ಮಂಗಳವಾರ, ಜನವರಿ 25, 2022
28 °C
ಸ್ಮಾರ್ಟ್‌ ಸಿಟಿ ಅಡಿ ನಡೆಯುತ್ತಿವೆ ಕಾಮಗಾರಿಗಳು * 2022ರಲ್ಲಿ ಲೋಕಾರ್ಪಣೆಗೆ ಸಜ್ಜಾಗಲಿವೆ ಬಸ್ ನಿಲ್ದಾಣಗಳು

ಸ್ಮಾರ್ಟ್‌ ಸಿಟಿ : 4 ನಿಲ್ದಾಣಗಳ ಮೆರುಗು... 104 ತಂಗುದಾಣಗಳ ನೆರಳು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಸ್ಮಾರ್ಟ್‌ ಸಿಟಿಯಾಗುತ್ತಿರುವ ದಾವಣಗೆರೆ ನಗರದಲ್ಲಿ ಬಸ್‌ ನಿಲ್ದಾಣ, ಬಸ್‌ ತಂಗುದಾಣಗಳು ಉನ್ನತೀಕರಣಗೊಳ್ಳುತ್ತಿವೆ. ನಾಲ್ಕು ಬಸ್‌ ನಿಲ್ದಾಣಗಳಲ್ಲಿ ಮೂರು ಬಸ್‌ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಎರಡು ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿವೆ. ನಾಲ್ಕನೇ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

6 ಎಕರೆ 13 ಗುಂಟೆಯಲ್ಲಿ ನಿರ್ಮಾಣಗೊಳ್ಳುವ ಕೆಎಸ್‌ಆರ್‌ಟಿಸಿ ಹೊಸ ಬಸ್‌ನಿಲ್ದಾಣಕ್ಕೆ ₹ 120 ಕೋಟಿ ಮೀಸಲಿಡಲಾಗಿದೆ. 1988ರ ಡಿಸೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಾಣಗೊಂಡಿತ್ತು. 1991ರಲ್ಲಿ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗ ರಚನೆಗೊಂಡಿತ್ತು. ಈಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ಶೇ 75 ಅನುದಾನ ಹಾಗೂ ಕೆಎಸ್‌ಆರ್‌ಟಿಸಿಯ ಶೇ 25ರಷ್ಟು ಅನುದಾನದಲ್ಲಿ ಸ್ಮಾರ್ಟ್‌ ಬಸ್‌ನಿಲ್ದಾಣ ಆಗುತ್ತಿದೆ. ಹಾಗಾಗಿ ಇಲ್ಲಿರುವ ಬಸ್‌ ನಿಲ್ದಾಣ ತಾತ್ಕಾಲಿಕವಾಗಿ ಹೈಸ್ಕೂಲ್‌ ಫೀಲ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಶಾಪಿಂಗ್‌ ಮಾಲ್‌, ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳು, ಹೋಟೆಲ್‌, ರೆಸ್ಟೊರಂಟ್ ಒಳಗೊಂಡಂತೆ ವಿವಿಧ ವಾಣಿಜ್ಯ ವಹಿವಾಟುಗಳು ನಡೆಯಲಿವೆ. ಬಸ್‌ಗಳಿಗೆ ಬೇರೆಯೇ ಪ್ರವೇಶ ಮತ್ತು ಈ ವಾಣಿಜ್ಯ ಸಂಕೀರ್ಣಕ್ಕೆ ಬರಲು ಬೇರೆಯೇ ಪ್ರವೇಶ ರಸ್ತೆಗಳು ಇರಲಿವೆ. ಮೂರು ಮಹಡಿಗಳು ನಿರ್ಮಾಣಗೊಳ್ಳುತ್ತಿವೆ.

ನೆಲದೊಳಗಿನ ಅಂತಸ್ತಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರುತ್ತದೆ. ಸುಮಾರು 2,000 ಬೈಕ್‌, 300 ಕಾರ್‌ ನಿಲ್ಲಿಸುವಷ್ಟು ದೊಡ್ಡ ಪಾರ್ಕಿಂಗ್‌ ವ್ಯವಸ್ಥೆ ಇದಾಗಿದೆ. ಅದರ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅವಕಾಶ ನೀಡಲಾಗಿದೆ. 52 ಬಸ್‌ ಬೇ ಇರಲಿವೆ.

ರೈಲು ನಿಲ್ದಾಣದ ಬಳಿ ಇರುವ ಹಳೇ ಬಸ್‌ ನಿಲ್ದಾಣ ಎಂದು ಕರೆಯಲಾಗುವ ಖಾಸಗಿ ಬಸ್‌ ನಿಲ್ದಾಣವನ್ನು ₹ 25.41 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಹಳೇ ಬಸ್‌ ನಿಲ್ದಾಣಕ್ಕೆ ಸಂಬಂಧಿಸಿದಂತೆ 1.3 ಎಕರೆ ಜಾಗ ಇದೆ. ಅದರಲ್ಲಿ ‘ಜಿ’ ಪ್ಲಸ್‌ ಮಾದರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ. 100ರಷ್ಟು ದ್ವಿಚಕ್ರವಾಹನ ಹಾಗೂ 60 ಕಾರುಗಳ ಪಾರ್ಕಿಂಗ್‌ಗೆ ಕೆಳಗಡೆ ವ್ಯವಸ್ಥೆ ಮಾಡಲಾಗುತ್ತದೆ. ಅದರ ಮೇಲೆ 12 ಬಸ್‌ಗಳು ಸಾಲಾಗಿ ಒಂದೇ ಕಡೆ ನಿಲ್ಲುವಷ್ಟು ಉದ್ದದ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ. ಯಾವ ಊರಿನ ಬಸ್‌ ಎಲ್ಲಿ ನಿಲ್ಲುತ್ತದೆ ಎಂಬುದನ್ನು ತೋರಿಸಲು ಡಿಜಿಟಲ್‌ ಸೂಚನಾ ಫಲಕಗಳಿರುತ್ತವೆ. ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಬಸ್‌ ನಿಲ್ದಾಣದ ಆಗುಹೋಗುಗಳನ್ನು ಗಮನಿಸಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತದೆ.

2019ರಲ್ಲಿ ಆರಂಭಗೊಂಡಿರುವ ಈ ಕಾಮಗಾರಿ 2021ರ ಜನವರಿ ಅಂತ್ಯದೊಳಗೆ ಮುಗಿಯಬೇಕಿತ್ತು. ಕೊರೊನಾ ಇನ್ನಿತರ ಕಾರಣದಿಂದ ಒಂದು ವರ್ಷ ಮುಂದಕ್ಕೆ ಹೋಗಿದೆ. ಇನ್ನೆರಡು ತಿಂಗಳುಗಳಲ್ಲಿ ಅಂದರೆ 2022ರ ಫೆಬ್ರುವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹಳೇ ದಾವಣಗೆರೆ ಭಾಗದಲ್ಲಿ ಇರುವ ಜಗಳೂರಿಗೆ ಹೋಗುವ ಬಸ್‌ಗಳ ನಿಲ್ದಾಣವನ್ನು ₹ 3.2 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ಕಾಮಗಾರಿ ಬಹುತೇಕ ಮುಗಿದೆ. ವಿದ್ಯುತ್‌ ಸಂಪರ್ಕ ಸಹಿತ ಕೆಲವು ಸಣ್ಣಪುಟ್ಟ ಕೆಲಸಗಳು ನಡೆದರೆ ಲೋಕಾರ್ಪಣೆಗೆ ಸಿದ್ಧವಾಗಲಿದೆ. ಇನ್ನೊಂದು ತಿಂಗಳಲ್ಲಿ ಮುಗಿಯುವ ನಿರೀಕ್ಷೆ ಇದೆ.

ಮತ್ತೊಂದು ಬಸ್‌ ನಿಲ್ದಾಣ:

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ ಮತ್ತು ಜಗಳೂರಿಗೆ ಹೋಗುವ ಬಸ್‌ಗಳ ನಿಲ್ದಾಣಗಳು ಮೊದಲೇ ಇದ್ದವು. ದಾವಣಗೆರೆ ನಗರವು ಬೆಳೆಯುತ್ತಾ ಇರುವುದರಿಂದ ಇನ್ನೊಂದು ಬಸ್‌ ನಿಲ್ದಾಣದ ಅವಶ್ಯಕತೆ ಇದೆ ಎಂಬ ಕಾರಣಕ್ಕೆ ಬೇತೂರು ರಸ್ತೆಯಲ್ಲಿ ಒಂದು ಸೆಟಲೈಟ್‌ ಮಾದರಿಯಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲು ಸ್ಮಾರ್ಟ್‌ ಸಿಟಿಯಿಂದ ಯೋಜನೆ ಸಿದ್ಧವಾಗಿದೆ. ₹ 10 ಕೋಟಿ ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಹರಪನಹಳ್ಳಿ ಕಡೆಗೆ ಹೋಗುವ ಬಸ್‌ಗಳು ಬೇತೂರು ರಸ್ತೆಯ ಈ ಬಸ್‌ನಿಲ್ದಾಣಕ್ಕೆ ಬಂದು ಅಲ್ಲಿಂದಲೇ ಹಿಂದಿರುಗುವ ವ್ಯವಸ್ಥೆಯಾಗಲಿದೆ.

ತಂಗುದಾಣಗಳೂ ಸ್ಮಾರ್ಟ್‌:

ಸ್ಮಾರ್ಟ್‌ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ಪಾಲಿಕೆ ವ್ಯಾಪ್ತಿಯ 52 ಕಡೆಗಳಲ್ಲಿ ಬಸ್‌ ತಂಗುದಾಣಗಳು ನಿರ್ಮಾಣಗೊಂಡಿವೆ. ಕೆಲವು ಬಸ್‌ ತಂಗುದಾಣಗಳ ಪೇಂಟ್‌ ಹೋಗಿದ್ದು ಬಿಟ್ಟರೆ ಉಳಿದಂತೆ ಸುಸಜ್ಜಿತವಾಗಿವೆ. ಎರಡನೇ ಹಂತದಲ್ಲಿ ಮತ್ತೆ 52 ಬಸ್‌ ತಂಗುದಾಣಗಳು ನಿರ್ಮಾಣಗೊಳ್ಳಲಿವೆ. ಒಟ್ಟು 104 ಬಸ್‌ ತಂಗುದಾಣಗಳು ನಿರ್ಮಾಣಗೊಳ್ಳುವುದರಿಂದ ತಂಗುದಾಣಗಳ ಕೊರತೆ ನಗರದಲ್ಲಿ ಇಲ್ಲವಾಗಲಿದೆ.

ಬಸ್‌ ತಂಗುದಾಣಗಳು ಸರ್ಕಾರ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ನಿರ್ಮಾಣಗೊಳ್ಳುತ್ತಿದೆ. ಬೆನಕ ಅಟೊಮೊಬೈಲ್ಸ್‌ನವರು ಇದರ ಟೆಂಡರ್‌ ಪಡೆದಿದ್ದಾರೆ. 25 ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡಲಿದ್ದಾರೆ. ದಾವಣಗೆರೆಗೆ 104 ಬಸ್‌ ತಂಗುದಾಣಗಳು ಬೇಕಾದಷ್ಟು ಆಯಿತು. ಕೆಲವು ಕಡೆಗಳಲ್ಲಿ ನಮ್ಮ ಅಂಗಡಿ ಮುಂದೆ ತಂಗುದಾಣ ಬೇಡ, ನಮ್ಮ ಮನೆಯ ಪಕ್ಕದಲ್ಲಿ ಬೇಡ ಎಂದೆಲ್ಲ ಆಕ್ಷೇಪಗಳು ಬಂದಿವೆ. ಜನರು ಸಹಕಾರ ನೀಡಿದರೆ ಉಳಿದ 52 ತಂಗುದಾಣಗಳು ಕೂಡ ಶೀಘ್ರದಲ್ಲಿಯೇ ನಿರ್ಮಾಣಗೊಳ್ಳಲಿದೆ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

2022ರಲ್ಲಿ ಮೂರು ನಿಲ್ದಾಣ ಪೂರ್ಣ

‘ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ ನಿಲ್ದಾಣವು 2022ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಖಾಸಗಿ ಬಸ್‌ ನಿಲ್ದಾಣ ಫೆಬ್ರುವರಿಗೆ, ಜಗಳೂರು ಕಡೆಗೆ ಹೋಗುವ ಬಸ್‌ಗಳ ನಿಲ್ದಾಣ ಜನವರಿ ಅಂತ್ಯಕ್ಕೆ ಲೋಕಾರ್ಪಣೆಗೆ ಸಜ್ಜುಗೊಳ್ಳಲಿದೆ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾಹಿತಿ ನೀಡಿದರು.

‘ಕೆಎಸ್ಆರ್‌ಟಿಸಿಯ ಎರಡು ಬಸ್‌ ನಿಲ್ದಾಣಗಳನ್ನು ಅವರೇ ನಿರ್ಮಿಸುತ್ತಿದ್ದಾರೆ. ಶೇ 75ರಷ್ಟು ಅನುದಾನವನ್ನು ನಾವು ಒದಗಿಸಿದ್ದೇವೆ. ಉಳಿದ ಬಸ್‌ ನಿಲ್ದಾಣಗಳನ್ನು, ಇತರ ಕಾಮಗಾರಿಗಳನ್ನು ಸ್ಮಾರ್ಟ್‌ ಸಿಟಿಯಿಂದಲೇ ಟೆಂಡರ್‌ ಕರೆದು ನಿರ್ವಹಿಸಲಾಗುತ್ತಿದೆ’ ಎಂದು ವಿವರಿಸಿದರು.

ಯಾರು ಏನಂತಾರೆ?

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕಾಮಗಾರಿ ಶೇ 25ರಷ್ಟು ಆಗಿದೆ. ನಿಗದಿತ ಸಮಯದ ಒಳಗೆ ಕಾಮಗಾರಿ ಮುಗಿಸಿ ಕೆಎಸ್‌ಆರ್‌ಟಿಸಿಗೆ ಹಸ್ತಾಂತರವಾಗುವ ನಿರೀಕ್ಷೆ ಇದೆ.

ಸಿದ್ದೇಶ್ವರ ಹೆಬ್ಬಾಳ್‌, ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ

ಮೂರ್ನಾಲ್ಕು ವರ್ಷಗಳಿಂದ ಬಸ್‌ನಿಲ್ದಾಣಗಳ ಕಾಮಗಾರಿ ನಡೆಯುತ್ತಲೇ ಇದೆ. ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ಖಾಸಗಿ ಬಸ್‌ನಿಲ್ದಾಣಗಳ ಸಹಿತ ಎಲ್ಲವನ್ನು ಶೀಘ್ರದಲ್ಲಿ ಲೋಕಾರ್ಪಣೆ ಮಾಡಬೇಕು. ಜನರಿಗೆ ಉಪಯೋಗ ಆಗುವಂತೆ ನೋಡಿಕೊಳ್ಳಬೇಕು.

–ರವಿ ಕುಮಾರ್‌, ಸಾಮಾಜಿಕ ಕಾರ್ಯಕರ್ತ, ಲೆನಿನ್‌ನಗರ

 

ಇತ್ತೀಚೆಗೆ ಸ್ಮಾರ್ಟ್ ರೈಲು ನಿಲ್ದಾಣ ಕಾರ್ಯಾರಂಭಗೊಂಡು ದಾವಣಗೆರೆ ನಗರಕ್ಕೆ ಹೆಮ್ಮೆ ತಂದಿದೆ. ಅಂತೆಯೇ ಈ ಸ್ಮಾರ್ಟ್ ಬಸ್ ನಿಲ್ದಾಣವೂ ಆದಷ್ಟು ಬೇಗನೆ ಲೋಕಾರ್ಪಣೆ ಮಾಡಿದಲ್ಲಿ ಹೈಸ್ಕೂಲ್ ಫೀಲ್ಡ್‌ನಲ್ಲಿರುವ ಜನದಟ್ಟಣೆಗೊಂದು ಶಾಶ್ವತ ಪರಿಹಾರ ಸಿಗುತ್ತದೆ.

–ಮಂಜುಳಾ ಪ್ರಸಾದ್‌, ಬರಹಗಾರ್ತಿ, ದಾವಣಗೆರೆ

 

ಹೈಸ್ಕೂಲ್‌ ಫೀಲ್ಡ್‌ ಇರುವುದೇ ವಿವಿಧ ಕ್ರೀಡೆಗಳಿಗಾಗಿ. ಅದರಲ್ಲಿ ತಾತ್ಕಾಲಿಕವಾಗಿ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ತಾತ್ಕಾಲಿಕ ಹೋಗಿ ಶಾಶ್ವತ ಆಗದೇ ಇರಬೇಕು ಅಂದರೆ ಕೂಡಲೇ ಬಸ್‌ನಿಲ್ದಾಣಗಳ ಕಾಮಗಾರಿ ಮುಗಿಸಿ ಸ್ಥಳಾಂತರಿಸಬೇಕು. ಹೈಸ್ಕೂಲ್‌ ಫೀಲ್ಡ್‌ ಅನ್ನು ಕ್ರೀಡಾಪಟುಗಳ ಉಪಯೋಗಕ್ಕೆ ಬಿಟ್ಟುಕೊಡಬೇಕು.

–ಡಿ. ತಿಪ್ಪಣ್ಣ, ಚಿಂತಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು