ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಸಮ್ಮೇಳನಕ್ಕೆ ₹15 ಲಕ್ಷ ಅನುದಾನ: ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್‌

Published 28 ಆಗಸ್ಟ್ 2023, 5:00 IST
Last Updated 28 ಆಗಸ್ಟ್ 2023, 5:00 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಅವರಿಂದ ₹ 15 ಲಕ್ಷ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.

ಇಲ್ಲಿನ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ ಹಿನ್ನೆಲೆಯ ಸಿದ್ಧತಾ ಸಭೆಯಲ್ಲಿ, ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.

‘ಪತ್ರಕರ್ತರ ಸಮ್ಮೇಳನಕ್ಕೆ ಈ ಹಿಂದೆ ಸರ್ಕಾರದಿಂದ ನಯಾಪೈಸೆ ಅನುದಾನ ನೀಡಿರಲಿಲ್ಲ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ₹15 ಲಕ್ಷ ನೆರವು ದೊರಕಿತ್ತು. ಈ ಸಮ್ಮೇಳನಕ್ಕೆ ಅನುದಾನದ ಜೊತೆಗೆ ಸಮ್ಮೇಳನಕ್ಕೆ ಪೂರಕ ಸೌಕರ್ಯ ಒದಗಿಸಲಾಗುವುದು’ ಎಂದು ಹೇಳಿದರು.

‘ಪ್ರಭಾವಿ ರಾಜಕಾರಣಿಗಳಿರುವ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪತ್ರಕರ್ತರ ಭವನ ಇಲ್ಲ. ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯಂತೆ ಭವನ ನಿರ್ಮಾಣ ಸಂಬಂಧದ ಕಡತವನ್ನು ಮುಂದಿನ ವಾರದ ಸಚಿವ ಸಂಪುಟದ ಸಭೆಗೆ ತರುವ ಪ್ರಯತ್ನ ಮಾಡಲಾಗುವುದು ಎಂದ ಅವರು ಮುಂದಿನ ವರ್ಷದಲ್ಲಿ ಸುಸಜ್ಜಿತ ಭವನವಾಗಲಿ’ ಎಂದು ಹಾರೈಸಿದರು.

ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ನೀಡುವ ಬೇಡಿಕೆ ಬಗ್ಗೆ ಸಿಎಂ ಸೂಚನೆಯಂತೆ ವಾರ್ತಾ ಲಾಖೆ ಆಯುಕ್ತರು ಸಮಗ್ರ ವರದಿ ಸಲ್ಲಿಸಿದ್ದಾರೆ. ಒಂದೆರಡು ತಿಂಗಳಲ್ಲಿ ಇದು ಜಾರಿಗೆ ಬರುವ ವಿಶ್ವಾಸವಿದೆ ಎಂದರು.

‘ಅರ್ಹ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಗಮನಕ್ಕೆ ತಂದು ವಾರ್ತಾ ಇಲಾಖೆ ನಿಯಮಾವಳಿ ಸರಳೀಕರಣ ಮಾಡಲಾಗುವುದು. ಪತ್ರಕರ್ತರು ಮಾನ್ಯತಾ ಪತ್ರ, ಮಾಸಾಶನ ಇತರೆ ಸೌಲಭ್ಯ ಪಡೆಯಲಾಗದಷ್ಟು ಈಗಿರುವ ವಾರ್ತಾ ಇಲಾಖೆ ನಿಯಮಗಳು ಕಠಿಣವಾಗಿವೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯ ಮೀಸಲು ಹಣದಲ್ಲಿ ಒಂದು ರೂಪಾಯಿ ಬಳಕೆಯಾಗಿಲ್ಲ’ ಎಂದರು.

‘ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪತ್ರಕರ್ತರ ಮಾಸಾಶನವನ್ನು ₹ 10,000ದಿಂದ ₹12,000‌ಕ್ಕೆ ಹೆಚ್ಚಿಸಿದ್ದು, ರಾಜ್ಯದಲ್ಲಿ 249 ಪತ್ರಕರ್ತರು ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಪತ್ರಕರ್ತರು ಮೃತರಾದಲ್ಲಿ ನೀಡುತ್ತಿದ್ದ ₹ 3000 ನೆರವನ್ನು ₹6,000ಕ್ಕೆ ಹೆಚ್ಚಿಸಿದ್ದು, 45 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ’ ಎಂದು ಹೇಳಿದರು.

ಕಾನಿಪ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾ ಘಟಕದ ಅಧ್ಯಕ್ಷ ಇ.ಎಂ. ಮಂಜುನಾಥ್ ಮಾತನಾಡಿದರು. ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಪೇಪರ್ ಚಂದ್ರಣ್ಣ, ಎಸ್.ಕೆ. ಒಡೆಯರ್, ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಫಕೃದ್ದೀನ್, ವಾರ್ತಾ ಇಲಾಖೆ ಅಧಿಕಾರಿ ಧನಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT