ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡರ್‌ ಆರ್ಮ್‌ ಕ್ರಿಕೆಟ್‌ ಬೆಂಗಳೂರಿಗೆ?

ಮಾರ್ಚ್‌ನಲ್ಲಿ ಪಂದ್ಯಗಳ ಆಯೋಜನೆ ಸಾಧ್ಯತೆ; ಹೊನಲು ಬೆಳಕಿನಲ್ಲಿ ನಡೆಯಲಿರುವ ಲೀಗ್
Published 26 ಜನವರಿ 2024, 6:45 IST
Last Updated 26 ಜನವರಿ 2024, 6:45 IST
ಅಕ್ಷರ ಗಾತ್ರ

ಮಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಕಂಬಳ ‘ಉತ್ಸವ’ವಾಗಿ ಯಶಸ್ವಿಯಾದ ಬೆನ್ನಲ್ಲೇ ಟೆನಿಸ್ ಬಾಲ್‌ ಅಂಡರ್ ಆರ್ಮ್ ಕ್ರಿಕೆಟ್‌ ಆಟವನ್ನು ಬೆಂಗಳೂರಿಗರಿಗೆ ಪರಿಚಯಿಸಲು ವೇದಿಕೆ ಸಿದ್ಧವಾಗಿದೆ.

ಕ್ರಿಕೆಟ್ ಆಟಗಾರ, ಕೆಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಮಂಗಳೂರು ಯುನೈಟೆಡ್ ತಂಡದ ಸಹಮಾಲೀಕ ಮೊಹಿಯುದ್ದೀನ್ ಬಾವಾ ಅವರು ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿಯನ್ನು ಜಿಲ್ಲೆಯಿಂದ ಹೊರಗೆ ಆಯೋಜಿಸಲು ಮುಂದಾಗಿದ್ದು ಮಾರ್ಚ್‌ ತಿಂಗಳಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದೆ.

‘ಬೆಂಗಳೂರಿನ ಕ್ರಿಕೆಟ್ ಕ್ಲಬ್‌ಗಳ ಮೈದಾನಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಈ ಪ್ರಕ್ರಿಯೆ ಅಂತಿಮಗೊಂಡ ಕೂಡಲೇ ಟೂರ್ನಿಯ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಮೊಹಿಯುದ್ದೀನ್ ಬಾವಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಮಂಗಳೂರು ಮತ್ತು ಉಡುಪಿ ಭಾಗದ ಸುಮಾರು 50 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇವುಗಳನ್ನು 2 ಗುಂಪುಗಳಾಗಿ ವಿಂಗಡಿಸಿ ಒಟ್ಟು 5ರಿಂದ 6 ದಿನಗಳ ಟೂರ್ನಿಯನ್ನು ಆಯೋಜಿಸುವ ಉದ್ದೇಶವಿದೆ’ ಎಂದು ಅವರು ವಿವರಿಸಿದರು.

ದಕ್ಷಿಣ ಕನ್ನಡ, ಉಡುಪಿಯ ಕೆಲವು ಭಾಗ ಮತ್ತು ಕಾಸರಗೋಡು ಭಾಗದಲ್ಲಿ ಟೆನಿಸ್ ಬಾಲ್ ಅಂಡರ್ ಆರ್ಮ್ ಕ್ರಿಕೆಟ್‌ ಹಿಂದಿನಿಂದಲೇ ಪ್ರಚಲಿತದಲ್ಲಿದೆ. ಐಪಿಎಲ್‌, ಕೆಪಿಎಲ್ ಮುಂತಾದ ಲೀಗ್‌ಗಳು ಆರಂಭಗೊಂಡ ನಂತರ ಈ ಭಾಗದಲ್ಲೂ ಲೀಗ್‌ಗಳನ್ನು ಆಯೋಜಿಸುವ ಸಂಸ್ಕೃತಿ ಬೆಳೆಯಿತು. ಈಚೆಗೆ ಪ್ರತಿ ವಾರಾಂತ್ಯದಲ್ಲಿ ಕೆಲವು ಮೈದಾನಗಳಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ರಂಗೇರುತ್ತದೆ. ಹೊನಲು ಬೆಳಕಿನಲ್ಲಿ ಲಕ್ಷಗಟ್ಟಲೆ ಬಹುಮಾನ ಮೊತ್ತದ ಟೂರ್ನಿಗಳು ನಡೆಯುತ್ತಿವೆ.

ಟೆನಿಸ್ ಬಾಲ್ ಅಂಡರ್ ಆರ್ಮ್‌ ಟೂರ್ನಿಯ ಮಾಹಿತಿಗೆಂದೇ ವೆಬ್‌ಸೈಟ್‌ ಕಾರ್ಯಾಚರಿಸುತ್ತಿದೆ. ಕೆಲವು ತಂಡಗಳು ಆಟಗಾರರನ್ನು ಸಾವಿರಾರು ರೂಪಾಯಿ ವೇತನ ನೀಡಿ ತಮ್ಮಲ್ಲೇ ಇರಿಸಿಕೊಂಡಿವೆ. ಕೆಎಫ್‌ಸಿ ಕೃಷ್ಣಾಪುರ, ಗೋರಿ ಇಲೆವೆನ್‌, ಕೋಡಿಕಲ್ ಫ್ರೆಂಡ್ಸ್‌, ಸುರತ್ಕಲ್ ಫ್ರೆಂಡ್ಸ್ ಸರ್ಕಲ್‌, ಎನ್‌.ಎಂ.ಜೆಪ್ಪು, ಪ್ಯಾರಡೈಸ್ ಕೃಷ್ನಾಪುರ ಮುಂತಾದ ಅನೇಕ ತಂಡಗಳು ಹೆಸರು ಮಾಡಿವೆ.

ಹೊನಲು ಬೆಳಕಿನ ಟೂರ್ನಿ

ಬೆಂಗಳೂರಿನಲ್ಲೂ ಹೊನಲು ಬೆಳಕಿನಲ್ಲಿ ಟೂರ್ನಿ ಆಯೋಜಿಸುವ ಉದ್ದೇಶ ಇದೆ. ಮಂಗಳೂರು ಭಾಗಕ್ಕಷ್ಟೇ ಸೀಮಿತವಾಗಿರುವ ಕ್ರಿಕೆಟ್‌ನ ಈ ಮಾದರಿಯನ್ನು ರಾಜಧಾನಿ ಹಾಗೂ ರಾಜ್ಯದ ಇತರ ಭಾಗಗಳಿಗೆ ಪರಿಚಯಿಸುವ ಸಂದರ್ಭದಲ್ಲಿ ಟೂರ್ನಿಯನ್ನು ವಿಜೃಂಭಣೆಯಿಂದ ಆಯೋಜಿಸಬೇಕಾಗುತ್ತದೆ ಎಂದು ಮೊಹಿಯುದ್ದೀನ್ ಬಾವಾ ತಿಳಿಸಿದರು.

ಮೊಹಿಯುದ್ದೀನ್ ಬಾವ
ಮೊಹಿಯುದ್ದೀನ್ ಬಾವ
ಟೆನಿಸ್ ಬಾಲ್ ಅಂಡರ್ ಆರ್ಮ್ ಕ್ರಿಕೆಟ್‌ನ ರೋಮಾಂಚನವನ್ನು ಸವಿದವನೇ ಬಲ್ಲ. ನೆಲ ಮಟ್ಟದಲ್ಲಿ ನುಗ್ಗಿ ಬರುವ ಚೆಂಡನ್ನು ಸಿಕ್ಸರ್‌ಗೆ ಎತ್ತುವ ಸಾಹಸಿಗಳು ಈ ಕ್ರಿಕೆಟ್‌ನಲ್ಲಿ ಕಾಣಸಿಗುತ್ತಾರೆ. ಕರಾವಳಿಯ ಈ ಮಾದರಿಯನ್ನು ಬೆಂಗಳೂರಿಗರಿಗೂ ಪರಿಚಯಿಸುವುದು ನನ್ನ ಉದ್ದೇಶ.
ಮೊಹಿಯುದ್ದೀನ್ ಬಾವಾ ಕ್ರಿಕೆಟ್ ಪೋಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT