ಸೋಮವಾರ, ಜೂನ್ 21, 2021
28 °C
ಕೊರೊನಾ ಸೋಂಕಿನ ಕೊಂಡಿ ಮುರಿಯಲು ಜಿಲ್ಲಾಡಳಿತ ಸಜ್ಜು

ಕೃಷಿ ಚಟುವಟಿಕೆ, ಕಾರ್ಮಿಕರಿಗೆ ‘ಹಸಿರು’ ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 14 ದಿನಗಳ ಕರ್ಫ್ಯೂ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಚಾಚೂ ತಪ್ಪದೇ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಕೊರೊನಾ ಸೋಂಕಿನ ಕೊಂಡಿಯನ್ನು ಮುರಿಯDaಲು ಜಿಲ್ಲಾಡಳಿತ ಸಜ್ಜಾಗಿದೆ.

ಕೃಷಿ ಚಟುವಟಿಕೆಗೆ ಗ್ರೀನ್ ಪಾಸ್ ವಿತರಣೆ ಮಾಡಲಿದ್ದು, ಕಟ್ಟಡ ಕಾರ್ಮಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಆನ್‌ಲೈನ್ ಪಾಠ ಬೋಧಿಸುವ ಶಿಕ್ಷಕರಿಗೂ ಅನುಮತಿ ನೀಡಲಾಗಿದೆ. ಕೃಷಿ, ತೋಟಗಾರಿಕೆ ಉತ್ಪನ್ನಗಳು, ಕೃಷಿ ಪರಿಕರಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇಲ್ಲ.

‘ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಇದನ್ನು ಪತ್ತೆಹಚ್ಚುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಈಗಾಗಲೆ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು: ‘ಜಿಲ್ಲೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಸದ್ಯ ಜನರು ಭಯ ಬೀಳುವ ಪರಿಸ್ಥಿತಿ ಇಲ್ಲ. ಕೋವಿಡ್ ನಿರ್ವಹಣೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸಜ್ಜಾಗಿವೆ. ಕೋವಿಡ್ ಕೇರ್ ಸೆಂಟರ್ ಕೂಡ ಪ್ರಾರಂಭಿಸಲಾಗಿದೆ.  ಬೆಡ್ ವ್ಯವಸ್ಥೆ, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣ ಬಂದರೂ, ನಿಭಾಯಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ’
ಎಂದರು.

‘ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಲಭ್ಯತೆ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು ಸೇರಿರುವುದರಿಂದ, ರೈತ ಸಂಪರ್ಕ ಕೇಂದ್ರಗಳು, ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಅಗತ್ಯ ಪರಿಕರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾಹಿತಿ
ನೀಡಿದರು.

‘ಕೃಷಿ ಪರಿಕರ ವಿತರಣೆಗಾಗಿ ಗ್ರೀನ್ ಪಾಸ್ (ಅನುಮತಿ ಪತ್ರ) ಗಳನ್ನು ಅಗತ್ಯವಿದ್ದಲ್ಲಿ ಅಧಿಕೃತ ಮಾರಾಟ
ಗಾರರು, ವಿತರಕರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ನೀಡಿರುವ ಸೂಚನೆಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸುವ ಮಾರಾಟಗಾರರು, ವಿತರಕರ ಪರವಾನಗಿಯನ್ನು ರದ್ದುಗೊಳಿಸಲಾಗುವುದು’ ಎಂದು ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಅವಕಾಶ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಮೇ 12ರವರೆಗೆ ಕಟ್ಟಡ ಕಾರ್ಮಿಕರು, ಸರ್ಕಾರಿ ರಸ್ತೆ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ತಮ್ಮ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಅಂತಹ ಕಾರ್ಮಿಕರು ಕಟ್ಟಡ ಕಾಮಗಾರಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದಿರುವ ಅನುಮತಿ ಪತ್ರದ ದಾಖಲೆ ಪ್ರತಿ ಹೊಂದಿರಬೇಕು. ಸರ್ಕಾರಿ ರಸ್ತೆ, ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು, ಆಯಾ ಕಾಮಗಾರಿ ಟೆಂಡರ್ ಗುತ್ತಿಗೆ ಪಡೆದಿರುವವರು ಹೊಂದಿರುವ ಆದೇಶದ ಪತ್ರದ ಪ್ರತಿ ದಾಖಲೆ ತೋರಿಸಿದಲ್ಲಿ ಕಾರ್ಮಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ವಿದೇಶ ಅಥವಾ ಬೇರೆ ರಾಜ್ಯಗಳಿಗೆ ಪ್ರಯಾಣಿಸುವವರು ಸಂಬಂಧಪಟ್ಟ ರೈಲು ಟಿಕೇಟ್ ಹೊಂದಿರಬೇಕು. ಮೆಡಿಕಲ್, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕಾಲೇಜುಗಳ ಬೊಧಕರು ಆನ್‍ಲೈನ್‍ನಲ್ಲಿ ಪಾಠ ಮಾಡುವ ಸಲುವಾಗಿ ಕಾಲೇಜುಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು, ಇದಕ್ಕಾಗಿ ಅವರು ಸಂಬಂಧಪಟ್ಟ ಸಂಸ್ಥೆಯಿಂದ ಪಡೆದಿರುವ ಅನುಮತಿ ಮತ್ತು ಗುರುತಿನ ಪತ್ರವನ್ನು ತೋರಿಸಬೇಕಾಗುತ್ತದೆ ಎಂದರು.

‘ಕೋವಿಡ್‌ಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಈ ಬಾರಿ ಯಾವುದೇ ಪಾಸ್ ನೀಡುವುದಿಲ್ಲ. ಆಸ್ಪತ್ರೆ, ಕಾರ್ಖಾನೆ ಮತ್ತಿತರ ಸೇವೆಗೆ ಅಡ್ಡಿ ಇರುವುದಿಲ್ಲ. ಎಪಿಎಂಸಿ ವ್ಯಾಪ್ತಿಯಲ್ಲಿ ಟ್ರೇಡಿಂಗ್ ಲೋಡಿಂಗ್, ಅನ್‍ಲೋಡಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು. ಅನಾವಶ್ಯಕವಾಗಿ ಓಡಾಟ ಮಾಡುವವರು, ವಾಹನಗಳಲ್ಲಿ ಸಂಚರಿಸುವವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ನಿರ್ವಹಣಾ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಆರ್‌ಟಿಒ ಶ್ರೀಧರ್ ಮಲ್ನಾಡ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಧೂಡಾ ಆಯುಕ್ತ ಕುಮಾರಾಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ
ಇದ್ದರು.

 50ಕ್ಕಿಂತ ಹೆಚ್ಚು ಜನರಿದ್ದರೆ ದಂಡ

ಮದುವೆಗಳಲ್ಲಿ 50 ಜನಕ್ಕಿಂತ ಹೆಚ್ಚು ಸೇರಬಾರದು. ಅಧಿಕಾರಿಗಳು ಮದುವೆ ನಡೆಯುವ ಸ್ಥಳಕ್ಕೆ ತೆರಳಿ, ವಿಡಿಯೊ ಮಾಡಿಕೊಂಡು, ಉಲ್ಲಂಘನೆ ಕಂಡುಬಂದಲ್ಲಿ ಎಫ್‍ಐಆರ್ ದಾಖಲಿಸುವರು ಅಲ್ಲದೇ ದಂಡವನ್ನೂ ವಿಧಿಸುವರು. ಹೀಗಾಗಿ ಯಾರೂ ಕಾನೂನು ಉಲ್ಲಂಘನೆ ಮಾಡುವ ದುಸ್ಸಾಹಸಕ್ಕೆ ಕೈಹಾಕಬೇಡಿ, ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರೂ ಸಹಕರಿಸಬೇಕು’ ಎಂದು ಮಹಾಂತೇಶ ಬೀಳಗಿ ತಿಳಿಸಿದರು. 

ಗ್ರಾಮಗಳಲ್ಲಿ ಡಂಗುರ

‘ ಕೋವಿಡ್ ಸೋಂಕು ಹೆಚ್ಚು ಇರುವ ರಾಜ್ಯ, ಜಿಲ್ಲೆಗಳಿಂದ ನಿಮ್ಮ ಊರಿಗೆ, ಓಣಿಗೆ, ಮನೆ ಪಕ್ಕಕ್ಕೆ ಯಾರಾದರೂ ಬಂದಿದ್ದಲ್ಲಿ, ಅಂತಹವರಲ್ಲಿ ರೋಗ ಲಕ್ಷಣಗಳಿರುವುದು ಕಂಡುಬಂದ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂತಹವರಿಗೆ ಕೋವಿಡ್ ಟೆಸ್ಟ್ ಮಾಡಿ, ಅಗತ್ಯ ಚಿಕಿತ್ಸೆ ಕೊಡಲಾಗುವುದು. ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು’ ಎಂಬುದಾಗಿ ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಡಂಗುರ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಹೇಳಿದ್ದು...

*ಖಾಸಗಿ ಆಸ್ಪತ್ರೆ ವೈದ್ಯಕೀಯ ಕಾಲೇಜಿನಲ್ಲಿ ಶೇ 75ರಷ್ಟು ಬೆಡ್ ಮೀಸಲು ಕಡ್ಡಾಯ ಮಾಡಬೇಕು. ಜಿಲ್ಲಾಸ್ಪತ್ರೆಯಿಂದ ರೆಫರಲ್ ಲೆಟರ್ ಪಡೆದವರಿಗೆ ಸೇವೆ ನೀಡುವುದು ಕಡ್ಡಾಯ.

*ಕೈಗಾರಿಕೆ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುವುದು ಆಯಾ ಕೈಗಾರಿಕೆ ಮಾಲೀಕರ ಜವಾಬ್ದಾರಿ. ಟೆಲಿಕಾಂ, ಇಂಟರ್ನೆಟ್ ಸರ್ವೀಸ್ ಸೇವೆಗೆ ತೆರಳುವರಿಗೆ ಅವಕಾಶ

*ಜಿಲ್ಲಾಡಳಿತ ಅನುಮೋದನೆ ನೀಡಿದ ಆಸ್ಪತ್ರೆಗಳಲ್ಲಿ ಮಾತ್ರ ರೆಮ್‌ಡಿಸಿವಿರ್ ನೀಡಬೇಕು. ರೆಮ್‌ಡಿಸಿವಿರ್ ಪ್ರಿಕ್ಸಿಪ್ಷನ್ ಬರೆಯುವ ಖಾಸಗಿ ವೈದ್ಯರ ವಿರುದ್ಧ ಕಾನೂನುಕ್ರಮ 

*ಅವಶ್ಯಕತೆ ಇಲ್ಲದೇ ಹೊರಗೆ ಬಂದರೆ ಪೊಲೀಸರಿಂದ ಲಾಠಿ ಏಟು ಬೀಳುವುದು ಮಾತ್ರವಲ್ಲದೇ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ 

*ಬೆಳಿಗ್ಗೆ 6ರಿಂದ 10ರವರಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು