ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಕಲಿಕೆಗೆ ವಿಕಿಪೀಡಿಯಾ ಆಕರ

ಕರಾವಳಿ ವಿಕಿಮೀಡಿಯನ್ಸ್ ಯೂಸರ್‌ ಗ್ರೂಪ್ಸ್‌ ಸದಸ್ಯರಿಂದ ಸಂಪಾದನೋತ್ಸವ
Last Updated 17 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಗಳೂರು: ಆರರಿಂದ ಹತ್ತನೇ ತರಗತಿ ತನಕದ ತುಳು ಭಾಷಾ ವಿದ್ಯಾರ್ಥಿಗಳಿಗೆ ಮಾಹಿತಿ–ಆಕರಗಳು ಬೆರಳ ತುದಿಯಲ್ಲಿ ಸಿಗಲಿವೆ.

ಈ ತರಗತಿಗಳ ತುಳು ಪಠ್ಯಗಳ 732 ಅಧ್ಯಾಯಗಳನ್ನು ವಿಕಿಪೀಡಿಯಾಕ್ಕೆ ಸೇರ್ಪಡೆ ಮಾಡುವ ‘ಸಂಪಾದನೋತ್ಸವ’ (edithon)ವನ್ನು ‘ಕರಾವಳಿ ವಿಕಿಮೀಡಿಯನ್ಸ್‌ ಯೂಸರ್ ಗ್ರೂಪ್ಸ್‌’ ಸದಸ್ಯರು ಈಗಾಗಲೇ ಮಾಡುತ್ತಿದ್ದು, 2020ರ ಶೈಕ್ಷಣಿಕ ವರ್ಷದ ಆರಂಭದಲ್ಲಿ (ಜೂನ್‌) ಸಂಪೂರ್ಣವಾಗಿ ಲಭ್ಯವಾಗಲಿದೆ.

‘ಇದು, ‘ವಿಕಿಪೀಡಿಯಾ ಇನ್ ಎಜ್ಯುಕೇಶನ್‌’ನ ಪ್ರಕ್ರಿಯೆ. ನಮ್ಮ ‘ಗ್ರೂಪ್ಸ್‌’ನ ಸುಮಾರು 10ರಿಂದ 20 ಸದಸ್ಯರು ನಿರಂತರವಾಗಿ ಸಂಪಾದನೆ (ಎಡಿಟ್) ಮಾಡುತ್ತಿದ್ದೇವೆ. ಇತರ ಕೆಲವರು ಆಗಾಗ್ಗೆ ಕೊಡುಗೆ ನೀಡುತ್ತಿದ್ದಾರೆ’ ಎಂದು ತುಳು ವಿಕಿಪೀಡಿಯಾ ಸಂಪಾದಕ ಪವನಜ ಯು.ಬಿ. ತಿಳಿಸಿದರು.

‘ತುಳುವಿನಲ್ಲಿ ಆಕರಗಳನ್ನು ನೀಡುವುದು ಕಷ್ಟಕರ ಕಾರ್ಯ. ಕೋರಿಕಟ್ಟ (ಕೋಳಿ ಅಂಕ), ಪೂವರಿ (ದೇವರಿಗೆ ಹಾಕುವ ಹೂವು–ಅಕ್ಕಿ), ಚೆಂಡೇಲ್ (ಎಳೆ ಎಳನೀರು) ಮತ್ತಿತರ ಶಬ್ದ, ಆಚರಣೆ, ಜನಪದ, ಕಲೆ, ಸ್ಥಳನಾಮಗಳನ್ನು ಅಧಿಕೃತಗೊಳಿಸಿ ಅಪ್‌ಲೋಡ್‌ ಮಾಡುವುದೇ ಸವಾಲಿನ ಕೆಲಸ’ ಎನ್ನುತ್ತಾರೆ ಗ್ರೂಪ್ಸ್‌ನ ಡಾ.ವಿಶ್ವನಾಥ ಬದಿಕಾನ ಮತ್ತು ಭರತೇಶ ಅಲಸಂಡೆ ಮಜಲು.

‘ಕರಾವಳಿಯ ಹಲವಾರು ಸ್ಥಳನಾಮಗಳನ್ನು ಕನ್ನಡದಲ್ಲಿ ವ್ಯಾಖ್ಯಾನಿಸುತ್ತಾರೆ. ಆದರೆ, ಬಹುತೇಕವು ತುಳು ಶಬ್ದಗಳಿಂದ ಹುಟ್ಟಿಕೊಂಡಿವೆ. ಅವುಗಳನ್ನು ಸ್ಪಷ್ಟಗೊಳಿಸುವ ಸಂಕೀರ್ಣ ಸ್ಥಿತಿಯೂ ಇದೆ’ ಎಂದು ಗ್ರೂಪ್ಸ್‌ನ ಡಾ. ಕಿಶೋರ್ ಕುಮಾರ್ ಶೇಣಿ ವಿವರಿಸಿದರು.

ವಿಶ್ವದ 304 ಭಾಷೆಗಳು ವಿಕಿಪೀಡಿಯಾದಲ್ಲಿವೆ. ಈ ಪೈಕಿ ಭಾರತದ 24 ಭಾಷೆಗಳಿದ್ದು, 23ನೇ ಭಾಷೆಯಾಗಿ ತುಳು ಸೇರ್ಪಡೆಗೊಂಡಿದೆ. ರಾಜ್ಯದಲ್ಲಿನ ಕನ್ನಡ, ಕೊಂಕಣಿ ಮತ್ತು ತುಳು ಇವೆ. ಕನ್ನಡ ವಿಕಿಪೀಡಿಯಾವು 2003ರ ಜೂನ್‌ನಲ್ಲಿ ಬಂದಿದ್ದು, ಸದ್ಯ ಸುಮಾರು 25 ಸಾವಿರಕ್ಕೂ ಹೆಚ್ಚು ಪುಟಗಳಿವೆ. ತುಳುವಿಗೆ ತಿಗಳಾರಿ ಲಿಪಿ ಇದ್ದರೂ, ಬಳಕೆ ಹಾಗೂ ತಂತ್ರಜ್ಞಾನದಲ್ಲಿ ಪ್ರಚಲಿತವಲ್ಲ. ಹೀಗಾಗಿ, ಕನ್ನಡದ ಲಿಪಿಯನ್ನೇ ಬಳಸಿಕೊಳ್ಳಲಾಗುತ್ತಿದೆ.

ತುಳು ವಿಕಿಪೀಡಿಯಾದಲ್ಲಿ (https://tcy.wikipedia.org) ಈ ತನಕ 1,224 ವಿಷಯಗಳ 1,510 ಬಳಕೆದಾರರ ಪುಟಗಳಿವೆ. ಒಟ್ಟಾರೆ 4,915 ಪುಟಗಳಿದ್ದು, 70,455 ಎಡಿಟ್‌ಗಳಾಗಿವೆ. 3,021 ನೋಂದಾಯಿತ ಸದಸ್ಯರಿದ್ದು, 34 ಮಂದಿ ಸಕ್ರಿಯರಿದ್ದಾರೆ. 3.29 ಲಕ್ಷಕ್ಕೂ ಹೆಚ್ಚು ತುಳು ಶಬ್ದಗಳು ಈಗಾಗಲೇ ಲಭ್ಯ ಇವೆ. ಇನ್ನಷ್ಟು ಚರ್ಚಾ ಹಂತದಲ್ಲಿವೆ.

‘ಸಮುದಾಯದಲ್ಲಿನ ಜಾಗೃತಿ ಪ್ರಜ್ಞೆಯನ್ನು ಆಧರಿಸಿಕೊಂಡು ವಿಕಿಪೀಡಿಯಾ ಅಭಿವೃದ್ಧಿ ಹೊಂದುತ್ತದೆ.ಒಡಿಯಾ ಭಾಷೆಯ ಪುಟಗಳ ಸಂಖ್ಯೆ ಕೆಲವೇ ವರ್ಷದಲ್ಲಿ 3 ಸಾವಿರದಿಂದ 8 ಸಾವಿರಕ್ಕೆ ಹೋಗಿದೆ. ವಾಟ್ಸ್ ಆ್ಯಪ್, ಫೇಸ್‌ ಬುಕ್ ಹಾಗೂ ಟ್ವೀಟರ್ ಬಳಕೆಯ ಬಳಿಕ ವಿಕಿಪೀಡಿಯಾದ ಬಳಕೆಯೂ ಹೆಚ್ಚಾಗಿದೆ’ ಎನ್ನುತ್ತಾರೆ ಪವನಜ.

ವಿನೋದಾ ಮಮತಾ ರೈ, ಬೆನೆಟ್ ಅಮ್ಮನ್, ಕವಿತಾ, ರವಿ ಮುಂಡ್ಕೂರು, ಆಶ್ರಯ ಬದಿಕಾನ, ಧನಲಕ್ಷ್ಮೀ, ಡಾ.ಬಬಿತಾ, ಲೋಕೇಶ್ ‍ಪುಂಚಡ್ಕ ಮತ್ತಿತರರು ಸಕ್ರಿಯ ತಂಡದಲ್ಲಿದ್ದಾರೆ. ನಿಮ್ಮ ಆಸಕ್ತಿಯ ಮಾಹಿತಿಯು ಆನ್‌ಲೈನ್‌ನಲ್ಲಿ ಲಭ್ಯವಾಗಬೇಕಾದರೆ, ವಿಕಿಪೀಡಿಯಾ ಪುಟಗಳಿಗೆ ನೀವೂ ಅಪ್‌ಲೋಡ್ ಮಾಡಬಹುದು.

ಆಫ್‌ಲೈನ್‌ನಲ್ಲೂ ತುಳು ಕಲಿಕೆ...

ತುಳು ಭಾಷಾ ಶಿಕ್ಷಕರಿಗೆಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ‘7 ಕಜ್ಜ –ಕೊಟ್ಯ’ (7 ಕಾರ್ಯಾಗಾರ) ನಡೆಯಲಿದೆ ಅನಂತರ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಆಕರಗಳನ್ನು ನೀಡಬಹುದು. ಗ್ರಾಮೀಣ ಶಾಲೆಗಳಲ್ಲಿ ಯುಎಸ್‌ಬಿ, ಕಂಪ್ಯೂಟರ್‌ ಬಳಸಿಕೊಂಡು ಆಫ್‌ಲೈನ್ (ಕಿವಿಕ್ಸ್‌ ಸಾಫ್ಟ್‌ವೇರ್‌) ಮೂಲಕ ಬಳಕೆ ಮಾಡಬಹುದು. ವಿಶ್ವಕೋಶದ ಮಾದರಿಯಲ್ಲಿ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT