ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ತಿರುವೈಲು ಬೈಲಿನಲ್ಲಿ ತುಳು ಪಾರಂಪರಿಕ ಲೋಕ

ಕಾದ ಕಬ್ಬಿಣ ಬಡಿಯುವ ಸದ್ದಿನ ಲಯಕ್ಕೆ, ಮಡಿಕೆ ತಯಾರಿಸುವ ಪರಿಗೆ ಮಾರು ಹೋದ ಪ್ರೇಕ್ಷಕರು
Published 12 ಮೇ 2024, 3:36 IST
Last Updated 12 ಮೇ 2024, 3:36 IST
ಅಕ್ಷರ ಗಾತ್ರ

ಮಂಗಳೂರು: ವಾಮಂಜೂರು ಬಳಿಯ ತಿರುವೈಲು ಬೈಲಿನಲ್ಲಿ ಕಾಂತಾರಗೋಳಿಯ ದಾಮೋದರ ಆಚಾರ್‌ ತಿದಿಯ ಕೆಂಡದಲ್ಲಿ ಅದ್ದಿ ತೆಗೆದ ಕಬ್ಬಿಣವನ್ನು ಬಡಿದು ಕತ್ತಿ ನಿರ್ಮಿಸುತ್ತಿದ್ದರೆ, ಕಾರ್ಕಳ ನಕ್ರೆಯ ನಾರಾಯಣ ಮೂಲ್ಯ ಕುಟುಂಬ ಆವೆಮಣ್ಣಿನಿಂದ ಮಡಿಕೆ ತಯಾರಿಸುತ್ತಿತ್ತು. ಕಡ್ತಲದ ಜಗ್ಗು ಪರವರ ಕುಟುಂಬ ಬಳ್ಳಿಯಿಂದ ಕೂರಿ ಕಟ್ಟುತ್ತಿದ್ದರೆ,  ಅದೇ ಊರಿನ ಬಾಬು ಕೊರಗ ಅವರು ಬುಟ್ಟಿ ಹೆಣೆಯುತ್ತಿದ್ದರು. ಎಣ್ಣೆಹೊಳೆಯ ಕೊರಗ ಪಾಣಾರ ಅವರ ಕೈಯಲ್ಲಿ ಮುಟ್ಟಾಳೆ ಅರೆ ಗಳಿಗೆಯಲ್ಲಿ ತಯಾರಾಯಿತು...

ದಶಕಗಳ ಹಿಂದೆ ತುಳುನಾಡಿನ ಹಳ್ಳಿ ಹಳ್ಳಿಯಲ್ಲೂ ಕಾಣ ಸಿಗುತ್ತಿದ್ದ ಈ ದೃಶ್ಯಗಳನ್ನು ಮತ್ತೆ ಕಣ್ತುಂಬಿಕೊಳ್ಳುವುದಕ್ಕೆ ವಾಮಂಜೂರಿನ ಶ್ರೀಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾದ ಕೃಷಿ ಮೇಳ ಅವಕಾಶ ಕಲ್ಪಿಸಿತು. ಮೂರು ದಿನಗಳ ಕಾಲ ನಡೆಯುವ ಈ ಕೃಷಿ ಮೇಳವು ತುಳುವರ ಬೇಸಾಯದ ಬದುಕಿನ ಜೊತೆ ಬೆಸೆದುಕೊಂಡ ಹತ್ತು ಹಲವು ಪರಂಪರೆಗಳನ್ನು ಈಗಿನ ತಲೆಮಾರಿನವರಿಗೂ ಪರಿಚಯಿಸುವ ಕೆಲಸ ಮಾಡುತ್ತಿದೆ.

ದಾಮೋದರ ಆಚಾರ್‌ ಅವರು ತಿದಿಯ ಗಾಳಿ ಸೋಕಿ ಕಾದ ಕೆಂಡದ ನಡುವೆ ಕೆಂಪಾದ ಕಬ್ಬಿಣವನ್ನು ಅಡಿಗಲ್ಲಿನ ಮೇಲಿಟ್ಟು ಚಂಬೊಡಿಯಿಂದ (ದೊಡ್ಡ ಸುತ್ತಿಗೆ) ಬಡಿಯುವಾಗ ಕೇಳಿಸುವ ಸದ್ದಿನ ಲಯಕ್ಕೆ, ನಾರಾಯಣ ಮೂಲ ಅವರ ಪತ್ನಿ ಸುಂದರಿ ಅವರು ಮುದ್ದೆ ಮಣ್ಣನ್ನು ಮೆತ್ತಿದ ಚಕ್ರವನ್ನು ಗಿರಿಗಿರನೇ ತಿರುಗಿಸಿ ಕರ (ಮಡಿಕೆ) ತಯಾರಿಸಿದ ಪರಿಗೆ ಜನ ಬೆಕ್ಕಸಬೆರಗಾದರು.

ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪಶ್ಚಿಮಘಟ್ಟದ ಮಲೆಗಳಲ್ಲಿ ಅಲೆದು ವಾಟೆ ಬಿದಿರು ತರುವ ಕಷ್ಟವನ್ನೂ  ಜಗ್ಗು ಅವರು ವಿವರಿಸುತ್ತಿದ್ದರೆ ಈಗಿನ ತಲೆಮಾರಿನವರು ಮೈಯೆಲ್ಲ ಕಿವಿಯಾಗಿಸಿ ಕೇಳಿದರು. ತಡಪೆ (ಗೆರಸ), ಬುಟ್ಟಿ ತಯಾರಿಸಲು ಬಳಸುವ ಕುಸುಮ ಬಳ್ಳಿಯನ್ನು ಹುಡುಕಲು ಕಾಡಿನಲ್ಲಿ ಅಂಡಲೆಯುವ ಪರಿಯನ್ನು ಬಾಬು ಕೊರಗ ವಿವರಿಸುವಾಗ, ಕೃಷಿ ಪರಿಕರಗಳು ರೂಪುಗೊಳ್ಳುವ ಹಿಂದಿನ ರೋಚಕ ಅನುಭವವನ್ನು ದಕ್ಕಿಸಿಕೊಂಡ ಖುಷಿ ಕೇಳುಗರದಾಗಿತ್ತು.

‘ಕರಾವಳಿಯುದ್ದಕ್ಕೂ ಕೃಷಿಯು ಅವನತಿಯ ಹಾದಿ ಹಿಡಿದಿದ್ದರೂ, ಕೃಷಿ ಆಧರಿಸಿದ ಕುಲಕಸುಬುಗಳಿಗೆ ಬೇಡಿಕೆ ಕುಸಿದಿಲ್ಲ. ‘ಸುಲಭ’ದ ಉದ್ಯೋಗಕ್ಕಾಗಿ  ಊರು ತೊರೆದವರಿಗೂ ಉಣ್ಣಲು ಅನ್ನವೇ ಬೇಕು. ಹಾಗಾಗಿ ಈಗಲೂ ನಾನು ತಯಾರಿಸುವ ಕತ್ತಿಗೆ ಈಗಲೂ ಬೇಡಿಕೆ ಇದೆ. 30– 40 ಕಿ.ಮೀ ದೂರದಿಂದ  ಬಂದು ತಾಸುಗಟ್ಟಲೆ ಕಾದು ಕತ್ತಿ ಮಾಡಿಸಿ ಒಯ್ಯುವವರಿದ್ದಾರೆ. ಗುಣಮಟ್ಟವನ್ನು ಉಳಿಸಿಕೊಂಡರೆ ಕುಲಕಸುಬು ಕೈಬಿಡದು’ ಎನ್ನುತ್ತಾರೆ ದಾಮೋದರ ಆಚಾರ್ಯ.

‘ಒಂದೊಂದು ಬುಟ್ಟಿಯೂ ₹ 400ರಿಂದ ₹ 600ಕ್ಕೆ ಮಾರಾವಾಗುತ್ತಿದೆ.  ದಿನಕ್ಕೆ ಎರಡರಿಂದ ನಾಲ್ಕು ಬುಟ್ಟಿ ಹೆಣೆಯವುದು ಕಷ್ಟವಲ್ಲ. ಆದರೆ ಅದಕ್ಕೆ ‌ಬೇಕಾದ ಕುಸುಮ ಬಳ್ಳಿ ಹುಡುಕಿ ತರುವುದೇ ಸವಾಲು. ಗಟ್ಟಿಮುಟ್ಟಾದ ಈ ಬುಟ್ಟಿಯನ್ನು ಚೆನ್ನಾಗಿ ಇಟ್ಟುಕೊಂಡರೆ 20–30 ವರ್ಷಗಳವರೆಗೂ ಬಾಳಿಕೆ ಬರಬಲ್ಲುದು’ ಎನ್ನುತ್ತಾರೆ ಬಾಬು ಕೊರಗ.

‘ದಿನಕ್ಕೆ ಎರಡಕ್ಕೂ ಹೆಚ್ಚು ಗೂರಿ ತಯಾರಿಸಬಲ್ಲೆ. ಒಂದೊಂದು ಗೂರಿಯೂ ₹ 400ರಿಂದ ₹ 500 ದರ ಇದೆ. ಮಳೆಗಾಲ ಶುರುವಾಗುವಾಗ ಈಗಲೂ ಹಳ್ಳಿಗಳಲ್ಲಿ ಗೂರಿ ಬಳಸುತ್ತಾರೆ’ ಎಂದು ಜಗ್ಗು ಪರವ ತಿಳಿಸಿದರು.

ಜಗ್ಗು ಪರವ, ಕೊರಗ ಪಾಣಾರ ಕುಟುಂಬದವರು ಬೇಸಿಗೆಯಲ್ಲಿ ಕೋಲ ಕಟ್ಟುತ್ತಾರೆ. ಬಿಡುವಿನ ವೇಳೆ ಇಂತಹ ಬುಟ್ಟಿ ಹೆಣೆಯುವ, ಮುಟ್ಟಾಳೆ ತಯಾರಿಸುವಂತಹ ಕಾಯಕದಲ್ಲಿ ತೊಡಗುತ್ತಾರೆ.

ತುಳುನಾಡಿನಲ್ಲಿ ಬಳಕೆಯಲ್ಲಿದ್ದ ಹಳೆಯ ಪರಿಕರಗಳ ಪ್ರದರ್ಶನವನ್ನು ಯುವತಿಯರು ಶನಿವಾರ ವೀಕ್ಷಿಸಿದರು– ಪ್ರಜಾವಾಣಿ ಚಿತ್ರ 
ತುಳುನಾಡಿನಲ್ಲಿ ಬಳಕೆಯಲ್ಲಿದ್ದ ಹಳೆಯ ಪರಿಕರಗಳ ಪ್ರದರ್ಶನವನ್ನು ಯುವತಿಯರು ಶನಿವಾರ ವೀಕ್ಷಿಸಿದರು– ಪ್ರಜಾವಾಣಿ ಚಿತ್ರ 
ಕೃಷಿ ಮೇಳದಲ್ಲಿ ಕಮ್ಮಾರಿಕೆಯಲ್ಲಿ ನಿರತವಾಗಿರುವ ದಾಮೋದರ ಆಚಾರ್ಯ– ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್
ಕೃಷಿ ಮೇಳದಲ್ಲಿ ಕಮ್ಮಾರಿಕೆಯಲ್ಲಿ ನಿರತವಾಗಿರುವ ದಾಮೋದರ ಆಚಾರ್ಯ– ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್

ಗತ ಬದುಕನ್ನು ನೆನಪಿಸಿದ ವಸ್ತುಪ್ರದರ್ಶನ

ತುಳು ನಾಡಿನ ಮನೆ ಮನೆಗಳಲ್ಲಿ ಬಳಸುತ್ತಿದ್ದ ಚಿಮಣಿಯಿಂದ ಹಿಡಿದು ಮಕ್ಕಳನ್ನು ಮಲಗಿಸುವ ಬುಟ್ಟಿಯ ತೊಟ್ಟಿಲಿನವರೆಗೆ ಏತದಲ್ಲಿ ನೀರೆತ್ತುವ ಮರಾಯಿಯಿಂದ ಹಿಡಿದು ಬೆಲ್ಲ ತಯಾರಿಸಲು ಬಳಸುವ ಮರದ ಅಚ್ಚಿನವರೆಗೆ...  ತುಳುವರ ಗತ ಜೀವನ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ನೆರವಾಗುವ ನೂರಾರು ಪರಿಕರಗಳು ಕೃಷಿ ಮೇಳದಲ್ಲಿವೆ. ಕಾರ್ಕಳ ತಾಲ್ಲೂಕಿನ ಹಿರ್ಗಾನ ನೆಲ್ಲಿಕಟ್ಟೆಯ ‘ಶ್ರೀದತ್ತ ತುಳುಜಾನಪದ ಇತಿಹಾಸ ಅಧ್ಯಯನ ಕೇಂದ್ರ’ದ ಸುಧಾಕರ ಶೆಟ್ಟಿ ಈ ಪರಿಕರಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಮರದಿಂದ ತಯಾರಿಸಿದ ನಾನಾ ತರಹದ ಮರಾಯಿ ಶಾವಿಗೆ ಒತ್ತುಮಣೆ ಕಲೆಂಬಿ ಮನೆಯಲ್ಲಿ ಅಡುಗೆ ಸಾಹಿತ್ಯ ಶೇಖರಿಸಲು ಬಳಸುವ ಮರದ ತರಹೇವಾರಿ ಪೆಟ್ಟಿಗೆಗಳು ತಾಮ್ರ ಮತ್ತು ಹಿತ್ತಾಳೆಯಿಂದ ತಯಾರಿಸಿದ ಬಗೆ ಬಗೆಯ ಪಾತ್ರೆಗಳು ನೀರು ಕಾಯಿಸುವ ಹಂಡೆ ತಾಮ್ರದ ಕೊಡಪಾನ ಇಡ್ಲಿ ಬೇಯಿಸುವ ತೊಂದ್ರು ನೀರು ಒಯ್ಯುವ ಆಮೆ ಆಕೃತಿಯ ಮಣ್ಣಿನ ಪೆಟ್ಟಿಗೆ ಅಡಿಕೆ ಹುಡಿಮಾಡಲು ಬಳಸುವ ಅಡಕತ್ತರಿ ಪೀಕದಾನಿ ಆಕರ್ಷಕ ಶೈಲಿಯ ಸುಣ್ಣದ ಡಬ್ಬಿ ಬಾಣಂತಿ ಬಳಸುವ ಗೆಜ್ಜೆಕತ್ತಿ ತೋರಣ ಪಟ್ಟಿ ಹಲವಿಧದ ಗಿಂಡೆಗಳು (ಚೊಂಬು) ತಪಲೆ ಬಟ್ಟಲು ಲಾಟೀನು ಗ್ಯಾಸ್‌ಲೈಟ್‌ ಅಳತೆಗೆ ಬಲಸುವ ಸೇರು ಪಾವು ಅರೆಪಾವು ಮಣಕಲ್ಲು ತೊಲ ಪೌಂಡ್‌ ರಂಕ ಕತ್ತಿ ಪರ್ಕತ್ತಿ ಕಳ್ಳು ಹೆಚ್ಚಲು ಬಳಸುವ ಕತ್ತಿ ಮುಡಿಯಿಂದ ಅಕ್ಕಿ ತೆಗೆಯಲು ಬಳಸುವ ಅರ್ನಲಿ ಮಕ್ಕಳನ್ನು ಮಲಗಿಸುವ ತಕ್ಕಣ ಚಾಪೆಗಳೆಲ್ಲವೂ ತುಳುವರು ಬಾಳಿ ಬದುಕಿದ ಬಗೆಯನ್ನು ಬಣ್ಣಿಸುತ್ತಿವೆ.

ದುಡಿ ರಣಕಹಳೆ ನಾಗಸ್ವರ ಕೊಂಬು ವಾಲಗ ವೀಣೆ ತಾಸೆ ನಗಾರಿ ಗುಮಟೆ ಮದ್ದಲೆ ಮೊದಲಾದ ತುಳುನಾಡಿನ ವಾದ್ಯಗಳ ಲೋಕವೂ ಇಲ್ಲಿ ಅನಾವರಣಗೊಂಡಿದೆ. ಫಿರಂಗಿ ಗುಂಡು ರಾಜರ ಕಾಲದಲ್ಲಿ ಬಳಸುತ್ತಿದ್ದ ಖಡ್ಗಗಳು ಈಟಿ ಭರ್ಜಿ ಕದಂಬರ ಕಾಲದಿಂದ ಹಿಡಿದು ಉಳ್ಳಾಲದ ರಾಣಿ ಅಬ್ಬಕ್ಕನವರೆಗೆ ತುಳುನಾಡಿನಲ್ಲಿ ವಿವಿಧ ರಾಜರ ಆಳ್ವಿಕೆ ಕಾಲದಲ್ಲಿ ಬಳಕೆಯಲ್ಲಿದ್ದ ನೂರಾರು ನಾಣ್ಯಗಳು ತಾಮ್ರ ಲಿಪಿಗಳು ತಾಳೆಗರಿ ಗ್ರಂಥಗಳು ದೈವಾರಾಧನೆಯಲ್ಲಿ ಬಳಕೆಯಾಗುವ ಖಡ್ಸಲೆ ಮೊಗ (ಮುಖವಾಡ) ತಲೆ ಪಟ್ಟಿ ಪಾಪೆ (ಗೊಂಬೆ)  ಆಭರಣಗಳು ಪ್ರದರ್ಶನದಲ್ಲಿದ್ದು ಈ ನಾಡಿನ ಚರಿತ್ರೆಯ ಕತೆಗಳನ್ನು ಹೇಳುತ್ತಿವೆ.

ದೇವತಾ ಆರಾಧನೆಯ ಪರಿಕರಗಳು ತಾಳೆಗರಿಯ ತತ್ರ (ಕೊಡೆ)ಗಳ ಇಲ್ಲಿ ಗತವೈಭವವನ್ನು ಸಾರುತ್ತಿವೆ. ಕಂಬಳದ ಕೋಣಗಳ ಅಲಂಕಾರಕ್ಕೆ ಬಳಸುವ ಹಣೆಪಟ್ಟಿ ಬಗೆ ಬಗೆಯ ಬಾರುಕೋಲುಗಳಲ್ಲಿ ವೈವಿಧ್ಯ ಇಲ್ಲಿ ಜಾನಪದ ಕ್ರೀಡೆಗಳನ್ನು ಜನ ಎಷ್ಟು ಇಷ್ಟಪಡುತ್ತಿದ್ದರು ಎಂಬುದನ್ನು ತೋರಿಸುತ್ತಿವೆ. ಈ ಪರಿಕರಗಳ ಜತನವಾಗಿ ಕಾಪಾಡಿಕೊಂಡು ಬಂದಿರುವ ಸುಧಾಕರ ಶೆಟ್ಟಿ ಹಾಗೂ ಆಶಿತಾ ಎಸ್‌.ಕಡಂಬ ಅವರು ಅಷ್ಟೇ ಆಸ್ಥೆಯಿಂದ ಇವುಗಳ  ಮಹತ್ವವನ್ನು ಆಸಕ್ತರಿಗೆ ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT