ಬುಧವಾರ, ನವೆಂಬರ್ 30, 2022
17 °C
ವಿಶ್ವ ಹೃದಯ ದಿನದ ಅಂಗವಾಗಿ ಸಂವಾದ ಕಾರ್ಯಕ್ರಮ

ಒತ್ತಡದ ಜೀವನಶೈಲಿ ಹೃದ್ರೋಗಕ್ಕೆ ಬಾಗಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆಧುನಿಕ ಜೀವನ ಶೈಲಿ ಹಾಗೂ ಒತ್ತಡದ ಬದುಕಿನಿಂದಾಗಿ ಇಂದು ಬಹುತೇಕರಲ್ಲಿ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹದಿಹರೆಯದವರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ನಗರದ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನ ಹೃದಯ ತಜ್ಞ ಡಾ. ಬಿ. ಶ್ರೀನಿವಾಸ್ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಿಂದ ವಿಶ್ವ ಹೃದಯ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ತಜ್ಞ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದಾದ್ಯಂತ ಇಂದು ವರ್ಷಕ್ಕೆ ಹೃದಯ ಸಂಬಂಧಿ ಕಾಯಿಲೆಯಿಂದ 1.80 ಕೋಟಿ ಜನರು ಮೃತಪಡುತ್ತಿದ್ದಾರೆ. ಭಾರತದಲ್ಲಿ ಈ ಪ್ರಮಾಣ ಶೇ 20ರಷ್ಟು. ಶೇ 60ರಷ್ಟು ಸಾವಿನ ಪ್ರಮಾಣ 50 ವರ್ಷದೊಳಗಿನವರಲ್ಲಿ, ಶೇ 25ರಷ್ಟು 40 ವರ್ಷದೊಳಗಿನವರಲ್ಲಿ ಕಂಡುಬರುತ್ತಿದೆ. ರಕ್ತದೊತ್ತಡ, ಮಧುಮೇಹ, ಕೊಬ್ಬು, ಜಂಕ್‌ಪುಡ್‌, ಉಪ್ಪಿನಂಶದ ಪದಾರ್ಥಗಳ ಹೆಚ್ಚು ಸೇವನೆಯಿಂದ ಹೃದಯದ ರೋಗಗಳು ಬರುತ್ತವೆ. ಶೇ 15ರಷ್ಟು ಸಾವು ಆಸ್ಪತ್ರೆಗೆ ಹೋಗುವ ಮುನ್ನವೇ ಸಂಭವಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೃದಯದ ಬಡಿತ ಹೆಚ್ಚಾದಾಗ ಕಾರ್ಡಿಯಾಕ್‌ ಅರೆಸ್ಟ್‌ ಸಂಭವಿಸುತ್ತದೆ. ಒತ್ತಡದಲ್ಲಿ ಕೆಲಸ ಮಾಡುವವರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಶೇ 5ರಷ್ಟು ಹೆಚ್ಚು ಇರುತ್ತದೆ ಎಂದು ಹೇಳಿದರು.

ಜಿಮ್‌ನಲ್ಲಿ ಇದ್ದಾಗ ಅಥವಾ ಹೆಚ್ಚು ಕೆಲಸ ಮಾಡುತ್ತಿದ್ದಾಗ ಹಾರ್ಟ್‌ ಅಟ್ಯಾಕ್‌ ಆಗಲು ಒತ್ತಡವೇ ಕಾರಣ. ಕೋವಿಡ್ ಬಂದ ನಂತರ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಕೋವಿಡ್ ಬಂದು ಏಳೆಂಟು ತಿಂಗಳು ಹೃದಯ ಸಂಬಂಧಿ ಹಾಗೂ ಇತರೆ ಕಾಯಿಲೆ ಬರುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಂತಹವರಿಗೆ ಹೃದ್ರೋಗ ಬರುತ್ತದೆ ಎಂದು ಹೇಳಲು ಆಗದು. ದೇಹ ಪ್ರಕೃತಿ ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ. ರಕ್ತದೊತ್ತಡ, ಮಧುಮೇಹ ಇರುವವರು ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಮಾನ್ಯ ಜನರು ಎರಡು ವರ್ಷಕ್ಕೊಮ್ಮೆ ತಪಾಸಣೆ ಮಾಡಬೇಕು. ಎದೆನೋವು ಬಂದು ಬೆವರುವುದು, ಸುಸ್ತಾಗಿ ನಡೆಯುವುದು ಕಷ್ಟವಾದರೆ ಇಸಿಜಿ ಮಾಡುವುದು ಉತ್ತಮ. ಹೃದಯದ ಬಡಿತ 100ಕ್ಕಿಂತ ಹೆಚ್ಚು ಇರಬಾರದು‌ ಎಂದು ಹೇಳಿದರು. 

ಸಮತೋಲನ ಆಹಾರ ಸೇವಿಸಿ:

ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಲು ಸಮತೋಲನ ಆಹಾರ, ಮನೆಯ ಊಟವನ್ನೇ ಹೆಚ್ಚು ಬಳಸಬೇಕು. ಜಿಮ್‍ನಲ್ಲಿ ಅತಿಯಾದ ವ್ಯಾಯಾಮ ಮಾಡುವುದಕ್ಕಿಂತ ಸರಳ ವ್ಯಾಯಾಮ ಮಾಡಬೇಕು. 45 ನಿಮಿಷ ನಡಿಗೆ ಅತ್ಯುತ್ತಮ. ಯೋಗ ಮಾಡಿದಲ್ಲಿ ಒತ್ತಡ ನಿವಾರಣೆಗೆ ಅನುಕೂಲ ಎಂದು ಹೃದಯ ತಜ್ಞ ಡಾ.ಪಿ. ಮಲ್ಲೇಶ್ ಸಲಹೆ ನೀಡಿದರು. 

ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್ ಸಂಚಾಲಕ ಡಾ. ಪ್ರಶಾಂತ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಮಾಜಿ ಅಧ್ಯಕ್ಷ ಬಸವರಾಜ ದೊಡ್ಮನಿ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದವಾಡ, ಪತ್ರಕರ್ತ ತಾರಾನಾಥ್ ಹಾಗೂ ಪದಾಧಿಕಾರಿಗಳು ಇದ್ದರು.

ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಉಳಿಯವುದು ಹೇಗೆ?

*ಕೊಬ್ಬಿನ ಮಟ್ಟ ಕಡಿಮೆ ಮಾಡಿಕೊಳ್ಳುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣದಲ್ಲಿಡಬೇಕು

* ಧೂಮಪಾನ, ತಂಬಾಕು ಸೇವನೆ, ಮದ್ಯಪಾನ ಮಾಡಬಾರದು

* ಪ್ರತಿ ದಿನ 6-9ಗಂಟೆ ನಿದ್ದೆ ಮಾಡುವುದರಿಂದ ಒತ್ತಡ ನಿವಾರಣೆ ಸಾಧ್ಯ.

* ಮಾಂಸ, ಕೊಬ್ಬಿನ ಅಂಶವಿರುವ ಆಹಾರದಿಂದ ದೂರ ಇರಬೇಕು.

* ಸ್ಟಿರಾಯ್ಡ್‌ ಸೇರಿ ಶಕ್ತಿ ವರ್ಧಕ ಪಾನೀಯಗಳು ಹಾನಿಕಾರಕ

* ಹೆಚ್ಚು ವ್ಯಾಮಾಯಕ್ಕಿಂತ ಲಘು ನಡಿಗೆ, ಯೋಗ ಅಗತ್ಯ

ಹೃದಯಾಘಾತದ ಲಕ್ಷಣ:

ಹಠಾತ್ ಎದೆ ನೋವು, ಭುಜ, ಕತ್ತಿನ ಎಡಭಾಗದಲ್ಲಿ ನೋವು, ಉಸಿರಾಟ ಕಷ್ಟವಾಗುವುದು, ಬೆವರುವುದು, ವಾಕರಿಕೆ, ವಾಂತಿ, ಸ್ವಲ್ಪ ದೂರವೂ ನಡೆಯಲು ಆಗದಿರುವುದು ಹೃದಯಘಾತದ ಲಕ್ಷಣ. ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ. ಬಿ. ಶ್ರೀನಿವಾಸ್ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು