ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಸಂಘಟನೆಯನ್ನು ಬೆಂಬಲಿಸುವ ವಿಡಿಯೊ ಉಳ್ಳಾಲದಿಂದ ಅಪ್‌ಲೋಡ್‌!

Last Updated 6 ಆಗಸ್ಟ್ 2021, 3:27 IST
ಅಕ್ಷರ ಗಾತ್ರ

ಉಳ್ಳಾಲ: ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಅಮ್ಮರ್ ಅಬ್ದುಲ್ ರಹಿಮಾನ್ ಇನ್‌ಸ್ಟಾಗ್ರಾಂಚಾನೆಲ್ ಮೂಲಕ ಉಗ್ರ ಸಂಘಟನೆಯನ್ನು ಪ್ರಚೋದಿಸುವ ವಿಡಿಯೊ ಅಪ್‌ಲೋಡ್ ಮಾಡುತ್ತಿದ್ದ. ಅದರಲ್ಲಿ 5,000 ಫಾಲೋವರ್ಸ್ ಅನ್ನು ಹೊಂದಿದ್ದನೆಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ತನಿಖಾ ದಳದಿಂದ ಕಣ್ಣೂರು ನಿವಾಸಿ ಮುಷಾಬ್ ಅನುವರ್ ಮತ್ತು ಕೊಲ್ಲಂನ ಡಾ.ರಾಹೀಸ್ ರಶೀದ್ ಎಂಬುವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಐಎಸ್‌ ಮುಖ್ಯಸ್ಥ ನಾಗಿದ್ದ ಮೊಹಮ್ಮದ್ ಅಮೀನ್ ಅಲಿಯಾಸ್ ಯಹ್ಯಾ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ಇಬ್ಬರ ಬಂಧನವಾಗಿತ್ತು. ಇಬ್ಬರ ಬಂಧನದ ಬಳಿಕ ವಿಚಾರಣೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್, ಇನ್‌ಸ್ಟಾಗ್ರಾಂ, ಹೋಪ್ ಮುಖೇನ ಐಎಸ್‌ ಸಂಘಟನೆಗೆ ಫಂಡ್ ರೈಸಿಂಗ್ ಪ್ರಕ್ರಿಯೆ, ಯುವಕರಿಗೆ ಸಂಘಟನೆ ಪರ ಒಲವು ಹಾಗೂ ಬಲಪಂಥೀಯರನ್ನು ಹತ್ಯೆಗೈಯ್ಯುವ ಅಂಶ ಒಳಗೊಂಡಿತ್ತು.

ಆರು ವರ್ಷಗಳಿಂದ ನಿಗಾ

2016-17ರಲ್ಲಿ ಕೇರಳದಿಂದ ನಾಪತ್ತೆಯಾಗಿದ್ದ 15 ಮಂದಿಯ ಪೈಕಿ ಮಾಜಿ ಶಾಸಕ ದಿ.ಇದಿನಬ್ಬ ಅವರ ಮರಿಮೊಮ್ಮಗಳು ಅಜ್ಮಲಾ ಪ್ರಕರಣ ಬಳಿಕ ಆಕೆಯ ಕುಟುಂಬದ ಮೇಲೆ ಎನ್‌ಐಎ ನಿಗಾ ಇರಿಸಿತ್ತು. ಅದರಂತೆ ಉಳ್ಳಾಲದ ಮನೆಯೊಂದರಿಂದ ಐಎಸ್‌ ಸಂಘಟನೆಗೆ ಸಂಬಂಧಿಸಿದ ವಿಡಿಯೊಗಳ ವೀಕ್ಷಣೆ ಹಾಗೂ ಅಪ್‌ಲೋಡ್‌ ಆಗುತ್ತಿರುವ ಅಂಶ ಬೆಳಕಿಗೆ ಬಂದಿತ್ತು. ಅದರ ಆಧಾರದಡಿ ಎನ್‌ಐಎ ಉಳ್ಳಾಲದ ಮನೆಗೆ ದಾಳಿ ನಡೆಸಿ ಸಾಕ್ಷ್ಯಗಳನ್ನು ಪಡೆದು ಅಮ್ಮರ್‌ನನ್ನು ವಶಕ್ಕೆ ಪಡೆದಿದೆ.

ಮಹಿಳಾ ಸದಸ್ಯೆ ಮೇಲೆ ಕಣ್ಣು

ಆರು ವರ್ಷಗಳ ಹಿಂದೆ ಸಿರಿಯಾ ತೆರಳಿದ್ದ ಅಜ್ಮಲಾ ಜೊತೆಗೆ ಇದೇ ಮನೆಯ ಮಹಿಳಾ ಸದಸ್ಯೆಯೊಬ್ಬರು ಸಂಪರ್ಕ ಇರಿಸಿದ್ದರು. ಈ ಕುರಿತು ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿಯೂ ಲಭ್ಯವಾಗಿತ್ತು. ಅಲ್ಲದೆ, ಆಕೆ ಒಂದು ಬಾರಿ ಸಿರಿಯಾ ದೇಶಕ್ಕೆ ತೆರಳಿರುವ ಕುರಿತು ಮಾಹಿತಿ ಇತ್ತು. ಇದಕ್ಕೆ ಪೂರಕವಾಗಿ ಕುಟುಂಬದ ಮೇಲೆ ನಿಗಾ ವಹಿಸಿದ್ದ ಎನ್‍ಐಎ ಉಳ್ಳಾಲ ಭಾಗದಿಂದ ಐಎಸ್‌ ಸಂಘಟನೆಗೆ ಪೂರಕವಾದ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸದಸ್ಯೆಯೇ ಸಕ್ರಿಯವಾಗಿದ್ದರು ಅನ್ನುವ ಮಾಹಿತಿಯಿಂದ ದಾಳಿ ನಡೆಸಿತ್ತು.

ಬುಧವಾರದ ದಾಳಿಯ ಸಂದರ್ಭ ಮಹಿಳಾ ಸದಸ್ಯೆ ಬಗ್ಗೆ ಸಾಕ್ಷ್ಯಾಧಾರಗಳು ದೊರೆಯದ ಹಿನ್ನೆಲೆಯಲ್ಲಿ ಎನ್‍ಐಎ ಆಕೆಯನ್ನು ಸದ್ಯಕ್ಕೆ ಬಿಟ್ಟು, ಒಬ್ಬನನ್ನೇ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಮಹಿಳಾ ಸದಸ್ಯೆಗೆ ಮೂರು ತಿಂಗಳ ಮಗು ಇರುವುದರಿಂದ ಕೋವಿಡ್ ನಿಯಮಗಳಾನುಸಾರವಾಗಿ ವಶಕ್ಕೆ ಪಡೆದಿಲ್ಲ ಎನ್ನುವುದೂ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT