ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಮುಷ್ಕರ: ರೂ.100 ಕೋಟಿಗೂ ಅಧಿಕ ವಹಿವಾಟು ಸ್ಥಗಿತ

Last Updated 23 ಆಗಸ್ಟ್ 2012, 8:00 IST
ಅಕ್ಷರ ಗಾತ್ರ

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಕರೆಯ ಮೇರೆಗೆ ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರವನ್ನು ಬುಧವಾರ ಆರಂಭಿಸಲಾಯಿತು.

ಮುಷ್ಕರದಲ್ಲಿ ಯುಎಫ್‌ಬಿಯುಗೆ ಸೇರಿದ 9 ಸಂಘಟನೆಗಳ ನೌಕರರು ಮತ್ತು ಅಧಿಕಾರಿಗಳು ಪಾಲ್ಗೊಂಡ್ದ್ದಿದರು. ಮುಷ್ಕರದಿಂದಾಗಿ 27 ರಾಷ್ಟ್ರೀಕೃತ ಬ್ಯಾಂಕ್‌ಗಳು, 12 ಖಾಸಗಿ ಬ್ಯಾಂಕ್‌ಗಳು ಹಾಗೂ 9 ವಿದೇಶಿ ಬ್ಯಾಂಕ್‌ಗಳ ವ್ಯವಹಾರ ಸ್ಥಗಿತಗೊಂಡಿತ್ತು. ನಗರವೊಂದರಲ್ಲಿಯೇ, ಬುಧವಾರ ್ಙ 100 ಕೋಟಿಗೂ ಅಧಿಕ ವಹಿವಾಟು ಸ್ಥಗಿತವಾಯಿತು. ಕೆಲ ಬ್ಯಾಂಕ್‌ಗಳಷ್ಟೇ ಕಾರ್ಯ ನಿರ್ವಹಿಸಿದವು. ಬಹುತೇಕ ಬ್ಯಾಂಕ್‌ಗಳು ಮುಷ್ಕರ ಬೆಂಬಲಿಸಿದ್ದರಿಂದ, ಗ್ರಾಹಕರು ಪರದಾಡಬೇಕಾಯಿತು. ಸೇವೆ ದೊರೆಯದೇ ಇರುವುದರಿಂದ ಬರಿಗೈಲಿ ವಾಪಸಾಗಬೇಕಾಯಿತು.

ಜಿಲ್ಲಾ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನಗರದ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಮುಂಭಾಗದಲ್ಲಿ ಸೇರಿದ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ತಮ್ಮ ಆರು ಪ್ರಮುಖ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರ ಒತ್ತಾಯಿಸಿದರು. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗಿ ಮತ ಪ್ರದರ್ಶನ ನಡೆಸಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ಕಾಂ.ಕೆ. ರಾಘವೇಂದ್ರ ನಾಯರಿ ಮಾತನಾಡಿ, ಜುಲೈನಲ್ಲಿ ನಡೆಯಬೇಕಿದ್ದ ಎರಡು ದಿನಗಳ ಮುಷ್ಕರ ಕೇಂದ್ರ ಕಾರ್ಮಿಕ ಆಯುಕ್ತರ ಮಧ್ಯಪ್ರವೇಶದಿಂದಾಗಿ ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಸರ್ಕಾರ ಮತ್ತು ಐಬಿಎ ನಿರ್ಲಕ್ಷ್ಯ ಧೋರಣೆಯಿಂದ ಬ್ಯಾಂಕ್ ಕಾರ್ಮಿಕರ ಯಾವುದೇ ಬೇಡಿಕೆ ಈಡೇರಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯವಾಗಿದ್ದು, ಇದರ ಹೊಣೆ ಸರ್ಕಾರವೇ ಹೊರಬೇಕಾಗಿದೆ ಎಂದರು.

ಮುಖಂಡ ಅಜಿತ್‌ಕುಮಾರ್ ನ್ಯಾಮತಿ ಮಾತನಾಡಿ, ಅನುಕಂಪ ಆಧಾರಿತ ನೌಕರಿ, ಮರಣಾನಂತರದ ಹಣಕಾಸು ಪರಿಹಾರ ಯೋಜನೆ, ಗೃಹಸಾಲ ಯೋಜನೆ, ಅಧಿಕಾರಿಗಳಿಗೆ ನಿಯಂತ್ರಿತವಾದಿ ಕೆಲಸದ ಅವಧಿ, ಪಿಂಚಣಿ ಯೋಜನೆ ಸುಧಾರಣೆ, ಏಕರೂಪ ತುಟ್ಟಿಭತ್ಯೆ, ಕುಟುಂಬ ಪಿಂಚಣಿಯ ಸುಧಾರಣೆ ಮೊದಲಾದ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಎಚ್. ನಾಗರಾಜ್, ಗ್ರಾಮೀಣ ಪ್ರದೇಶದ ಬ್ಯಾಂಕ್‌ಗಳ ಶಾಖೆ ಮುಚ್ಚುವ ಹುನ್ನಾರ ನಡೆದಿದೆ. ಇದಕ್ಕೆ ಪೂರಕವಾಗಿ ಕಿರು ಶಾಖೆಗಳನ್ನು ಆರಂಭಿಸಲಾಗುತ್ತಿದೆ ಎಂದು ಆರೋಪಿಸಿದರು.

ಶಂಭುಲಿಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರ ಬ್ಯಾಂಕಿಂಗ್ ನಿಯಮಾವಳಿಗಳ ಕಾಯ್ದೆಗೆ ತಿದ್ದುಪಡಿ ತರಲು ತುರಾತುರಿಯಲ್ಲಿದೆ. ಇಂತಹ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿದರು.

ಎಂ.ಜಿ. ವೆಂಕಟೇಶ್ ಮಾತನಾಡಿದರು. ವಾಮದೇವಯ್ಯ, ರಾಜ್‌ಕುಮಾರ್, ಗಿರಿಧರ ಕಲ್ಲಾಪುರ, ದತ್ತಾತ್ರೇಯ ಮೇಲಗಿರಿ, ಸುಜಯಾ ನಾಯಕ್, ಅನುರಾಧಾ ಮುತಾಲಿಕ್, ರೂಪಾರೆಡ್ಡಿ, ಸತ್ಯವತಿ, ರಾಮಮೂರ್ತಿ, ಎನ್.ಆರ್. ಮಹಾಲಿಂಗಪ್ಪ, ಎನ್.ಎಚ್. ಮಂಜುನಾಥ, ಚಕ್ರವರ್ತಿ, ಸಿ.ಎಸ್. ಮುರುಗೇಂದ್ರಪ್ಪ, ಕೆ. ನಾಗರಾಜ್, ನಾಗವೇಣಿ, ನರೇಂದ್ರಕುಮಾರ್, ಎನ್.ಎಸ್. ಉಡುಪ, ಶಿವಕುಮಾರ್, ಗುರುರಾಜ ಭಾಗವತ್, ಎಂ.ಎಸ್. ರವೀಂದ್ರನಾಥ್ ಪಾಲ್ಗೊಂಡಿದ್ದರು.

ಮುಷ್ಕರದ 2ನೇ ದಿನದ ಕಾರ್ಯಕ್ರಮ ಆ. 23ರಂದು ಮಂಡಿಪೇಟೆಯ ಕೆನರಾ ಬ್ಯಾಂಕ್ ಶಾಖೆ ಆವರಣದಲ್ಲಿ ನಡೆಯಲಿದೆ.

ನೌಕರರ ಮತ ಪ್ರದರ್ಶನ

ಅನೇಕ ಗಂಭೀರ ಜನ, ಕಾರ್ಮಿಕ ವಿರೋಧಿ ಪ್ರಸ್ತಾವ ಒಳಗೊಂಡ ಖಂಡೇಲವಾಲ ಸಮಿತಿಯ ಶಿಫಾರಸುಗಳನ್ನು ವಿರೋಧಿಸಿ, ಅಖಿಲ ಭಾರತ ಬ್ಯಾಂಕ್ ಮುಷ್ಕರ ಬೆಂಬಲಿಸಿ ಕೆನರಾ ಬ್ಯಾಂಕ್ ನೌಕರರು ಬುಧವಾರ ಮಂಡಿಪೇಟೆ ಶಾಖೆ ಮುಂದೆ ಮತಪ್ರದರ್ಶನ ನಡೆಸಿದರು.

ಕೆನರಾ ಬ್ಯಾಂಕ್ ಸಿಬ್ಬಂದಿ ಒಕ್ಕೂಟದ ಕರೆಯ ಮೇರೆಗೆ ನಡೆದ ಮತಪ್ರದರ್ಶನದಲ್ಲಿ, ನಗರದ ಹಾಗೂ ಗ್ರಾಮೀಣ ಪ್ರದೇಶದ ನೌಕರರು ಪಾಲ್ಗೊಂಡ್ದ್ದಿದರು.

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಾಡುವುದರಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆ ವಿದೇಶಿ ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಗಲಿದ್ದು, ಇದರಿಂದ ಜನಸಾಮಾನ್ಯರು ಸಮರ್ಪಕ, ಸದೃಢ ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾಗಲಿದ್ದಾರೆ ಎಂದು ಮತ ಪ್ರದರ್ಶನದ ನೇತೃತ್ವ ವಹಿಸಿದ್ದ ಹಿರೇಮಠ ತಿಳಿಸಿದರು.
ಪಿ. ಮೂರ್ತಿ, ಶಶಿ, ಕಲ್ಲಪ್ಪ, ಪರಮೇಶಿ, ಸುನಂದಮ್ಮ, ನಾಗಲಕ್ಷ್ಮೀ, ಭಾರತಿ, ರೇಣುಕಮ್ಮ, ಹನುಮಂತರಾವ್ ಇದ್ದರು.

ಚನ್ನಗಿರಿ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆ. 22ರಂದು ಮತ್ತು 23 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಪಟ್ಟಣದಲ್ಲಿರುವ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು ಬಾಗಿಲನ್ನು ತೆರೆಯದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಗ್ರಾಹಕರು ಪರದಾಡುವಂತಾಯಿತು.

ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿರುವ ಬ್ಯಾಂಕ್‌ಗಳು ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಬುಧವಾರ ಈ ಎಲ್ಲಾ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಇದರಿಂದ ಗ್ರಾಹಕರು ಬ್ಯಾಂಕ್‌ಗಳಿಗೆ ಬಂದು ಬಾಗಿಲು ಹಾಕಿರುವುದನ್ನು ನೋಡಿ ಗೊಣಗಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

ಹೊನ್ನಾಳಿ
ಕೇಂದ್ರ ಸರ್ಕಾರದ ಬ್ಯಾಂಕಿಂಗ್ ನೀತಿ ವಿರೋಧಿಸಿ ಬ್ಯಾಂಕ್ ನೌಕರರು ಬುಧವಾರ ಹಮ್ಮಿಕೊಂಡ ಬ್ಯಾಂಕ್ ಮುಷ್ಕರದಿಂದ ಗ್ರಾಹಕರು ಪರದಾಡಿದರು.

ಮುಷ್ಕರದ ಬಗ್ಗೆ ತಿಳಿದಿದ್ದ ಕೆಲವರಿಗೆ ಇದರ ಬಿಸಿ ತಟ್ಟಲಿಲ್ಲ. ಆದರೆ, ಮುಷ್ಕರದ ಬಗ್ಗೆ ಮಾಹಿತಿ ಇರದ  ಅನೇಕ ಗ್ರಾಹಕರು ಬ್ಯಾಂಕಿಂಗ್  ವ್ಯವಹಾರಕ್ಕಾಗಿ ತೀವ್ರ ತೊಂದರೆ ಅನುಭವಿಸಿದರು. ಬೇರೆ ಊರುಗಳಿಗೆ ಹಣ ಕಳುಹಿಸಲು, ಡಿಡಿ ತೆಗೆಸಲು ಗ್ರಾಹಕರು ಪರದಾಡಿದರು.

ಕೆಲವರು ಆರ್ಥಿಕ ವಹಿವಾಟಿಗಾಗಿ ಪಟ್ಟಣದ ಪತ್ತಿನ ಸಹಕಾರ ಸಂಘಗಳು, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳನ್ನು ಅವಲಂಬಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂಗಳು ಕೊಂಚ ಮಟ್ಟಿಗೆ ಹಣ ಪಡೆಯುವ ಗ್ರಾಹಕರ ಬೇಡಿಕೆ ತಣಿಸಿದವು.
ಪಟ್ಟಣದ ಎಸ್‌ಬಿಎಂ, ಎಸ್‌ಬಿಐ, ಕೆನರಾ, ಕರ್ಣಾಟಕ, ಸಿಂಡಿಕೇಟ್ ಬ್ಯಾಂಕ್‌ಗಳು ಬಾಗಿಲು ಹಾಕಿದ್ದವು. ಮುಷ್ಕರ ಶಾಂತಿಯುತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT