ಭಾನುವಾರ, ಮಾರ್ಚ್ 29, 2020
19 °C
‘ಪ್ರಜಾವಾಣಿ’ ಕಾಳಜಿ * ದವಸ, ಧಾನ್ಯ ಒದಗಿಸಲು ಜಿಲ್ಲಾಡಳಿತವೂ ಸಜ್ಜು

ದಾವಣಗೆರೆ: ಕೂಲಿ ಕಾರ್ಮಿಕರ ಪಟ್ಟಿ ಮಾಡುತ್ತಿರುವ ಜಿಲ್ಲಾಡಳಿತ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಟ್ಟೆಯ ಬಲವನ್ನೇ ನಂಬಿ ಬದುಕುತ್ತಿದ್ದ ಜನರು ಲಾಕ್‌ಡೌನ್‌ನಿಂದಾಗಿ ಮನೆ ಸೇರಿದ್ದಾರೆ. ಕೆಲಸವಿಲ್ಲದೇ ಹೊತ್ತಿನ ತುತ್ತಿಗೂ ತತ್ವಾರ ಬರುವ ಭೀತಿ ಎದುರಾಗಿತ್ತು. ಯಾರೂ ಹಸಿವಿನಿಂದ ಮಲಗದೇ ಇರಲು ದವಸ, ಧಾನ್ಯ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಬೀಡಿ ಕಾರ್ಮಿಕರು, ಗಾರೆ, ಸೆಂಟ್ರಿಂಗ್‌ ಸೇರಿ ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಹೊರೆ ಹೊರುವವರು, ಲೋಡಿಂಗ್‌ನವರು, ಮಂಡಕ್ಕಿ ಭಟ್ಟಿ ಕೆಲಸಗಾರರು, ಹಮಾಲಿಗಳು, ಗುಜರಿ ಕೆಲಸದವರು, ಬೀದಿ ವ್ಯಾಪಾರಸ್ಥರು, ಆಟೊ ಚಾಲಕರು ಹೀಗೆ ಹತ್ತು ಹಲವು ಕೆಲಸ ಮಾಡುವವರು ಕಾರ್ಮಿಕರು ನಿತ್ಯದ ದುಡಿಮೆಯನ್ನೇ ನಂಬಿ ಬದುಕುವವರು. ಲಾಕ್‌ಡೌನ್‌ನಿಂದಾಗಿ ಕೆಲಸಕ್ಕೆ ಹೋಗದಂತಾಗಿರುವ ಇಂಥ ಕಾರ್ಮಿಕರನ್ನು ಪಟ್ಟಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

‘ಜನತಾ ಕರ್ಫ್ಯೂ ಇದ್ದ ಮಾರ್ಚ್‌ 22ರಿಂದ ಇಲ್ಲಿಯವರೆಗೆ ಯಾರೂ ಹೊರಗೆ ಬಂದಿಲ್ಲ. ಏಪ್ರಿಲ್‌ 14ರ ವರೆಗೆ ಇದೇ ರೀತಿ ಇರಬೇಕು ಎಂದರೆ ಸಾವಿರಾರು ಕಾರ್ಮಿಕರ ಬದುಕು ಬೀದಿಗೆ ಬೀಳುತ್ತದೆ. ಎರಡು ತಿಂಗಳ ಪಡಿತರ ಮೊದಲೇ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಯಾವಾಗ ಕೊಡುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಕೊರೊನಾಕ್ಕೆ ಹೆದರಿ ಜನ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುವ ಮೊದಲು ಸರ್ಕಾರ ಆಹಾರ ಒದಗಿಸಬೇಕು’ ಎನ್ನುತ್ತಾರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ.

‘ಜನ ಸಂದಣಿ ಆಗದಂತೆ ಪಡಿತರ ವಿತರಣೆಗೆ ಕೂಡಲೇ ವ್ಯವಸ್ಥೆ ಮಾಡಬೇಕು. ಅದಕ್ಕಾಗಿಯೇ ಪ್ರತಿ ಏರಿಯಾದಲ್ಲಿ ಸ್ವಯಂಸೇವಕರನ್ನು ನೇಮಕ ಮಾಡಲಿ. ನಾವು ಸ್ವಯಂ ಸೇವಕರಾಗಿ ಕೆಲಸ ಮಾಡಲು ತಯಾರಿದ್ದೇವೆ’ ಎಂಬುದು ಅವರ ಸಲಹೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಆಹಾರ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ ಮರುದಿನವೇ ಅದು ರದ್ದಾಗಿದೆ. ಮೊದಲು ಮಾಡಿದ ಘೋಷಣೆಯಂತೆ ನಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯಲ್ಲಿ ಕೆಲವು ಗುತ್ತಿಗೆ ನೌಕರರು ದೂರದ ಊರುಗಳಿಂದ ಬರುವವರಾಗಿದ್ದಾರೆ. ಅವರಿಗೆ ವಾಹನ ಮತ್ತು ಊಟದ ವ್ಯವಸ್ಥೆ ಮಾಡಬೇಕು ಎಂಬುದು ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಕೆ.ಎಚ್. ಅವರ ಒತ್ತಾಯ.

‘ಬಡವರ, ಕಾರ್ಮಿಕರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ನಮ್ಮ ಜತೆ ಮಾತನಾಡಿದ್ದಾರೆ. ಅವರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ತಂಡಗಳನ್ನು ಮಾಡಲಾಗಿದೆ. ದಾನಿಗಳೂ ಮುಂದೆ ಬಂದಿದ್ದಾರೆ. ಊಟಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು