆ. ವಾಣಿಜ್ಯ ಮಳಿಗೆಗಳ ಕೆಳ ಅಂತಸ್ತಿನಲ್ಲಿ ಪಾರ್ಕಿಂಗ್‌ಗೆ ಲಭ್ಯ ಇರುವುದಿಲ್ಲ. ಇಂತಹ ಮಳಿಗೆಗಳು ರಸ್ತೆಯ ಮೇಲೆ ಅಕ್ರಮವಾಗಿ ;ಗ್ರಾಹಕರಿಗೆ ಮಾತ್ರ ಪಾರ್ಕಿಂಗ್’ ಫಲಕ ಹಾಕಿರುತ್ತವೆ. ಪ್ರತಿಷ್ಠಿತ ಹೋಟೆಲ್‌ಗಳು, ದೊಡ್ಡ ಆಸ್ಪತ್ರೆಗಳು ಕೂಡ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ ಕಾರಣ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುತ್ತವೆ ಎಂದು ಹಲವರು ದೂರಿದರು.

ರೈಲ್ವೆ ನಿಲ್ದಾಣದಲ್ಲಿ ಪ್ರಿ ಪೇಯ್ಡ್ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲದೆ, ಇಲ್ಲಿ ಅನಧಿಕೃತವಾಗಿ ನಿಲ್ಲುವ ಕೆಲವು ರಿಕ್ಷಾದವರು ಅಧಿಕ ಬಾಡಿಗೆ ಪಡೆಯುವುದರಿಂದ ಎಲ್ಲರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಿಸಬೇಕು. ಬಿಳಿ ಬೋರ್ಡ್‌ನ ವಾಹನಗಳು ಶಾಲಾ ಮಕ್ಕಳ ಟ್ರಿಪ್ ಮಾಡುವುದನ್ನು ತಡೆಗಟ್ಟಬೇಕು ಎಂದು ಆಟೊರಿಕ್ಷಾ ಮತ್ತು ಟ್ಯಾಕ್ಸಿ ಯೂನಿಯನ್‌ನವರು ಒತ್ತಾಯಿಸಿದರು.

ಅನಧಿಕೃತವಾಗಿ ಆಟೊರಿಕ್ಷಾಗಳನ್ನು ನಿಲುಗಡೆ ಮಾಡಲಾಗುತ್ತಿದೆ. ನಿಲ್ದಾಣಗಳಲ್ಲಿ ನಿಗದಿಗಿಂತ ಹೆಚ್ಚು ಆಟೊರಿಕ್ಷಾ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಪೊಲೀಸರು ಡ್ರಗ್ಸ್ ಹಾವಳಿ ನಿಯಂತ್ರಿಸಬೇಕಾಗಿದೆ ಎಂದು ಹನುಮಂತ ಕಾಮತ್ ಸಲಹೆ ಮಾಡಿದರು.

ನಗರದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದರೆ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವ ವಾಹನಗಳಿಗೆ ವೀಲ್‌ ಕ್ಲ್ಯಾಂಪ್ ಹಾಕಬೇಕು. ಖಾಸಗಿ ಬಸ್‌ಗಳು ಬಸ್‌ ತಂಗುದಾಣದಲ್ಲಿಯೇ ನಿಲುಗಡೆಯಾಗಬೇಕು ಎಂದು ಜಿ.ಕೆ.ಭಟ್ ಒತ್ತಾಯಿಸಿದರು. ನಗರದ ಎಲ್ಲೆಲ್ಲಿ ಪಾರ್ಕಿಂಗ್ ಲಭ್ಯವಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಬ್ಲ್ಯೂಪ್ರಿಂಟ್ ನೀಡಿ ಎಂದು ಅಲೆಕ್ಸಾಂಡರ್ ಒತ್ತಾಯಿಸಿದರು.

‘ಹೊರರಾಜ್ಯಗಳಿಂದ ಬರುವ ಕೆಲವು ವಿದ್ಯಾರ್ಥಿಗಳು ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಕಾಣುತ್ತಿದೆ’ ಎಂದು ಫ್ರೆಡ್ರಿಕ್ ದೂರಿದರು.

ತೊಕ್ಕೊಟ್ಟು ಬಸ್‌ ನಿಲ್ದಾಣಕ್ಕೆ ಬಸ್‌ಗಳು ಬರುತ್ತಿಲ್ಲ. ಬಸ್‌ಗಾಗಿ ಓಡಾಟ ಮಾಡುವಾಗ ಜನರು ಬಿದ್ದು ಅಪಾಯ ಮಾಡಿಕೊಂಡ ಉದಾಹರಣೆಗಳೂ ಇವೆ. ಕುತ್ತಾರ್ ಜಂಕ್ಷನ್‌ ಬಳಿ ಗೂಡಂಗಡಿಗಳಿಂದ ಬಸ್ ಇಳಿಯುವವರಿಗೆ, ಎದುರಿನಿಂದ ಬರುವ ವಾಹನಗಳಿಗೆ ಸಮಸ್ಯೆ ಆಗುತ್ತಿದೆ ಎಂದು ದಿನೇಶ್ ಕುಂಪಲ ಹೇಳಿದರು.

ಹಂಪನಕಟ್ಟೆಯ ಸಿಟಿ ಬಸ್‌ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಮಳೆ ಬಂದರೆ ಪ್ರಯಾಣಿಕರಿಗೆ ನಿಲ್ಲಲು ಶೆಲ್ಟರ್ ಇಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಗಮನ ಸೆಳೆದರು.

ಆರ್‌ಟಿಒ ವಿಶ್ವನಾಥ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅಬ್ದುಲ್ ಜಾವೇದ್, ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜೆರಿಸನ್ ಜಾರ್ಜ್, ಎನ್‍ಎಚ್‍ಎಐ ಅಧಿಕಾರಿ ಅನಿರುದ್ಧ್ ಕಾಮತ್ ಉಪಸ್ಥಿತರಿದ್ದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ.ದಿನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಸಂಚಾರ ಸಂಪರ್ಕ ದಿವಸ ನಡೆಯಲಿದೆ ಎಂದರು. ಟ್ರಾಫಿಕ್ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ವಂದಿಸಿದರು.

ವಾಹನ ನಿಲ್ಲಿಸದಂತೆ ಸೂಚನೆ

ಪೊಲೀಸರು ಅಲ್ಲಲ್ಲಿ ವಾಹನ ತಡೆದು ತಪಾಸಣೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಕೆಲವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್‌ ‘ಎಎಸ್‍ಐ ಪಿಎಸ್‍ಐ ಹಾಗೂ ಅವರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳು ಮಾತ್ರ ತಪಾಸಣೆಗೆ ವಾಹನ ನಿಲ್ಲಿಸಬಹುದು ಅಥವಾ ವೈರ್‌ಲೆಸ್‌ ಸಂದೇಶ ಬಂದರೆ ಇತರ ಸಿಬ್ಬಂದಿ ತಪಾಸಣೆ ನಡೆಸಬಹುದು. ವಾಹನ ತಪಾಸಣೆ ನಡೆಸುವವರಿಗೆ ‘ಬಾಡಿವೋರ್ನ್’ ಇರುವುದು ಕಡ್ಡಾಯವಾಗಿದೆ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಸೇರಿದಂತೆ ಪ್ರತ್ಯಕ್ಷವಾಗಿ ಕಾಣುವ ಸಂಚಾರ ನಿಯಮ ಉಲ್ಲಂಘನೆ ಹೊರತುಪಡಿಸಿ ಇತರ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ’ ಎಂದರು.

ಟ್ರಾಫಿಕ್ ವಾರ್ಡ್‌ ಆಗಿ ಸಹಕರಿಸಿ

ಪೊಲೀಸ್ ಇಲಾಖೆಗೆ ಟ್ರಾಫಿಕ್ ವಾರ್ಡನ್‌ಗಳ ಅಗತ್ಯವಿದ್ದು ಇದನ್ನು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿ ಸಾರ್ವಜನಿಕರು ಮುಂದೆ ಬರಬೇಕು. ವಾರದಲ್ಲಿ ನಾಲ್ಕು ತಾಸು ಬಿಡುವು ಮಾಡಿಕೊಂಡು ಇಲಾಖೆಗೆ ಸಹಕರಿಸಿದರೆ ಸಂಚಾರ ಸಮಸ್ಯೆ ನಿವಾರಣೆ ಸುಲಲಿತವಾಗುತ್ತದೆ. ಆಸಕ್ತರು ಹೆಸರು ನೋಂದಾಯಿಸಿದರೆ ಇಲಾಖೆ ಇದಕ್ಕೆ ಸಂಬಂಧಿಸಿ 15 ದಿನ ತರಬೇತಿ ನೀಡುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್‌ ಕುಮಾರ್ ಜೈನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT