ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ: ಗ್ರಾಮದ ಮಧ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕ

ರೋಗ ಹರಡುವ ಆತಂಕ; ಘಟಕಕ್ಕೆ ಬಾಗವಾಡಿ ಗ್ರಾಮಸ್ಥರ ವಿರೋಧ
Last Updated 1 ಜನವರಿ 2023, 6:14 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗವಾಡಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಗ್ರಾಮದಿಂದ 500 ಮೀಟರ್ ದೂರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಗ್ರಾಮದೊಳಗೆ ಘಟಕ ನಿರ್ಮಿಸಲಾಗುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ.

ಗ್ರಾಮದೊಳಗೆ ಘಟಕ ನಿರ್ಮಿಸಿದರೆ ಜನರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಈ ಬಗ್ಗೆ ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಕೆಂಚಪ್ಪ ದೂರಿದರು.

‘ಗ್ರಾಮದ ಕೆರೆಯ 10 ಮೀಟರ್ ದೂರದಲ್ಲಿಯೇ ಘಟಕ ನಿರ್ಮಿಸಲಾಗುತ್ತಿದೆ. ತುಂಗಭದ್ರಾ ನದಿಗೆ ಗ್ರಾಮಸ್ಥರು ಜಾನುವಾರಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು ಹೋಗುತ್ತಾರೆ. ಮಳೆಗಾಲದಲ್ಲಿ ಮಳೆ ಜಾಸ್ತಿಯಾದರೆ ತ್ಯಾಜ್ಯ ಕೆರೆಗೆ ಸೇರುತ್ತವೆ. ಜಲಚರಗಳಿಗೆ ತೊಂದರೆಯಾಗುತ್ತದೆ. ಪರಿಸರ ಹಾಳಾಗುವುದರಿಂದ ದೂರದ ಸ್ಥಳದಲ್ಲಿ ಘಟಕ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ಗ್ರಾಮದ ಪ್ರದೀಪ್.

‘ಈ ಘಟಕಕ್ಕೆ ಹೊಂದಿಕೊಂಡಂತೆ 2 ಎಕರೆ ಪ್ರದೇಶದಲ್ಲಿ ಶಾಲಾ ಮೈದಾನವಿದೆ. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾದರೆ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಜಾಗದ ಪಕ್ಕದಲ್ಲಿಯೇ ಸ್ಮಶಾನ ಇದೆ. ಸುತ್ತಲಿನ ಏಳು ಗ್ರಾಮಗಳ ಕಸವನ್ನು ನಮ್ಮೂರಿಗೆ ತಂದು ಹಾಕುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆ ಎಸ್‍ಡಿಎಂಸಿ ಅಧ್ಯಕ್ಷ ದೇವರಾಜ್.

‘ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುನ್ನ ಗ್ರಾಮಸಭೆ ನಡೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಬೇಡ ಎಂದು ಅರ್ಜಿ ಕೊಟ್ಟರೂ ಪಂಚಾಯಿತಿಯವರು ನಮ್ಮ ಗಮನಕ್ಕೆ ತರದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ಗ್ರಾಮದ ಜನರಿಗೆ ತೊಂದರೆಯಾಗುತ್ತದೆ. ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಗ್ರಾಮದ ಕೃಷ್ಣಮೂರ್ತಿ ಆಗ್ರಹಿಸಿದರು.

‘ಬಾಗವಾಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಆ ಜಾಗದಲ್ಲಿ ಗಿಡಗಳನ್ನು ನೆಟ್ಟು ಉದ್ಯಾನ ನಿರ್ಮಿಸಲಾಗುವುದು. ಇದರಿಂದ ಗ್ರಾಮದ ಸೌಂದರ್ಯ ಹೆಚ್ಚುತ್ತದೆ. ಕೆಲವು ಕಡೆ ಗ್ರಾಮದ ಮಧ್ಯದಲ್ಲಿ ಈ ಘಟಕಗಳನ್ನು ನಿರ್ಮಿಸಿದ್ದೇವೆ. ‌ಚೀಲೂರು, ಕೂಲಂಬಿಯಲ್ಲಿ ಗ್ರಾಮದ ಮಧ್ಯ ಘಟಕ ಇ‌ವೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ ಹೇಳಿದರು.

***

ಗ್ರಾಮ ಪಂಚಾಯಿತಿ ಗ್ರಾಮ ಸಭೆ ನಡೆಸದೇ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ. ಜನರಿಗೆ ಆರೋಗ್ಯ ಸಮಸ್ಯೆ ಬಂದರೆ ಯಾರು ಹೊಣೆ? ಕೂಡಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಬೇಕು.

–ಕೃಷ್ಣಮೂರ್ತಿ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT