ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ನಿವಾಸಿಗಳಾದ 13 ಎಂಎಲ್‌ಸಿಗಳು

ಮೇಯರ್‌ ಚುನಾವಣೆಗಾಗಿ ವಿಳಾಸ ಬದಲಾಯಿಸಿದ ವಿಧಾನ ಪರಿಷತ್ತಿನ ಸದಸ್ಯರು
Last Updated 13 ಫೆಬ್ರುವರಿ 2020, 14:46 IST
ಅಕ್ಷರ ಗಾತ್ರ

ದಾವಣಗೆರೆ: ಪಾಲಿಕೆಯ ಅಧಿಕಾರ ಹಿಡಿಯಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಅದಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ 13 ಮಂದಿ ವಿಧಾನ ಪರಿಷತ್ತಿನ ಸದಸ್ಯರನ್ನು ದಾವಣಗೆರೆಯ ನಿವಾಸಿಗಳನ್ನಾಗಿ ಮಾಡಿದೆ. ಹಿಂಬಾಗಿಲ ಮೂಲಕ ಮತದಾನದ ಹಕ್ಕನ್ನು ಪಡೆಯಲು ಮಾಡಿದ ‘ವಿಳಾಸ ಬದಲಾವಣೆಯ ರಾಜಕೀಯ ನಾಟಕ’ಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿಬಂದಿವೆ.

2019ರ ನ.14ರಂದು ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಾಗ ಕಾಂಗ್ರೆಸ್‌ 22 ಮತ್ತು ಬಿಜೆಪಿ 17 ಸ್ಥಾನಗಳನ್ನು ಗಳಿಸಿದ್ದವು. ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಗೆದ್ದಿದ್ದ ನಾಲ್ವರನ್ನು ಬಿಜೆಪಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಸಂಖ್ಯಾ ಬಲವನ್ನು 21ಕ್ಕೆ ಏರಿಸಿಕೊಂಡಿತು. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿದ್ದ ಉದಯಕುಮಾರ್‌ನನ್ನು ಕಾಂಗ್ರೆಸ್‌ ಸೆಳೆದುಕೊಂಡಿತ್ತು. ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರ ಬಲ ಬಿಜೆಪಿಗಿದ್ದರೆ, ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಕೆ. ಅವರ ಬಲ ಕಾಂಗ್ರೆಸ್‌ಗಿತ್ತು.

ಸುಲಭದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್‌ ಯೋಜನೆ ಹಾಕಿಕೊಂಡರೆ, ಅಧಿಕಾರ ತಮಗೆ ದಕ್ಕಬೇಕು ಎಂದು ಬಿಜೆಪಿ ರಾಜಕೀಯ ಪಟ್ಟುಗಳನ್ನು ಹಾಕತೊಡಗಿತ್ತು. ದಾವಣಗೆರೆಯ ಜನರಿಗೆ ‘ಮುಖದರ್ಶನ’ ಮಾಡಿಸದ ರಾಜ್ಯದ ಬೇರೆ ಬೇರೆ ಜಿಲ್ಲೆಗಳ 13 ಮಂದಿ ವಿಧಾನ ಪರಿಷತ್‌ ಸದಸ್ಯರು, ಇದೀಗ ತಾವು ದಾವಣಗೆರೆ ನಗರದಲ್ಲಿ ವಾಸವಾಗಿರುವುದಾಗಿ ದಾಖಲೆ ತೋರಿಸಿ ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರು, ಬಾಗಲಕೋಟೆ, ಶಿವಮೊಗ್ಗ... ಹೀಗೆ ತಮ್ಮ ತವರಿನಲ್ಲಿ ತಂಗಿದ್ದರೂ ಇದೀಗ ಅವರು ದಾವಣಗೆರೆ ನಿವಾಸಿಗಳೆಂದು ಘೋಷಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

13 ಜನರ ಪೈಕಿ 8 ಮಂದಿ ಬಿಜೆಪಿಯವರಾದರೆ, 5 ಮಂದಿ ಕಾಂಗ್ರೆಸ್‌ನವರು ಆಗಿದ್ದಾರೆ. ಇದರಿಂದ ಮೇಯರ್‌ ಆಯ್ಕೆಗೆ ಮತ ಚಲಾಯಿಸಲು ಅರ್ಹರ ಸಂಖ್ಯೆ 62ಕ್ಕೇರಿದೆ. ಅಧಿಕಾರ ಹಿಡಿಯಲು 32 ಮತಗಳು ಬೇಕಾಗಿವೆ.

ಬಿಜೆಪಿ 31 ಮತ್ತು ಕಾಂಗ್ರೆಸ್‌ 30 ಮತಗಳನ್ನು ಹೊಂದಿದ್ದು, ಜೆಡಿಎಸ್‌ನಿಂದ ಆಯ್ಕೆಯಾಗಿರುವ ನೂರ್‌ಜಹಾನ್‌ ಬಿ ಯಾವ ಪಕ್ಷಕ್ಕೂ ಬೆಂಬಲ ಸೂಚಿಸಿಲ್ಲ. ಅವರು ಕಾಂಗ್ರೆಸ್‌ ಬೆಂಬಲಿಸಿದರೆ ‘ಟೈ’ ಆಗಲಿದೆ. ಬಿಜೆಪಿಗೆ ಬೆಂಬಲ ಸೂಚಿಸಿದರೆ ಅಥವಾ ತಟಸ್ಥರಾಗಿ ಉಳಿದರೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ನಡುವೆ ಪಕ್ಷೇತರರು ಮತ್ತೆ ತಮ್ಮ ಶಕ್ತಿ ತೋರಿಸುವ ಸಾಧ್ಯತೆ ತೆರೆದುಕೊಂಡಿದೆ.

ತಂತ್ರಗಾರಿಕೆ ಸಹಜ: ‘ಕಾಂಗ್ರೆಸ್‌ನವರೂ ಮಾಡಿದ್ದಾರೆ. ಬಿಜೆಪಿಯವರೂ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಅವರು ಇಲ್ಲಿಯ ನಿವಾಸಿಗಳಾದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನು ಮತ್ತೆ ವಿಶ್ಲೇಷಣೆ ಮಾಡಲು ಹೋಗಲ್ಲ. ಅವರೆಲ್ಲ ಸದ್ಯ ಇಲ್ಲಿನ ಮತದಾರರು ಎಂಬುದು ಸತ್ಯ’ ಎಂದು ಬಿಜೆಪಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್‌ ಜಾಧವ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದು ಕಾಂಗ್ರೆಸ್‌. ಹಾಗಾಗಿ ನ್ಯಾಯಯುತವಾಗಿಯೇ ನಮಗೆ ಅಧಿಕಾರ ಸಿಗಬೇಕು. ಅಧಿಕಾರಕ್ಕಾಗಿ ತಂತ್ರಗಾರಿಕೆ ಮಾಡುವುದು ಇದ್ದಿದ್ದೆ. ಜೆಡಿಎಸ್‌ ಹಾಗೂ ನಾವೂ ಮಿತ್ರರು. ಹಾಗಾಗಿ ಸಮಬಲಗೊಂಡರೆ ದೇವರ ದಯೆ ನಮ್ಮ ಕಡೆ ಇರುತ್ತದೆ’ ಎಂದು ಪಾಲಿಕೆ ಸದಸ್ಯ ಎ. ನಾಗರಾಜ ತಿಳಿಸಿದ್ದಾರೆ.

‘ನೈತಿಕ ಅಧಪತನ’
‘ಎರಡೂ ಪಕ್ಷಗಳ ನೈತಿಕ ಅಧಪತನವನ್ನು ಇದು ತೋರಿಸುತ್ತಿದೆ. ಜನತಂತ್ರಕ್ಕೆ ಕುತ್ತು ತರುವ ವಿಧಾನ ಇದು. ನ್ಯಾಯಯುತವಾಗಿ ಅಧಿಕಾರವನ್ನು ಪಡೆದುಕೊಳ್ಳಲಿ. ಅದರ ಬದಲು ಎಲ್ಲಿಯೋ ಇದ್ದವರನ್ನು ಇಲ್ಲಿಯ ನಿವಾಸಿಗಳು ಎಂದು ಮಾರ್ಪಾಡು ಮಾಡಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಇದು ಸಂವಿಧಾನಕ್ಕೆ ಮಾಡುವ ಅಪಚಾರ’ ಎಂದು ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ ಟೀಕಿಸಿದ್ದಾರೆ.

ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರ ದಾವಣಗೆರೆಯ ಹೊಸ ವಿಳಾಸ

* ಯು.ಬಿ. ವೆಂಕಟೇಶ್‌, ಎಸ್‌.ಎನ್‌. ಲೇಔಟ್‌, 2ನೇ ಮೇನ್‌, 5ನೇ ಕ್ರಾಸ್‌.

* ಮೋಹನ್‌ ಕುಮಾರ್‌ ಕೊಂಡಜ್ಜಿ, ಎಂಸಿಸಿ ಬಿ. ಬ್ಲಾಕ್‌.

* ಕೆ.ಸಿ. ಕೊಂಡಯ್ಯ, ಎಂಸಿಸಿ ಬಿ. ಬ್ಲಾಕ್‌ 7ನೇ ಮೇನ್, ಬಾಯ್ಸ್‌ ಹಾಸ್ಟೆಲ್‌ ರೋಡ್‌.

* ಎಚ್‌.ಎಂ. ರೇವಣ್ಣ, 6ನೇ ಮೇನ್‌, 14ನೇ ಕ್ರಾಸ್‌ ಸಿದ್ಧವೀರಪ್ಪ ಬಡಾವಣೆ.

* ಜಿ.ರಘು ಆಚಾರ್‌, 1ನೇ ಫ್ಲೋರ್‌, ಕೆ.ಆರ್‌. ರೋಡ್‌.

ವಿಧಾನ ಪರಿಷತ್‌ ಬಿಜೆಪಿ ಸದಸ್ಯರ ದಾವಣಗೆರೆಯ ಹೊಸ ವಿಳಾಸ

* ನಂಜುಂಡಿ ವಿಶ್ವಕರ್ಮ ಕೆ.ಪಿ, ರಿಂಗ್‌ರಸ್ತೆ ಹತ್ತಿರ, 9ನೇ ಕ್ರಾಸ್‌, ಶಾಂತಿನಗರ.

* ಲೆಹಾರ್‌ಸಿಂಗ್‌ ಸಿರಾಯ್‌, 4ನೇ ಮೇನ್, 12ನೇ ಕ್ರಾಸ್‌, ಎಸ್‌ಎಸ್‌ ಲೇಔಟ್‌ ಬಿ ಬ್ಲಾಕ್‌.

* ನಾರಾಯಣ ಸ್ವಾಮಿ ವೈ.ಎ, ಲಕ್ಷ್ಮೀಫ್ಲೋರ್‌ ಹತ್ತಿರ, ನಿಜಲಿಂಗಪ್ಪ ಬಡಾವಣೆ.

* ರವಿಕುಮಾರ್‌ ಎನ್‌., ಮೋತಿ ದೊಡ್ಡಪ್ಪ ಲೇಔಟ್‌, ಕೆಟಿಜೆನಗರ.

* ತೇಜಸ್ವಿನಿ ಗೌಡ, ಶಿಕ್ಷಕರ ಬಡಾವಣೆ, ವಿದ್ಯಾನಗರ.

* ಎಸ್‌. ರುದ್ರೇಗೌಡ, ಶಿವ ವಾಟರ್ ಸರ್ವಿಸ್‌ ಹತ್ತಿರ, ರಂಗನಾಥ ಬಡಾವಣೆ 5ನೇ ಕ್ರಾಸ್‌.

* ಡಿ.ಯು. ಮಲ್ಲಿಕಾರ್ಜುನ, ಬಂಟರ ಭವನ ಹತ್ತಿರ, ಕುಂದವಾಡ ರಸ್ತೆ, ಎಸ್‌.ಎಸ್‌. ಲೇಔಟ್‌.

* ಹನುಮಂತ ನಿರಾಣಿ, 18ನೇ ಕ್ರಾಸ್‌, ಬಿಐಇಟಿ ರಸ್ತೆ, ಆಂಜನೇಯ ಬಡಾವಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT